ಬೆಂಗಳೂರು :  ‘ಶುಕ್ರ​ವಾರ ಆಯೋ​ಜಿ​ಸಿ​ರುವ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ಸಭೆಗೆ ಹಾಜ​ರಾಗಿ, ಇಲ್ಲವೇ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಎದು​ರಿ​ಸಿ​.’

ಹೀಗೆಂದು, ಪಕ್ಷ ನೀಡಿದ ಸರಣಿ ನೋಟಿಸ್‌ ಹಾಗೂ ವಿಪ್‌ಗೂ ಜಗ್ಗದೆ ಬುಧವಾರ ಆರಂಭ​ಗೊಂಡ ಜಂಟಿ ಅಧಿ​ವೇ​ಶ​ನಕ್ಕೆ ಗೈರುಹಾಜ​ರಾದ ಕಾಂಗ್ರೆಸ್‌ ಪಕ್ಷದ ಅತೃಪ್ತ ಶಾಸ​ಕ​ರಿಗೆ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ನೀಡಿ​ರುವ ಅಂತಿಮ ಎಚ್ಚ​ರಿ​ಕೆ​ಯಿ​ದು.

ಬುಧವಾರ ರಾತ್ರಿ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಕೆಪಿಸಿಸಿ ವಿಸ್ತೃತ ಸರ್ವ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದ​ರಾ​ಮಯ್ಯ, ಬಿಜೆಪಿಯೊಡ್ಡು​ತ್ತಿ​ರುವ ಆಮಿ​ಷ​ಗ​ಳಿಗೆ ಪಕ್ಷದ ಒಂದಿ​ಬ್ಬರು ಶಾಸ​ಕರು ಬಲಿ​ಯಾ​ಗಿ​ದ್ದಾರೆ ಎಂದು ತೀವ್ರ ಬೇಸರ ವ್ಯಕ್ತ​ಪ​ಡಿಸಿ, ಅಂತ​ಹ​ವರು ಈಗ​ಲಾ​ದರೂ ಮನಸ್ಸು ಬದ​ಲಿಸಿ ಹಿಂತಿ​ರು​ಗಲಿ. ಅವರಿಗೆ ಕೈ ಮುಗಿದು ಕೋರು​ತ್ತೇನೆ ಎಂದೂ ಹೇಳಿ​ದ​ರು.

ಅಲ್ಲದೆ, ಫೆ.8ರಂದು ನಡೆಯುವ ಶಾಸಕಾಂಗ ಪಕ್ಷ ಸಭೆಯಲ್ಲಿ ಪಕ್ಷದ ಎಲ್ಲ ಶಾಸಕರು, ಸಚಿವರು, ವಿಧಾನ ಪರಿಷತ್‌ ಸದಸ್ಯರೂ ಕಡ್ಡಾಯವಾಗಿ ಹಾಜರಾಗಲೇಬೇಕು. ಒಂದು ವೇಳೆ ಯಾರಾದರೂ ಗೈರು ಹಾಜರಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರನ್ನು ಪಕ್ಷದಿಂದ ಅನರ್ಹಗೊಳಿಸುವಂತೆ ಸಭಾಧ್ಯಕ್ಷರಿಗೆ ದೂರು ನೀಡಲಾಗು​ವು​ದು ಎಂದು ಹೇಳಿ​ದ​ರು.

ಕಳೆದ ಶಾಸಕಾಂಗ ಸಭೆಗೆ ಗೈರುಹಾಜರಾದ ಶಾಸಕರಿಗೆ ಈಗಾಗಲೇ ಎರಡು ಬಾರಿ ನೋಟಿಸ್‌ ನೀಡಲಾಗಿದೆ. ಆದರೂ, ಅವರಾರ‍ಯರೂ ಖುದ್ದು ಭೇಟಿಯಾಗಿ ತಮ್ಮ ಗೈರು ಹಾಜರಿ ಬಗ್ಗೆ ಯಾವುದೇ ಸ್ಪಷ್ಟೀಕರಣವನ್ನಾಗಲೀ, ಸಮಜಾಯಿಷಿಯನ್ನಾಗಲೀ ನೀಡಿಲ್ಲ. ಈಗ ಅವರಿಗೆ ಬಜೆಟ್‌ ಅಧಿವೇಶನದಲ್ಲಿ ತಪ್ಪದೇ ಹಾಜರಾಗಬೇಕೆಂದು ವಿಪ್‌ ಕೂಡ ಜಾರಿ ಮಾಡಲಾಗಿದೆ. ಆದರೂ, ಅಧಿವೇಶನಕ್ಕೆ ಬಂದಿಲ್ಲ. ಈಗಾಗಲೇ ಒಂದಿಬ್ಬರು ಶಾಸಕರು ಬಿಜೆಪಿಯವರ ಆಮಿಷಕ್ಕೆ ಬಲಿಯಾಗಿದ್ದಾರೆ. ಅವರು ಕೂಡಲೇ ತಮ್ಮ ಮನಸ್ಸು ಬದಲಿಸಿಕೊಂಡು ವಾಪಸ್‌ ಬರಬೇಕು. ಇಲ್ಲದೆ ಹೋದರೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸಭಾಧ್ಯಕ್ಷರಿಗೆ ದೂರು ನೀಡಿ, ಜೊತೆಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಮೋದಿ ದೊಡ್ಡ ಭ್ರಷ್ಟ:  ಸಭೆಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಾಯಕರ ವಿರುದ್ಧ ಸುದೀರ್ಘ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾಗೆ ದೇಶದ ಸಂವಿಧಾನ ಮತ್ತು ಕಾನೂನಿನ ಬಗ್ಗೆ ಗೌರವ ಇಲ್ಲ. ಇಡೀ ದೇಶದಲ್ಲಿ ಪ್ರಧಾನಿ ಮೋದಿ ಅತಿ ದೊಡ್ಡ ಭ್ರಷ್ಟಎಂದು ಕಿಡಿ ಕಾರಿದರು.

ಕೇಂದ್ರ ಸರ್ಕಾರ ಐಟಿ ಮತ್ತು ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ಕಾಂಗ್ರೆಸ್‌ ನಾಯಕರ ಮನೆ ಬಳಿ ಐಟಿ ಅಧಿಕಾರಿಗಳನ್ನು ಕಾವಲಿಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಅದನ್ನೇ ಮಾಡಿದರು. ನನ್ನ ಮನೆಯ ಸುತ್ತಮುತ್ತ ಅಧಿಕಾರಿಗಳನ್ನು ಬಿಟ್ಟು ಕಾಯ್ದರು. ಕಾರ್ಯಕರ್ತರಿಗೆ ದುಡ್ಡುಕೊಟ್ಟರೂ ದಾಳಿ ಮಾಡಿಸುತ್ತಿದ್ದರು. ನಮ್ಮ ಪಕ್ಷದ ಅದೆಷ್ಟೋ ಶಾಸಕರನ್ನು ಐಟಿ ಮೂಲಕ ಹೆದರಿಸುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಪಶ್ಚಿಮ ಬಂಗಾಳದಲ್ಲಿ ಐಟಿ ಅಧಿಕಾರಿಗಳ ನಡವಳಿಕೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಕಪ್ಪುಹಣ, ಭ್ರಷ್ಟಾಚಾರ ತೊಡೆಯುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಲೋಕಪಾಲ್‌ ಬಿಲ್‌ ಜಾರಿಯಾಗಿ ವರ್ಷಗಳು ಕಳೆದರೂ ಈ ವರೆಗೆ ಲೋಕಪಾಲ್‌ ಮಾಡದೆ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದೇಕೆ? ಇಡೀ ದೇಶದಲ್ಲಿ ಪ್ರಧಾನಿ ಮೋದಿಯಷ್ಟುಅತಿ ದೊಡ್ಡ ಭ್ರಷ್ಟಇನ್ನೊಬ್ಬರಿಲ್ಲ ಎಂದು ಕಿಡಿ ಕಾರಿದರು.

ಹತ್ತು ಮೋದಿ ಬಂದರೂ ಏನೂ ಮಾಡಲಾಗಲ್ಲ:  ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಕಾಂಗ್ರೆಸ್‌ ಕಾರ್ಯಕರ್ತರು ಸಂಘಟಿತರಾದರೆ ಹತ್ತು ಜನ ಮೋದಿ ಹುಟ್ಟಿಬಂದರೂ ರಾಹುಲ್‌ ಗಾಂಧಿ ಅವರು ಮುಂದಿನ ಪ್ರಧಾನಿಯಾಗಿರುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ದೇಶದ ಜನರಿಗೆ ದೊಡ್ಡ ಮೋಸ ಮಾಡಿದ್ದಾರೆ. ಚುನಾವಣೆಯಲ್ಲಿ ನೀಡಿದ್ದ ಯಾವೊಂದು ಭರವಸೆಯನ್ನೂ ಈಡೇರಿಸಿಲ್ಲ. ಬರೀ ಸುಳ್ಳು ಹೇಳಿಕೊಂಡೇ ಐದು ವರ್ಷ ಅಧಿಕಾರ ಅನುಭವಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ, ತತ್ವ ಸಿದ್ಧಾಂತಗಳು, ಪಕ್ಷದ ನಾಯಕರ ಸಂದೇಶಗಳನ್ನು ಕಾಂಗ್ರೆಸ್‌ ಹೊರತಂದಿರುವ ಹೊಸ ಪತ್ರಿಕೆ ಮೂಲಕ ಪ್ರತಿ ಮನೆಗೂ ತಲುಪಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ್‌, ಉಪಾಧ್ಯಕ್ಷ ಬಿ.ಎಲ್‌.ಶಂಕರ್‌, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವರಾದ ಡಿ.ಕೆ.ಶಿವಕುಮಾರ್‌, ಆರ್‌.ವಿ.ದೇಶಪಾಂಡೆ ಸೇರಿದಂತೆ ಪಕ್ಷದ ಹಲವು ನಾಯಕರು ಪಾಲ್ಗೊಂಡಿದ್ದರು.

30 ಶಾಸಕರಿಗೆ ಬಿಜೆಪಿ ಕೋಟಿ ಕೋಟಿ ಆಮಿಷ

ಬಿಜೆಪಿ ನಾಯಕರು ಇಲ್ಲಿಯವರೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 25ರಿಂದ 30 ಶಾಸಕರಿಗೆ ಕೋಟಿ ಕೋಟಿ ರು. ಆಮಿಷವೊಡ್ಡಿದ್ದಾರೆ. ಮಂಗಳವಾರ ಕೂಡ ಜೆಡಿಎಸ್‌ ಶಾಸಕರೊಬ್ಬರ ಮನೆಗೆ 30 ಕೋಟಿ ರು. ಹಣ ತೆಗೆದುಕೊಂಡು ಹೋಗಿದ್ದಾರೆ. ಮತ್ತೊಬ್ಬ ಶಾಸಕರ ಮನೆಯಲ್ಲಿ ಐದು ಕೋಟಿ ರು. ಹಣ ಇಟ್ಟು ಬಂದಿದ್ದಾರೆ.

ನಾಳೆ ಸಿಎಲ್‌ಪಿ ಏಕೆ?

1. ಸತತವಾಗಿ ಪಕ್ಷದ ವಿಪ್‌ ಹಾಗೂ ನಿರ್ದೇಶನಗಳನ್ನು ಉಲ್ಲಂಘಿಸುತ್ತಿರುವ ಕೆಲ ಅತೃಪ್ತ ಶಾಸಕರು

2. ನೋಟಿಸ್‌ ನೀಡದರೂ ಕ್ಯಾರೇ ಎನ್ನದಿರುವ ಶಾಸಕರ ವಿರುದ್ಧ ಈ ಬಾರಿ ಕಠಿಣ ಕ್ರಮಕ್ಕೆ ನಿರ್ಧಾರ

3. ಇದೇ ಉದ್ದೇಶದಿಂದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆದ ಶಾಸಕಾಂಗ ನಾಯಕ ಸಿದ್ದರಾಮಯ್ಯ

4. ಇದಕ್ಕೆ ಗೈರು ಹಾಜರಾಗುವವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಪ್ರಯೋಗಿಸಲು ಸಕಲ ಸಿದ್ಧತೆ

5. ಗೈರಾದವರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡುವಂತೆ ಸ್ಪೀಕರ್‌ಗೆ ಮನವಿ ಮಾಡುವ ತಂತ್ರಗಾರಿಕೆ