ಬೆಂಗಳೂರು(ಜು.03): ಲಾಕ್‌ಡೌನ್‌ ನಡುವೆಯೂ ರೈಲ್ವೆ ಕಾಮಗಾರಿಗಳಿಗೆ ವೇಗ ನೀಡಿರುವ ನೈಋುತ್ಯ ರೈಲ್ವೆ, ಒಂದೊಂದೇ ಯೋಜನೆಗಳನ್ನು ಪೂರ್ಣಗೊಳಿಸುತ್ತಿದೆ. ಅದರಂತೆ ಇದೀಗ ಬೈಯಪ್ಪನಹಳ್ಳಿ ಮೂರನೇ ಕೋಚಿಂಗ್‌ ಟರ್ಮಿನಲ್‌ ಪೂರ್ಣಗೊಂಡಿದ್ದು, ಸಾರ್ವಜನಿಕ ಸೇವೆ ಸಿದ್ಧಗೊಂಡಿದೆ.

ಬೆಂಗಳೂರಿನಿಂದ ಹೊರರಾಜ್ಯಗಳಿಗೆ ತೆರಳುವ ರೈಲುಗಳ ಸಂಖ್ಯೆ ಹೆಚ್ಚಾದಂತೆಲ್ಲ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಯಶವಂತಪುರ ನಿಲ್ದಾಣಗಳಲ್ಲಿನ ಒತ್ತಡ ಹೆಚ್ಚುತ್ತಿದೆ. ಇದನ್ನು ನಿವಾರಿಸಲು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ 3ನೇ ಕೋಚಿಂಗ್‌ ಟರ್ಮಿನಲ್‌ ನಿರ್ಮಿಸಿದೆ. ಕಳೆದ ಮಾಚ್‌ರ್‍ನಲ್ಲಿಯೇ ಪೂರ್ಣಗೊಳ್ಳ ಬೇಕಾಗಿದ್ದ ಕಾಮಗಾರಿ, ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿತ್ತು. ಗಡುವನ್ನು ಮೇ ತಿಂಗಳಿಗೆ ವಿಸ್ತರಿಸಲಾಗಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಕಾಮಗಾರಿ ವಿಳಂಬವಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಅದರ ನಡುವೆಯೂ ಕೆಲಸ ಮಾಡಿರುವ ನೈಋುತ್ಯ ರೈಲ್ವೆ, ಇದೀಗ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ನೀಡಲಾಗುತ್ತಿದೆ.

7 ಪ್ಲಾಟ್‌ಫಾರಂ:

ಸದ್ಯ ನಿರ್ಮಾಣಗೊಂಡಿರುವ ಕೋಚಿಂಗ್‌ ಟರ್ಮಿನಲ್‌ 7 ಪ್ಲಾಟ್‌ಫಾರಂ ಇರಲಿದೆ. ಹೀಗಾಗಿ ಸದ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಯಶವಂತಪುರ ನಿಲ್ದಾಣದಿಂದ ಬರುತ್ತಿದ್ದ ರೈಲುಗಳು ಮಾತ್ರ ಇಲ್ಲಿಂದ ತೆರಳುತ್ತಿದ್ದವು. ಆದರೀಗ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಪ್ಲಾಟ್‌ಫಾರಂ ವಿಸ್ತರಣೆಯಿಂದಾಗಿ ಉಳಿದ ಪ್ರಮುಖ ನಿಲ್ದಾಣಗಳ ಒತ್ತಡ ಕಡಿಮೆಯಾಗಲಿದೆ. ನೂತನ ಕೋಚಿಂಗ್‌ ಟರ್ಮಿನಲ್‌ಗಾಗಿ .152 ಕೋಟಿ ವ್ಯಯಿಸಲಾಗಿದೆ.

64 ರೈಲುಗಳ ಸ್ಥಳಾಂತರ

ಹೊಸ ಟರ್ಮಿನಲ್‌ನಿಂದಾಗಿ ಯಶವಂತಪುರ ಹಾಗೂ ಕೆಎಸ್‌ಆರ್‌ ಬೆಂಗಳೂರು ನಿಲ್ದಾಣದಲ್ಲಿನ ದಟ್ಟಣೆ ಕಡಿಮೆಯಾಗಲಿದೆ. ಆ ನಿಲ್ದಾಣಗಳಿಂದ ಸಂಚರಿಸುವ ರೈಲುಗಳ ಪೈಕಿ 64 ರೈಲುಗಳನ್ನು ಬೈಯಪ್ಪನಹಳ್ಳಿಗೆ ಸ್ಥಳಾಂತರಿಸಲಾಗುತ್ತದೆ. ಆ ಮೂಲಕ ದಿನಕ್ಕೆ 1 ಲಕ್ಷ ಪ್ರಯಾಣಿಕರಿಗೆ ನಿತ್ಯ ರೈಲ್ವೆ ಸೇವೆ ನೀಡಬಹುದು ಎಂದು ಅಂದಾಜಿಸಲಾಗಿದೆ.