Karnataka Budget 2023: ಹಳೇ ಮೈಸೂರಿಗೆ ಸಿದ್ದರಾಮಯ್ಯ ಬಂಪರ್ ಕೊಡುಗೆ..!
ಮೈಸೂರಲ್ಲೇ ಚಿತ್ರನಗರಿ ನಿರ್ಮಾಣಕ್ಕೆ ನಿರ್ಧಾರ, ಕೊಡಗು, ಚಿಕ್ಕಮಗಳೂರಲ್ಲಿ ಏರ್‌ಸ್ಟ್ರಿಪ್ ನಿರ್ಮಾಣ, ರಾಮನಗರ ರೇಷ್ಮೆ ಮಾರುಕಟ್ಟೆ ಉನ್ನತೀಕರಣಕ್ಕೆ ಕ್ರಮ.
ಅಂಶಿ ಪ್ರಸನ್ನಕುಮಾರ್
ಮೈಸೂರು(ಜು.08): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 14ನೇ ಬಜೆಟ್‌ನಲ್ಲಿ ತವರು ಜಿಲ್ಲೆ ಮೈಸೂರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಜತೆಗೆ, ಹಳೇ ಮೈಸೂರು ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ, ಕೃಷಿಯನ್ನು ಗಮನದಲ್ಲಿಟ್ಟುಕೊಂಡು ರೇಷ್ಮೆ ಮಾರುಕಟ್ಟೆಉನ್ನತೀಕರಣ, ಪಿಕ್‌ಅಪ್ ವ್ಯಾನ್ ಖರೀದಿಸಲು ಶೇ.4 ಬಡ್ಡಿದರದಲ್ಲಿ ಸಾಲದಂಥ ಅನೇಕ ಮಹತ್ವದ ಘೋಷಣೆಗಳನ್ನೂ ಮಾಡಿದ್ದಾರೆ.
ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವ ಮೂಲಕ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಈ ಸರ್ಕಾರ ಮುಂದಾಗಿದೆ. ಅದೇ ರೀತಿ ಎಚ್.ಎನ್.ವ್ಯಾಲಿ, ಕೆ.ಸಿ.ವ್ಯಾಲಿಯಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ 2ನೇ ಹಂತದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ 296 ಕೆರೆ ತುಂಬಿಸಲು .529 ಕೋಟಿ ನಿಗದಿ ಮಾಡಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣದಿಂದ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ಕುಡಿಯುವ ನೀರಿಗೆ ಅನುಕೂಲವಾಗಿದೆ.
Karnataka Budget 2023: ಗೂಬೆ ಕೂರಿಸುವ, ಜನರ ತಲೆ ಮೇಲೆ ಹೂವ ಇಡೋ ಬಜೆಟ್: ಎಚ್‌ಡಿಕೆ ರಿಯಾಕ್ಷನ್
ಅನನ್ಯವಾದ ರುಚಿ ಮತ್ತು ಕಂಪು ಹೊಂದಿರುವ ಚಿಕ್ಕಮಗಳೂರು, ಕೊಡಗು ಮತ್ತು ಬಾಬಾಬುಡನ್‌ಗಿರಿಯ ಅರೇಬಿಕಾ ಕಾಫಿ ಜಿಐ ಟ್ಯಾಗ್ ಹೊಂದಿವೆ. ರಾಜ್ಯದ ಈ ಕಾಫಿಯನ್ನು ಇನ್ನಷ್ಟುಪ್ರಚುರಪಡಿಸಿ, ಜನಪ್ರಿಯಗೊಳಿಸಲು ಕಾಫಿ ಇಕೋ ಟೂರಿಸಂ ಉತ್ತೇಜಿಸಲು ಕರ್ನಾಟಕ ಕಾಫಿ ಅನ್ನು ಬ್ರಾಂಡ್ ಮಾಡುವುದರಿಂದ ಪ್ರವಾಸೋದ್ಯಮ ಚುರುಕಾಗಬಹುದು. ಏಷ್ಯಾದಲ್ಲೇ ಅತಿ ಹೆಚ್ಚು ವಹಿವಾಟು ನಡೆಯುವ ಖ್ಯಾತಿ ಹೊಂದಿರುವ ರಾಮನಗರದಲ್ಲಿ .75 ಕೋಟಿ ವೆಚ್ಚದಲ್ಲಿ ಅತಿದೊಡ್ಡ ಹೈಟೆಕ್ ರೇಷ್ಮೆ ಮಾರುಕಟ್ಟೆನಿರ್ಮಾಣದಿಂದ ರೈತರಿಗೆ ಮತ್ತಷ್ಟುಅನುಕೂಲವಾಗಲಿದೆ. ಶಿಡ್ಲಘಟ್ಟದಲ್ಲಿನ ರೇಷ್ಮೆಗೂಡು ಮಾರುಕಟ್ಟೆಯನ್ನು .75 ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆಯಾಗಿ ಪರಿವರ್ತಿಸುವುದರಿಂದ ಕೋಲಾರ, ಚಿಕ್ಕಬಳ್ಳಾಪುರ ರೈತರಿಗೆ ಲಾಭವಾಗಲಿದೆ. ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಣೆಗೆ ಪಿಕ್‌ಅಪ್ ವ್ಯಾನ್ ಖರೀದಿಸಲು ಶೇ.4ರ ಬಡ್ಡಿ ದರದಲ್ಲಿ .7ಲಕ್ಷ ವರೆಗೆ ಸಾಲ ನೀಡುವುದರಿಂದ ಚಿಕ್ಕಮಗಳೂರು, ಕೊಡಗು, ಹಾಸನ ರೈತರಿಗೆ ಪ್ರೋತ್ಸಾಹ ಸಿಕ್ಕಂತಾಗಲಿದೆ.
ಆದಿವಾಸಿಗಳಿಗೆ ಪೌಷ್ಟಿಕ ಆಹಾರ ಯೋಜನೆ ಆರು ತಿಂಗಳ ಬದಲು 12 ತಿಂಗಳಿಗೆ ವಿಸ್ತರಿಸುವುದರಿಂದ ಮೈಸೂರು, ಚಾಮರಾಜನಗರ, ಕೊಡಗು ಸೇರಿ ಆದಿವಾಸಿಗಳು ಹೆಚ್ಚಿರುವ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿಯಾಗಿರುವ ಚಿಕ್ಕಮಗಳೂರು, ಕೊಡಗಿನಲ್ಲಿ ಏರ್‌ಸ್ಟ್ರಿಪ್ ಅಭಿವೃದ್ಧಿಪಡಿಸುವುದರಿಂದ ಪ್ರವಾಸೋದ್ಯಮ ಮತ್ತಷ್ಟುಗರಿಗೆದರಬಹುದು. ಚಾಮರಾಜನಗರ ಬದನಗುಪ್ಪೆಯಲ್ಲಿ ಕೈಗಾರಿಕಾ ವಸಾಹತು ಆರಂಭಿಸುವುದರಿಂದ ಹಿಂದುಳಿದ ಗಡಿ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬಹುದು.
ಕಾಡಾನೆ ದಾಳಿ ನಿಯಂತ್ರಣಕ್ಕೆ ಕ್ರಮ:
ಹಳೇ ಮೈಸೂರು ಭಾಗದಲ್ಲಿ ಕಾಡಂಚಿನ ಗ್ರಾಮಗಳ ಪಾಲಿಗೆ ಕಾಡಾನೆಗಳ ಉಪಟಳ ಅತಿದೊಡ್ಡ ತಲೆನೋವು. ಇದರ ನಿವಾರಣೆಗೆ ಮೈಸೂರು, ಮಂಡ್ಯ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿರುವಂತೆ ರಾಮನಗರ, ಬನ್ನೇರುಘಟ್ಟದಲ್ಲಿ ಆನೆ ಕಾರ್ಯಪಡೆ ರಚಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಚಿಕ್ಕಬಳ್ಳಾಪುರ, ಚಾಮರಾಜನಗರ ತಾಲೂಕು ಕಚೇರಿಗಳಲ್ಲಿ ಅಂದಿನ ಸೇವೆ ಅಂದೇ ನೀಡುವ ವ್ಯವಸ್ಥೆ ಜಾರಿ ಮಾಡುವುದರಿಂದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ ಕಡಿಮೆಯಾಗಬಹುದು.
ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆ, ಪಿಪಿಪಿ ಮಾದರಿಯಲ್ಲಿ ಮೈಸೂರಲ್ಲೇ ಚಿತ್ರನಗರಿ ನಿರ್ಮಾಣ, ಮೈ ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಅಂತಾರಾಷ್ಟ್ರೀಯ ಗುಣಮಟ್ಟದ ಕರ್ನಾಟಕ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ ನಿರ್ಮಾಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರವನ್ನು ದೆಹಲಿಯ ಪ್ರಗತಿ ಮೈದಾನ ಮಾದರಿ ಅಭಿವೃದ್ಧಿಪಡಿಸುವುದರಿಂದ ಈ ಭಾಗದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ.