ಬೆಂಗಳೂರು (ಮಾ.24):  ಮಾಜಿ ಸಚಿವರ ಸಿ.ಡಿ. ಪ್ರಕರಣ ಬಹಿರಂಗವಾದ ಬಳಿಕ ಕಳೆದ ಇಪ್ಪತ್ತು ದಿನಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಸಿ.ಡಿ. ಸ್ಫೋಟದ ಗುಂಪು ತಮ್ಮ ಗೌಪ್ಯ ಸಂವಹನಕ್ಕೆ ಇತ್ತೀಚೆಗೆ ಹೆಚ್ಚು ಚಾಲ್ತಿಗೆ ಬಂದಿರುವ ‘ಸಿಗ್ನಲ್‌’ ಆ್ಯಪ್‌ ಅನ್ನು ಬಳಸುತ್ತಿದೆ ಎಂಬ ಸಂಗತಿ ವಿಶೇಷ ತನಿಖಾ ದಳ (ಎಸ್‌ಐಟಿ)ದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸಿ.ಡಿ. ಸ್ಫೋಟದ ಮಾಸ್ಟರ್‌ ಮೈಂಡ್‌ಗಳು ಎನ್ನಲಾದ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತರಾದ ನರೇಶ್‌ಗೌಡ, ಶ್ರವಣ್‌ ಹಾಗೂ ವಿವಾದಿತ ಯುವತಿ ಎಸ್‌ಐಟಿ ಗಾಳಕ್ಕೆ ಸಿಲುಕದಂತೆ ಹೊರ ರಾಜ್ಯಗಳಲ್ಲಿ ಭೂಗತವಾಗಿದ್ದಾರೆ. ಸಿ.ಡಿ. ಪ್ರಕರಣದ ಸಂಬಂಧ ಎಸ್‌ಐಟಿ ತನಿಖೆ ಸೇರಿದಂತೆ ಬೆಂಗಳೂರಿನಲ್ಲಿ ನಡೆದಿರುವ ಬೆಳವಣಿಗೆ ಹಾಗೂ ಹೊರ ರಾಜ್ಯಗಳಲ್ಲಿ ಸುರಕ್ಷಿತ ಆಶ್ರಯ ತಾಣಗಳನ್ನು ಪಡೆಯುವ ಕುರಿತ ಮಾತುಕತೆಗೆ ಅವರು ‘ಸಿಗ್ನಲ್‌’ ಆ್ಯಪ್‌ ಬಳಸುತ್ತಿದ್ದಾರೆ. ಮೊಬೈಲ್‌ ಕರೆಗಳು ಹಾಗೂ ವಾಟ್ಸ್‌ಆ್ಯಪ್‌ ಅನ್ನು ಬಳಸಿದರೆ ಪೊಲೀಸರಿಗೆ ತಮ್ಮ ಇರುವಿಕೆಯ ಸ್ಥಳದ ಜಾಡು ಸಿಗುತ್ತದೆ ಎಂದು ಎಚ್ಚರಿಕೆ ವಹಿಸಿರುವ ಸಿ.ಡಿ. ಸ್ಫೋಟದ ಗುಂಪು, ತನಿಖಾ ತಂಡಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಾಸಲೀಲೆ ಸಿಡಿ ಕೇಸ್ : ಮತ್ತೊಂದು ವಿಡಿಯೋ ರಿಲೀಸ್ ..

ಆರೋಪಿಗಳ ಮೊಬೈಲ್‌ ಕರೆ ಹಾಗೂ ವಾಟ್ಸ್‌ಆ್ಯಪ್‌ ಸೇರಿದಂತೆ ಸಂವಹನ ಸಂಪರ್ಕದ ಎಲ್ಲಾ ದಾರಿಗಳನ್ನು ಪರಿಶೀಲಿಸಲಾಯಿತು. ಈ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಸಾಮಾಜಿಕ ಕಾರ್ಯಕರ್ತ, ಪತ್ರಕರ್ತರು ಹಾಗೂ ವಿವಾದಿತ ಯುವತಿ ಸೇರಿ ಕೆಲವರು ಪ್ರತ್ಯೇಕ ಸಂವಹನ ವಾಹಕಗಳನ್ನು ಬಳಸುತ್ತಿರುವುದು ಗೊತ್ತಾಯಿತು. ಈ ಸುಳಿವು ಆಧರಿಸಿ ತನಿಖೆ ನಡೆಸಿದಾಗ ಸಿಗ್ನಲ್‌ ಆ್ಯಪ್‌ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಈ ಆ್ಯಪ್‌ನಲ್ಲಿನ ಸಂದೇಶಗಳನ್ನು ಆಧರಿಸಿ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಆ್ಯಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಸ್ಮಾರ್ಟ್‌ಪೋನ್‌ ಬಳಕೆದಾರರು ಬಳಸಬಹುದು. ಈ ಆ್ಯಪ್‌ ಖಾಸಗಿತನಕ್ಕೆ ಒತ್ತು ನೀಡುತ್ತದೆ. ವಿಡಿಯೋ ಕಾಲ್‌ಗಳನ್ನು ಸಹ ಮಾಡಬಹುದಾಗಿದೆ. ಇದರಲ್ಲಿ ಇಬ್ಬರು ವ್ಯಕ್ತಿಗಳ ನಡುವಣ ಸಂವಹನ ಮೂರನೇ ವ್ಯಕ್ತಿಗೆ ಅಲಭ್ಯವಾಗಿರುತ್ತದೆ. ಹೀಗಾಗಿಯೇ ಸಾಮಾನ್ಯವಾಗಿ ಕೆಲವು ಕ್ರಿಮಿನಲ್‌ಗಳು ಈ ರೀತಿಯ ಗೌಪ್ಯ ಆ್ಯಪ್‌ ಉಪಯೋಗಿಸುತ್ತಾರೆ. ಈಗ ಸಿ.ಡಿ. ಸ್ಫೋಟದ ಗುಂಪು ಕೂಡ ರಹಸ್ಯ ಮಾತುಕತೆಗೆ ಸಿಗ್ನಲ್‌ ಆ್ಯಪ್‌ ಮೊರೆ ಹೋಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.