ಬೆಂಗಳೂರು[ಜ.22]: ಬರಪೀಡಿತ ತಾಲೂಕುಗಳಲ್ಲಿ ಸಹಕಾರ ಸಂಘಗಳಿಂದ ನೀಡಿರುವ ಸಾಲವನ್ನು ರೈತರಿಂದ ಬಲವಂತವಾಗಿ ವಸೂಲಿ ಮಾಡದಂತೆ ತಮ್ಮ ಸರ್ಕಾರ ಹೊರಡಿಸಿದ್ದ ಸುತ್ತೋಲೆ ರದ್ದುಪಡಿಸಿ, ಸುಸ್ತಿ ಸಾಲ ವಸೂಲಿಗೆ ಆದೇಶಿಸಿರುವ ರಾಜ್ಯ ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.

"

ಅತಿವೃಷ್ಟಿಮತ್ತು ಅನಾವೃಷ್ಟಿಪೀಡಿತ ಪ್ರದೇಶಗಳ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುವ ದುಸ್ಸಾಹಸವನ್ನು ತಕ್ಷಣ ನಿಲ್ಲಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧದ ರೈತರ ಪ್ರತಿಭಟನೆಯಲ್ಲಿ ರೈತರ ಜೊತೆ ನಮ್ಮ ಪಕ್ಷವೂ ಕೂಡ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬರಪೀಡಿತ ಪ್ರದೇಶಗಳಲ್ಲಿ ಸುಸ್ತಿ ಸಾಲವನ್ನು ರೈತರಿಂದ ವಸೂಲಿ ಮಾಡುವಂತೆ ಸರ್ಕಾರ ಮಾಡಿರುವ ಆದೇಶ ಪ್ರತಿಯೊಂದಿಗೆ ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ಬರಪೀಡಿತ ತಾಲೂಕುಗಳಲ್ಲಿ ರೈತರಿಂದ ಸಹಕಾರಿ ಸಂಸ್ಥೆಗಳ ಸಾಲವನ್ನು ಬಲವಂತವಾಗಿ ವಸೂಲಿ ಮಾಡಬಾರದೆಂದು ನಮ್ಮ ಸರ್ಕಾರ ಹಿಂದೆ ಹೊರಡಿಸಿದ್ದ ಸುತ್ತೋಲೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿರುವುದು ಖಂಡನೀಯ. ಈ ಮೂಲಕ ಬಲವಂತದ ಸಾಲ ವಸೂಲಿಗೆ ಪರವಾನಗಿ ನೀಡಿರುವ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ. ರಾಜ್ಯದ ಹದಿನೈದು ಜಿಲ್ಲೆಯ 55 ತಾಲೂಕುಗಳು ಅತಿವೃಷ್ಟಿಗೆ ತುತ್ತಾಗಿ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಅವರಿಗೆ ನ್ಯಾಯಯುತವಾಗಿ ನೀಡಬೇಕಾದ ಪರಿಹಾರವನ್ನು ಇನ್ನೂ ನೀಡದಿರುವ ಸರ್ಕಾರ ಈಗ ಬಲಾತ್ಕಾರದಿಂದ ಬಾಕಿ ಸಾಲ ವಸೂಲಿಗೆ ಹೊರಟಿರುವುದು ಅಮಾನವೀಯ ನಡೆ ಎಂದು ಕಿಡಿಕಾರಿದ್ದಾರೆ.

ಭಿನ್ನಮತ ಸ್ಫೋಟ: ಸಿದ್ದರಾಮಯ್ಯ ನಡೆಗೆ ಸಿಡಿದೆದ್ದ ಮೂಲ ಕಾಂಗ್ರೆಸ್ಸಿಗರು.

ಬಿಜೆಪಿ ಸರ್ಕಾರದ ರೈತ ವಿರೋಧಿ ನಿಲುವು ಅನಿರೀಕ್ಷಿತವಾದುದೇನಲ್ಲ. ರೈತರ ಪರ ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲೇ ರೈತರನ್ನು ಗುಂಡಿಕ್ಕಿ ಸಾಯಿಸಿದ ಪಕ್ಷದ ನಿಜಬಣ್ಣ ನಿಧಾನವಾಗಿ ಈಗ ಬಯಲಾಗುತ್ತಿದೆ ಎಂದು ಟ್ವೀಟ್‌ ಮಾಡುವ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ನಡೆದಿದ್ದ ಗೋಲಿಬಾರ್‌ನಲ್ಲಿ ರೈತನೊಬ್ಬ ಬಲಿಯಾದ ಪ್ರಕರಣವನ್ನೂ ಪ್ರಸ್ತಾಪ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ.

ರಾಜ್ಯ ಸರ್ಕಾರದ ಆದೇಶ ಏನು:

2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 110 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಅಂದಿನ ಸರ್ಕಾರ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳು ರೈತರಿಗೆ ಲಿಖಿತವಾಗಿ ಯಾವುದೇ ನೋಟಿಸ್‌ ನೀಡುವುದರ ಮೂಲಕ ಅಥವಾ ದಾವಾ ದಾಖಲಿಸುವ ಮೂಲಕ ಒತ್ತಾಯಪೂರ್ವಕವಾಗಿ ಕೃಷಿ ಸಾಲವನ್ನು ವಸೂಲು ಮಾಡಬಾರದೆಂದು ಎಲ್ಲಾ ಸಹಕಾರ ಸಂಘಗಳು ಮತ್ತು ಅಧಿಕಾರಿಗಳಿಗೆ 2016ರ ಅಕ್ಟೋಬರ್‌ 20ರಂದು ಸರ್ಕಾರ ಸುತ್ತೋಲೆ ಹೊರಡಿಸಿ ಸೂಚಿಸಿತ್ತು. ಈ ಸುತ್ತೋಲೆಗೆ 2019ರ ಡಿಸೆಂಬರ್‌ 11ರಂದು ಸರ್ಕಾರ ಸ್ಪಷ್ಟೀಕರಣ ನೀಡಿದ್ದು, ಅದರ ಅಂಶಗಳು ಸ್ವಯಂವೇದ್ಯವಾಗಿರುತ್ತವೆ ಎಂದು ಹೇಳುವ ಮೂಲಕ ಸುತ್ತೋಲೆ ರದ್ದುಪಡಿಸಿ ರೈತರಿಂದ ಸುಸ್ತಿಯಾಗಿರುವ ಸಾಲವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳುವಂತೆ ಕಳೆದ ಡಿ.27ರಂದು ಕಾಸ್ಕಾರ್ಡ್‌ ಬ್ಯಾಂಕ್‌ (ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಹಕಾರ ಬ್ಯಾಂಕ್‌) ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಸಹಕಾರಿ ಸಂಘಗಳ ನಿಬಂಧಕರುಗಳಿಗೆ ಸೂಚನೆ ನೀಡಿದೆ.

ಬಿಜೆಪಿ ಸೇರಿದವರು ಈಗ ಅಂತರಪಿಶಾಚಿಗಳು: ಸಿದ್ದು...

ರೈತರು ಸಾಲ ಪಡೆದ ಬಳಿಕ ನೀಡಿರುವ ಕಾಲಾವಕಾಶದಲ್ಲಿ ಬಡ್ಡಿಯನ್ನು ಪಾವತಿಸಿ ನವೀಕರಣ ಮಾಡಿಕೊಳ್ಳಬೇಕು. ನವೀಕರಣ ಮಾಡಿಕೊಳ್ಳದ ಸುಸ್ತಿ ಸಾಲ ವಸೂಲಾತಿಗೆ ಕಾಸ್ಕಾರ್ಡ್‌ ಬ್ಯಾಂಕ್‌ಗೆ ಸೂಚನೆ ನೀಡಲಾಗಿದೆ. ಸುಸ್ತಿ ಸಾಲ ವಸೂಲಾತಿ ಸಂಬಂಧ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆದಿದ್ದು, ಧೀರ್ಘಾವಧಿ ಸಾಲಗಳ ವಸೂಲಾತಿ ಬಗ್ಗೆ ಸರ್ಕಾರವು ವಿಧಿಸಿರುವ ನಿರ್ಬಂಧ ಹಿಂಪಡೆಯುವ ಕುರಿತು ಚರ್ಚಿಸಲಾಯಿತು. ಈ ವೇಳೆ ಆರ್ಥಿಕ ಇಲಾಖೆಯು ಪರಿಶೀಲನೆ ನಡೆಸಿತು. ಆಗ ಮುಖ್ಯಮಂತ್ರಿಗಳು ಸಾಲ ವಸೂಲಾತಿ ಮಾಡಬಾರದು ಎಂದು ಸೂಚಿಸಿದ್ದರು. ಆದರೆ, ಅದಕ್ಕೆ ಹಣಕಾಸು ಇಲಾಖೆಯು ಒಪ್ಪಿಗೆ ನೀಡಿರಲಿಲ್ಲ. ಸಾಲ ವಸೂಲಾತಿ ಮಾಡದಿರುವುದಕ್ಕೆ ಕಾಸ್ಕಾರ್ಡ್‌ ಬ್ಯಾಂಕ್‌ ಮತ್ತು ಆಡಳಿತ ಇಲಾಖೆಯು ನೀಡಿರುವ ಕಾರಣ ಒಪ್ಪುವಂತಹದ್ದಲ್ಲ ಎಂದು ಹಣಕಾಸು ಇಲಾಖೆಯು ತಿಳಿಸಿತ್ತು.