ಸಿಎಂ ಸಿದ್ದರಾಮಯ್ಯ ಇಂದು ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡುತ್ತಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಕಾಂಗ್ರೆಸ್‌ ನಾಯಕರನ್ನು ಭೇಟಿಯಾಗಲಿದ್ದಾರೆ. ಆದರೆ, ಅವರ ದೆಹಲಿ ಪ್ರವಾಸದ ಸಮಯ ಬದಲಾವಣೆಯಾಗಿದೆ. 

ಬೆಂಗಳೂರು (ಜೂನ್ 21, 2023): ಸಿಎಂ ಸಿದ್ದರಾಮಯ್ಯ ಇಂದು ಅನ್ನ ಭಾಗ್ಯ ಸೇರಿ ಅನೇಕ ವಿಚಾರಗಳ ಬಗ್ಗೆ ಚರ್ಚಿಸಲು ದೆಹಲಿ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಆದರೆ, ಸಿಎಂ ಪತ್ನಿಗೆ ಅನಾರೋಗ್ಯ ಹಿನ್ನೆಲೆ ದೆಹಲಿ ಪ್ರವಾಸ ಸಮಯ ಬದಲಾವಣೆಯಾಗಿದೆ. 

ಸಿಎಂ ಸಿದ್ದರಾಮಯ್ಯ ಇಂದು ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡುತ್ತಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಕಾಂಗ್ರೆಸ್‌ ನಾಯಕರನ್ನು ಭೇಟಿಯಾಗಲಿದ್ದಾರೆ. ಆದರೆ, ಜೂನ್ 21 ರ ಬುಧವಾರ ಬೆಳಗ್ಗೆ 9.50 ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಬೇಕಿದ್ದ ಸಿಎಂ ದೆಹಲಿ ಪ್ರವಾಸದಲ್ಲಿ ಸಮಯ ಬದಲಾವಣೆಯಾಗಿದೆ. 

ಇದನ್ನು ಓದಿ: ರಾಜ್ಯದ ಬಳಿ ಸ್ವಲ್ಪವೂ ಅಕ್ಕಿ ದಾಸ್ತಾನಿಲ್ಲ: ಅನ್ನಭಾಗ್ಯ ಯೋಜನೆ ಜಾರಿ ಕಷ್ಟಕಷ್ಟ

ಅದರ ಬದಲಾಗಿ ಈಗ ಬೆಳಗ್ಗೆ 11.30 ಕ್ಕೆ ಎಚ್‌ಎಎಲ್‌ನಿಂದ ವಿಶೇಷ ವಿಮಾನ ಮೂಲಕ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಇದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ಪತ್ನಿಗೆ ಅನಾರೋಗ್ಯವುಂಟಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಜ್ವರ ಹಿನ್ನೆಲೆಯಲ್ಲಿ ಸಿಎಂ ಪತ್ನಿ ಮಂಗಳವಾರ ರಾತ್ರಿ 11.30 ಕ್ಕೆ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆ ಸಿಎಂ ದೆಹಲಿ ಪ್ರವಾಸ ಸಮಯ ಬದಲಾವಣೆಯಾಗಿದೆ. ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುವ ಮುನ್ನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಪತ್ನಿ ಆರೋಗ್ಯ ವಿಚಾರಿಸಿದ್ದಾರೆ. ಪತ್ನಿ ಆರೋಗ್ಯ ವಿಚಾರಿಸಿ ದೆಹಲಿಯತ್ತ ಸಿಎಂ ಸಿದ್ದರಾಮಯ್ಯ ತೆರಳಿದ್ದಾರೆ. ಪತ್ನಿ ಹುಷಾರಾಗಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬಿಜೆಪಿಗರು ಅಕ್ಕಿ ಕೊಡಲಾಗದಿದ್ದರೆ ಹಣ ಕೊಡಿ ಅಂತಾರೆ, ದುಡ್ಡು ತಿನ್ನೋಕೆ ಆಗುತ್ತಾ?: ಸಿದ್ದು

ಈ ಮಧ್ಯೆ, ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ತಾಯಿ ಜತೆಗೇ ಇದ್ದು, ಅವರ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ಯತೀಂದ್ರ ಸ್ವತ: ವೈದ್ಯರಾಗಿರುವ ಹಿನ್ನೆಲೆ ಅವರ ಜತೆ ತಮ್ಮ ಪತ್ನಿ ಆರೋಗ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ, ಪತ್ನಿ ಚೆನ್ನಾಗಿದ್ದರೆ, ಸಮಸ್ಯೆ ಇಲ್ಲ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೊರಟಿದ್ದಾರೆ. 

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬದಲು ವಿಶೇಷ ವಿಮಾನದ ಮೂಲಕ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ. ತಿಂಗಳಿಗೆ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಕೊಡುವ ವಿಚಾರ ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿದ್ದು, ಈ ಹಿನ್ನೆಲೆ ಅವರು ರಾಷ್ಟ್ರ ರಾಜಧಾನಿಗೆ ಭೇಟಿ ನೀಡುತ್ತಿದ್ದು, ಈ ಹಿನ್ನೆಲೆ ಈ ಪ್ರವಾಸ ಪ್ರಮೂಕ ಎನಿಸಿಕೊಂಡಿದೆ. 

ಇದನ್ನೂ ಓದಿ: ರಾಜ್ಯಾದ್ಯಂತ ಇಂದು ಕಾಂಗ್ರೆಸ್‌, ಬಿಜೆಪಿ ‘ಉಚಿತ ಅಕ್ಕಿ ಹೋರಾಟ’

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಸಿಎಂ ಸಿದ್ದರಾಮಯ್ಯ ಔಪಚಾರಿಕವಾಗಿ ಭೇಟಿ ಮಾಡಲಿದ್ದಾರೆ. ನಂತರ, ಸಿದ್ದರಾಮಯ್ಯ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಹ ಔಪಚಾರಿಕವಾಗಿ ಭೇಟಿ ಮಾಡಲಿದ್ದಾರೆ. ಈ ಮಧ್ಯೆ, ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ನಿರ್ಮಲಾ ಸೀತಾರಾಮನ್‌ ಭೇಟಿಗೆ ಸಿದ್ದರಾಮಯ್ಯ ಮುಂದಾಗಿದ್ದರಾದರೂ ಇವರಿಬ್ಬರೂ ದೆಹಲಿಯಲ್ಲಿ ಇಲ್ಲದಿರುವುದರಿಂದ ಭೇಟಿ ಸಾಧ್ಯವಾಗಿಲ್ಲ. 

ಬಳಿಕ ಸಿದ್ದರಾಮಯ್ಯ ಅವರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ರಾತ್ರಿಯೇ ಬೆಂಗಳೂರಿಗೆ ಹಿಂದಿರುಗಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಕಾಂಗ್ರೆಸ್‌ ವರಿಷ್ಠ ರಾಹುಲ್‌ಗಾಂಧಿ ಅಲಭ್ಯತೆ ಹಿನ್ನೆಲೆಯಲ್ಲಿ ಜೂನ್‌ 21 ರಂದು ಬುಧವಾರ ದೆಹಲಿಗೆ ಹೊರಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದ ಸದಸ್ಯರ ದೆಹಲಿ ಭೇಟಿ ರದ್ದಾಗಿದೆ.