SL Bhyrappa s funeral today at mysuru: ಹಿರಿಯ ಸಾಹಿತಿ ಡಾ.ಎಸ್‌.ಎಲ್‌. ಭೈರಪ್ಪ ಅವರ ಪಾರ್ಥೀವ ಶರೀರವನ್ನು ಮೈಸೂರಿಗೆ ತರಲಾಗಿದ್ದು, ಕಲಾಮಂದಿರದ ಬಳಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಶುಕ್ರವಾರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ಮೈಸೂರು (ಸೆ.26): ಹೃದಯಾಘಾತದಿಂದ ಬುಧವಾರ ಬೆಂಗಳೂರಿನಲ್ಲಿ ನಿಧನರಾದ ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ಅವರ ಪಾರ್ಥೀವ ಶರೀರವನ್ನು ಗುರುವಾರ ಮೈಸೂರಿಗೆ ತರಲಾಗಿದ್ದು, ನಗರದ ಕಲಾಮಂದಿರ ಬಳಿಯ ಕಿಂದರಿ ಜೋಗಿ ಆವರಣದಲ್ಲಿಟ್ಟು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ, ಸಂಜೆ, ನಗರದ ಜೆಎಸ್‌ಎಸ್ ಆಸ್ಪತ್ರೆಯ ಕೋಲ್ಡ್‌ ಸ್ಟೋರೇಜ್‌ ಗೆ ರವಾನಿಸಲಾಗಿದೆ. ಶುಕ್ರವಾರ ಬೆಳಗ್ಗೆ 8.30ಕ್ಕೆ ಭೈರಪ್ಪ ಅವರ ಮನೆಯಲ್ಲಿ ಅಂತಿಮ ವಿಧಿ ವಿಧಾನ ನಡೆದು, ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.

ಗಣ್ಯರಿಂದ ಅಂತಿಮ ದರ್ಶನ:

ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೈಸೂರಿಗೆ ಆಗಮಿಸಿದ ಪಾರ್ಥೀವ ಶರೀರವನ್ನು ಕಲಾಮಂದಿರ ಬಳಿಯ ಕಿಂದರಿ ಜೋಗಿ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಈ ವೇಳೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಶಾಸಕರಾದ ಜಿ.ಟಿ. ದೇವೇಗೌಡ ಸೇರಿ ಹಲವು ಗಣ್ಯರು ಆಗಮಿಸಿ, ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಇದನ್ನೂ ಓದಿ:

ರಂಗಾಯಣ ಆವರಣ ಸೇರಿದಂತೆ ಕಿಂದರಿಜೋಗಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಅಭಿಮಾನಿಗಳು ಜಮಾಯಿಸಿದ್ದರು. ಪಾರ್ಥೀವ ಶರೀರವಿದ್ದ ವಾಹನವು ಕಲಾಮಂದಿರ ಆವರಣ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಪುಷ್ಪವೃಷ್ಟಿಗರೆದು ಕಂಬನಿ ಮಿಡಿದರು. ಭೈರಪ್ಪ ಅವರ ನಿಧನದಿಂದಾಗಿ ಕಲಾಮಂದಿರ ಆವರಣದಲ್ಲಿ ನೀರವ ಮೌನ ಆವರಿಸಿತ್ತು. ಭೈರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಕಲಾಮಂದಿರದಲ್ಲಿ ಆಯೋಜಿಸಿದ್ದ ನಾಟಕದ ಸಮಯವನ್ನು ಬದಲಿಸಲಾಗಿತ್ತು. ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ, ಸಂಚಾರಕ್ಕೆ ಸಮಸ್ಯೆ ಆಗದಂತೆ ಎಚ್ಚರ ವಹಿಸಿದರು.

ಬಳಿಕ, ಸಂಜೆ 6 ಗಂಟೆ ವೇಳೆಗೆ, ಪಾರ್ಥಿವ ಶರೀರವನ್ನು ನಗರದ ಜೆಎಸ್‌ಎಸ್ ಆಸ್ಪತ್ರೆಯ ಕೋಲ್ಡ್‌ ಸ್ಟೋರೇಜ್‌ ಗೆ ರವಾನಿಸಲಾಯಿತು.

ಇಂದು ಅಂತ್ಯಕ್ರೀಯೆ: SL Bhyrappa: ಭಿಕ್ಷಾನ್ನ ಸ್ವೀಕರಿಸಿ ವಿದ್ಯಾಭ್ಯಾಸ ಪಡೆದ ಮಹಾ ಕಷ್ಟ ಸಹಿಷ್ಣು ಎಸ್‌ಎಲ್ ಭೈರಪ್ಪ

ಶುಕ್ರವಾರ ಬೆಳಗ್ಗೆ 8 ಗಂಟೆಗೆ ಜೆಎಸ್‌ಎಸ್ ಆಸ್ಪತ್ರೆಯ ಕೋಲ್ಡ್‌ ಸ್ಟೋರೇಜ್‌ ನಿಂದ ಪಾರ್ಥೀವ ಶರೀರವನ್ನು ಅವರ ಮನೆಗೆ ತರಲಾಗುವುದು. ಅಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿವೆ. ಬಳಿಕ, ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

ಮಕ್ಕಳಿಬ್ಬರಿಂದ ಅಂತ್ಯಕ್ರಿಯೆ ಮಾಡದಂತೆ ಬೈರಪ್ಪ ವಿಲ್‌!

ತಮ್ಮ ಅಂತ್ಯಕ್ರಿಯೆಯನ್ನು ಮಕ್ಕಳಾದ ಉದಯಶಂಕರ್ ಮತ್ತು ರವಿಶಂಕರ್ ನಡೆಸುವಂತಿಲ್ಲ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅವರು ವಿಲ್‌ ಮಾಡಿದ್ದಾರೆ. ಅವರ ಕೊನೆಯ ಆಸೆಯಂತೆ ಮಕ್ಕಳು ಅಂತ್ಯಕ್ರಿಯೆ ನಡೆಸಬಾರದು ಎಂದು ಅಭಿಮಾನಿಯೊಬ್ಬ ವಿಲ್‌ ಪ್ರತಿ ಹಿಡಿದು ಪ್ರತಿಭಟಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಭೈರಪ್ಪ ಅವರ ಅಭಿಮಾನಿ ಎನ್ನಲಾದ ಫಣೀಶ್ ಎಂಬುವರು ವಿಲ್‌ ಕಾಪಿ ಪ್ರದರ್ಶಿಸಿದರು. ಇದರಿಂದಾಗಿ ಕಲಾಮಂದಿರದ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: SL Bhyrappa: ಟ್ರಸ್ಟ್‌ ಮಾಡಲು ಹಠ ಮಾಡಿದ ಕಾರಣ ಈಗ ತಿಳಿಯುತ್ತಿದೆ - ಸಹನಾ ವಿಜಯಕುಮಾರ್

ವಿಲ್ ನಲ್ಲಿ ಭೈರಪ್ಪ ಅವರು ತಮ್ಮ ಮಕ್ಕಳು ಅಂತ್ಯಸಂಸ್ಕಾರ ಮಾಡಬಾರದು ಅಂತ ಬರೆದಿದ್ದಾರೆ. ಹಾಗಾಗಿ, ಅವರ ಮಕ್ಕಳು ಅಂತ್ಯಸಂಸ್ಕಾರ ಮಾಡಬಾರದು. ಅವರನ್ನು ನೋಡಿಕೊಂಡ ಹೆಣ್ಣು ಮಗಳೇ ಅಂತಿಮ ಸಂಸ್ಕಾರ ಮಾಡಬೇಕು. ಅವರ ಆಸೆ ಕೂಡ ಅದೆ. ಅವರ ಕೊನೆ ಆಸೆ ಈಡೇರಬೇಕು ಎಂದು ಅವರು ಪಟ್ಟು ಹಿಡಿದರು. ಕಡೆಗೆ ಪೊಲೀಸರು ಅವರನ್ನು ಅಲ್ಲಿಂದ ಕರೆದೊಯ್ದರು.