ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಪಿಕ್‌ಅಪ್ ಮತ್ತು ಡ್ರಾಪ್-ಆಫ್ ವ್ಯವಸ್ಥೆಯ ಕುರಿತು BIAL ಸ್ಪಷ್ಟನೆ ನೀಡಿದೆ. ಪ್ರಯಾಣಿಕರ ಸುರಕ್ಷತೆಯೇ ಈ ನಿಯಮದ ಮುಖ್ಯ ಉದ್ದೇಶವಾಗಿದ್ದು, ಆರಂಭಿಕ ಸಮಸ್ಯೆಗಳನ್ನು 30 ದಿನಗಳಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದೆ.
ಬೆಂಗಳೂರು (ಡಿ.16): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಬೆಂಗಳೂರು ಟರ್ಮಿನಲ್‌ನಲ್ಲಿ ಇತ್ತೀಚೆಗೆ ಜಾರಿಗೊಳಿಸಿದ ನೂತನ ಪಿಕ್‌ಅಪ್ ಮತ್ತು ಡ್ರಾಪ್-ಆಫ್ ವ್ಯವಸ್ಥೆ ಕುರಿತು ನಿರ್ವಹಣಾ ಸಂಸ್ಥೆ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಸ್ಪಷ್ಟನೆ ನೀಡಿದೆ. ಈ ನೂತನ ಪದ್ಧತಿಯು ಜಾಗತಿಕ ವಿಮಾನ ನಿಲ್ದಾಣಗಳಲ್ಲಿರುವ ವ್ಯವಸ್ಥೆಯನ್ನೇ ಅನುಷ್ಠಾನಗೊಳಿಸಿದೆ ಎಂದು BIAL ತಿಳಿಸಿದೆ.
ಶೇ.95ರಷ್ಟು ಪ್ರಯಾಣಿಕರಿಗೆ ಅನುಕೂಲಕರ:
ಹೊಸ ನಿಯಮ ಜಾರಿಯಾದ ಸಂದರ್ಭದಲ್ಲಿ ಆರಂಭದಲ್ಲಿ ಕೆಲವು ವಿರೋಧ ವ್ಯಕ್ತವಾಗಿದ್ದರೂ, ಶೇ.95ರಷ್ಟು ಪ್ರಯಾಣಿಕರಿಗೆ ಈ ನಿಯಮ ಅನುಕೂಲಕರವಾಗಿದೆ ಎಂದು BIAL ಪ್ರತಿಪಾದಿಸಿದೆ. ಆದರೂ, ಹೊಸ ನಿಯಮದಿಂದ ಉಂಟಾಗುತ್ತಿರುವ ಅನಾನುಕೂಲತೆಗಳನ್ನು ಮತ್ತು ಪ್ರಯಾಣಿಕರ ಅನುಭವದ ಆಧಾರದ ಮೇರೆಗೆ ಆಗುತ್ತಿರುವ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
30 ದಿನಗಳ ಗಡುವು
ಪ್ರಯಾಣಿಕರ ಅನುಕೂಲಕರ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಮುಂದಿನ 30 ದಿನಗಳೊಳಗಾಗಿ ವ್ಯಕ್ತವಾಗಿರುವ ಎಲ್ಲಾ ಸಮಸ್ಯೆಗಳನ್ನು ಪರಿಗಣನೆಗೆ ತೆಗೆದುಕೊಂಡು ಪರಿಹರಿಸುವ ಸಂಬಂಧ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು BIAL ತಿಳಿಸಿದೆ.
ಸುರಕ್ಷತೆಗಾಗಿ ನಡಿಗೆ ಅವಶ್ಯಕ
ನೂತನ ಪಿಕ್‌ಅಪ್ ವ್ಯವಸ್ಥೆಯ ಮೂಲ ಉದ್ದೇಶವನ್ನು BIAL ಸ್ಪಷ್ಟಪಡಿಸಿದೆ. ಅನಧಿಕೃತ ಟ್ಯಾಕ್ಸಿ ಚಾಲಕರು ಪ್ರಯಾಣಿಕರನ್ನು ಹತ್ತಿಸಿಕೊಂಡ ಬಳಿಕ, ಮಾರ್ಗ ಮಧ್ಯದಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ನೀಡಲು ಒತ್ತಾಯಿಸುವುದು, ಒಪ್ಪದೇ ಹೋದಲ್ಲಿ ಮಾರ್ಗ ಮಧ್ಯೆಯೇ ಇಳಿಸುವುದು ಸೇರಿದಂತೆ ಮಹಿಳಾ ಪ್ರಯಾಣಿಕರು ಹಲವು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ.
ಇಂತಹ ಅನಧಿಕೃತ ಟ್ಯಾಕ್ಸಿ ಚಾಲಕರಿಂದ ತೊಂದರೆ ಎದುರಿಸುವ ಬದಲು, ನಿಗದಿಪಡಿಸಿದ ಸ್ಥಳದಲ್ಲಿ ಅಧಿಕೃತ ಟ್ಯಾಕ್ಸಿ ಸೇವೆ ಪಡೆಯಲು 300 ರಿಂದ 500 ಮೀಟರ್ ದೂರ ನಡೆಯುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಎಂದು BIAL ಅಭಿಪ್ರಾಯಪಟ್ಟಿದೆ. ಅಧಿಕೃತ ಹಾಗೂ ನಿಯಂತ್ರಿತ ಸಂಚಾರ ಮತ್ತು ಪರಿಸರ ಸ್ನೇಹಿ ವ್ಯವಸ್ಥೆ ನಿರ್ಮಿಸುವುದು ಈ ನಿಯಮದ ಮೂಲ ಉದ್ದೇಶವಾಗಿದೆ.
ವಿಶೇಷ ಪ್ರಯಾಣಿಕರಿಗೆ ಶಟಲ್ ಸೇವೆ
ವಿಶೇಷ ಚೇತನರು, ಮಕ್ಕಳು ಮತ್ತು ಹಿರಿಯ ನಾಗರಿಕರು ಸೇರಿದಂತೆ ನಡಿಗೆಗೆ ಕಷ್ಟವಾಗುವ ಪ್ರಯಾಣಿಕರಿಗಾಗಿ ವಿಮಾನ ನಿಲ್ದಾಣವು ಶಟಲ್ ಸೇವೆಗಳನ್ನು ಸಹ ಒದಗಿಸುತ್ತಿದೆ. ಈ ನೂತನ ಪಿಕ್‌ಅಪ್ ನಿಯಮವು ಸುರಕ್ಷತೆಯ ದೃಷ್ಟಿಯಿಂದ ಅತಿ ಅವಶ್ಯಕವಾಗಿದೆ ಎಂದು BIAL ಪುನರುಚ್ಚರಿಸಿದೆ. ಮುಂದಿನ ಒಂದೆರಡು ತಿಂಗಳ ಬಳಿಕ ಪ್ರಯಾಣಿಕರ ಅನುಭವ ಮತ್ತು ಅಭಿಪ್ರಾಯದ ಆಧಾರದ ಮೇಲೆ ನಿಯಮಗಳ ಪರಿಷ್ಕರಣೆಯನ್ನು ಸಹ ಮಾಡಲಾಗುತ್ತದೆ ಎಂದು ಸಂಸ್ಥೆ ಭರವಸೆ ನೀಡಿದೆ.


