ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಹಾಲು, ವಿದ್ಯುತ್ ದರಗಳನ್ನು ಏರಿಸಿದ್ದು, ಈಗ ಸರ್ಕಾರಿ ಬಸ್ ದರದಲ್ಲಿ ಶೇ.15 ರಷ್ಟು ಏರಿಕೆ ಮಾಡಿದೆ. ಖಾಸಗಿ ಬಸ್‌ಗಳಿಗಿಂತ ಕೆಎಸ್‌ಆರ್‌ಟಿಸಿ ಬಸ್‌ಗಳ ದರ ಹೆಚ್ಚಾಗಿರುವುದರಿಂದ ಜನರು ಖಾಸಗಿ ಬಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರು (ಜ.3): ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನೇ ಪ್ರಧಾನ ಅಸ್ತ್ರವನ್ನಾಗಿ ಮಾಡಿಕೊಂಡು, ಬಡವರ ಬದುಕನ್ನು ಹಸನಾಗಿಸಬೇಕು ಎನ್ನುವ ಧ್ಯೇಯದಲ್ಲಿ 5 ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರ ಹಿಡಿದುಕೊಂಡಿದ್ದ ಕಾಂಗ್ರೆಸ್‌ ಪಕ್ಷ, ಅಧಿಕಾರಕ್ಕೆ ಬಂದ ದಿನದಿಂದಲೂ ದಿನಬಳಕೆಯ ಅಗತ್ಯ ವಸ್ತುಗಳಾದ ಹಾಲು, ವಿದ್ಯುತ್ ದರಗಳಲ್ಲಿ ಏರಿಕೆ ಮಾಡಿತ್ತು. ನೀರಿನ ದರ ಏರಿಕೆಯ ಪ್ರಸ್ತಾಪವೂ ಸರ್ಕಾರದ ಮುಂದಿದೆ. ಇದರ ನಡುವೆ ಬಡ ಜನರ ಓಡಾಟದ ಏಕೈಕ ಮಾರ್ಗವಾಗಿದ್ದ ಸರ್ಕಾರಿ ಬಸ್‌ಗಳ ದರದಲ್ಲಿ ಬರೋಬ್ಬರಿ ಶೇ. 15ರಷ್ಟು ಏರಿಕೆಯನ್ನು ಸರ್ಕಾರ ಮಾಡಿದೆ. ಇನ್ನೊಂದೆಡೆ ವಿಪಕ್ಷ ಬಿಜೆಪಿ ರಾಜ್ಯದಲ್ಲಿ ಇದ್ದೂ ಇಲ್ಲಂದತಾಗಿದೆ. ಕೆಂಪುಬಸ್‌ಗಳಲ್ಲಿ ಓಡಾಟ ಮಾಡೋದೇ ರಾಜ್ಯದ ಜನರಿಗೆ ದುಸ್ತರವಾಗಿರುವಾದ, ಅಂಬಾರಿ, ಪಲ್ಲಕ್ಕಿಯನ್ನು ಜನರ ಬೆನ್ನ ಮೇಲೆ ಹೊರಿಸಿ ಸರ್ಕಾರ ರಾಜ್ಯ ಭಾರ ಮಾಡುತ್ತಿದೆ.

ಇಂದಿಗೂ ಬೇಕಾದರೆ ಕೇಳಿ ನೋಡಿ ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿಗೆ ನಷ್ಟವಾಗುತ್ತಿದೆ ಅನ್ನೋದನ್ನ ಸಿಎಂ ಆದಿಯಾಗಿ ಸರ್ಕಾರದ ಯಾರೊಬ್ಬನ್ನೂ ಒಪ್ಪಿಕೊಳ್ಳೋದಿಲ್ಲ. ಹಳೇ ಬಸ್‌ಗಳಲ್ಲಿ ಓಡಾಟ ಮಾಡೋದೇ ಕಷ್ಟವಾಗಿರುವಾಗ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹೊಸ ಬಸ್‌ಗಳ ಖರೀದಿ ಜೋರಾಗಿದೆ. ಇತ್ತೀಚೆಗೆ 20 ಅಂಬಾರಿ, ಪಲ್ಲಕ್ಕಿ ಬಸ್‌ಗಳನ್ನು ಸರ್ಕಾರ ಖರೀದಿ ಮಾಡಿದೆ. ಇದರಲ್ಲಿ ಒಂದು ಬಸ್‌ಗಳನ್ನು ಕೂಡ ಉತ್ತರ ಕರ್ನಾಟಕದ ಭಾಗದ ಕಡೆ ಬಿಟ್ಟಿಲ್ಲ ಅನ್ನೋದು ಬೇರೆ ಮಾತು. ಕೆಎಸ್‌ಆರ್‌ಟಿಸಿಯೇ ನಷ್ಟದಲ್ಲಿರುವಾಗ ಇಂಥದ್ದೊಂದು ಖರೀದಿಯ ಅಗತ್ಯವಿತ್ತೇ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಎಷ್ಟೇ ಹೊಸ ಬಸ್‌ಗಳು ಬಂದರೂ, ಅದನ್ನೂ ಮೂರೇ ವರ್ಷಗಳಲ್ಲಿ ಗುಜರಿಯಾಗಿ ಮಾಡೋದರಲ್ಲಿ ನಮ್ಮ ನಿಗಮಗಳು ಎಕ್ಸ್‌ಪರ್ಟ್‌ ಆಗಿವೆ. ಬಸ್‌ಗಳನ್ನು ಸೂಕ್ತ ರೂಪದಲ್ಲಿ ನಿರ್ವಹಣೆ ಮಾಡುವ ಕೆಲಸವೂ ಆಗುತ್ತಿಲ್ಲ. ಸರ್ಕಾರ ಕೂಡ ಸಿಕ್ಕಿದ್ದೇ ಚಾನ್ಸ್‌ ಎಂದು ಅಧಿಕಾರ ಬಂದ ಕೂಡಲೇ ಹೊಸ ಹೊಸ ಬಸ್‌ ಖರೀದಿ ಮಾಡಿ ನಾವು ಅಭಿವೃದ್ಧಿ ಮಾಡಿದ್ದಾಗಿ ಪೋಸ್‌ ಕೊಡಲು ಶುರು ಮಾಡುತ್ತಾರೆ. ಇದೆಲ್ಲದರ ಪರಿಣಾಮವೀಗ ಬಸ್‌ ದರ ಏರಿಕೆಯಲ್ಲಿ ಕಂಡಿದೆ.

ರಾಜ್ಯದ ಕೆಲವೊಂದು ಊರುಗಳಿಗೆ ಕೆಎಸ್‌ಆರ್‌ಟಿಸಿ ಸ್ಲೀಪರ್‌ ಬಸ್‌ಗಳಿಗಿಂತ ಖಾಸಗಿ ಬಸ್‌ಗಳೇ ಕಡಿಮೆ ದರದಲ್ಲಿ ಟಿಕೆಟ್‌ ನೀಡುತ್ತದೆ. ಬೆಂಗಳೂರಿನಿಂದ ಮಂಗಳೂರಿಗೆ ವಿಆರ್‌ಎಲ್‌ ಬಸ್‌ನಲ್ಲಿ ಸ್ಲೀಪರ್‌ ಕ್ಲಾಸ್‌ ದರ 510 ರೂಪಾಯಿ ಇದೆ. ಅದೇ ಕೆಎಸ್‌ಆರ್‌ಟಿಸಿ ನಾನ್‌ ಎಸಿ ಸ್ಲೀಪರ್‌ ದರ 900ಕ್ಕಿಂತ ಹೆಚ್ಚಿದೆ. ಇನ್ನು ಕೆಎಸ್‌ಆರ್‌ಟಿಸಿಯಲ್ಲಿರುವ ಬಿಳಿ ಆನೆಗಳಾದ ಐರಾವತ, ಪಲ್ಲಕ್ಕಿ ದರಗಳನ್ನು ಕೇಳೋದೇ ಬೇಡ. ಎಲ್ಲವೂ ಸಾವಿರಕ್ಕಿಂತ ಜಾಸ್ತಿ. ಖಾಸಗಿಯಲ್ಲೇ ಕಡಿಮೆ ದರ ಇರೋವಾಗ ಕೆಎಸ್‌ಆರ್‌ಟಿಸಿಯನ್ನು ಜನ ಯಾಕೆ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದಕ್ಕೆ ಸರ್ಕಾರವೇ ಉತ್ತರ ನೀಡಬೇಕು.

ಇನ್ನು ಬಸ್‌ ದರ ಏರಿಕೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಡಿರುವ ಟ್ವೀಟ್‌ ಕೂಡ ಮಜವಾಗಿದೆ. ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಇನ್ನೂ 'ರಿಪೀಟ್‌' ಮೋಡ್‌ನಲ್ಲೇ ಇದ್ದಾರೆ. ಈ ಬಾರಿಯೂ ದರ ಏರಿಕೆ ಮಾಡಿ, 'ಬೇರೆ ರಾಜ್ಯಕ್ಕಿಂತ ನಮ್ಮ ರಾಜ್ಯದಲ್ಲಿಯೇ ದರ ಏರಿಕೆ ಬಹಳ ಕಡಿಮೆ' ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಇಂಗಿತ ಟ್ವೀಟ್‌ನಲ್ಲಿ ಕಾಣುತ್ತಿದೆಯೇ ಹೊರತು, ಜನರ ಕಷ್ಟವನ್ನು ಅರಿಯುವ ಸಣ್ಣ ಕೆಲಸವೂ ಆಗಿಲ್ಲ ಅನ್ನೋದು ಬೇಸರದ ವಿಚಾರ.

ಅವರ ಟ್ವೀಟ್‌ ಇಲ್ಲಿದೆ. 'ಬಸ್ ದರ ಹೆಚ್ಚಳ ಖಂಡಿಸಿ, ಬಿಜೆಪಿಯವರು ಪ್ರತಿಭಟನೆ ಮಾಡಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಜನರನ್ನು ಹಾಗೂ ಅಭಿವೃದ್ಧಿಯನ್ನು ಮರೆತಿದ್ದರು. ಕೇಂದ್ರ ಸರ್ಕಾರದಲ್ಲಿರುವ ಬಿಜೆಪಿ ಡಾಲರ್ ಬೆಲೆ ಕಡಿಮೆಯಾದರೂ ಪೆಟ್ರೋಲ್ ಡೀಸೆಲ್ ಬೆಲೆ ಕಳೆದ 9 ವರ್ಷಗಳಿಂದ ಕಡಿಮೆ ಮಾಡಿಲ್ಲ ಹಾಗೂ ಇದೇ ಬಿಜೆಪಿ ತಾನು ಆಡಳಿತದಲ್ಲಿದ್ದಾಗ 2020ರಲ್ಲಿ ಬಸ್ ದರ ಹೆಚ್ಚಳ ಮಾಡಿದ್ದರು. ಆಗ ಅವರಿಗೆ ಜನರ ತೊಂದರೆ ತಿಳಿಯಲಿಲ್ಲವೇ ? ಬಡಜನರ ಗ್ಯಾಸ್ ಸಬ್ಸಿಡಿಯನ್ನು ನಿಲ್ಲಿಸಿದರು ಆಗ ಬಿಜೆಪಿ ಅವರಿಗೆ ಜನರ ಕಷ್ಟ ತಿಳಿಯಲಿಲ್ಲವೆ?

ಜ.5ರಿಂದ ಹೊಸ ದರ ಅನ್ವಯ; ಮೈಸೂರು, ಬಳ್ಳಾರಿ, ಶಿವಮೊಗ್ಗಕ್ಕೆ ಪರಿಷ್ಕೃತ ದರ ಇಲ್ಲಿದೆ ನೋಡಿ!

ಅಧಿಕಾರದಲ್ಲಿದ್ದಾಗ ಒಳ್ಳೆ ಆಡಳಿತ ನೀಡಿ ನಾಲಕ್ಕು ನಿಗಮಗಳನ್ನು ಅಭಿವೃದ್ಧಿ ಮಾಡಲು ಪ್ರಯತ್ನಿಸಿದ್ದರೆ ಈ ತೊಂದರೆ ನಮಗೆ ಬರುತ್ತಿರಲಿಲ್ಲ. ಸಮಯಕ್ಕೆ ತಕ್ಕನಾಗಿ ಬಸ್ ಖರೀದಿ ವೇತನ ಪರಿಷ್ಕರಣೆ, ನೇಮಕಾತಿ ಸೇರಿದಂತೆ ಎಲ್ಲವನ್ನು ಸಮಯ ತಕ್ಕನಾಗಿ ಮಾಡಿದರೆ ಇವಾಗ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಬಿಜೆಪಿಯವರು ಮಾಡಿರುವ ಆಡಳಿತ ಲೋಪದಿಂದ ಈಗ ನಮ್ಮ ತಲೆ ಮೇಲೆ ₹5900 ಕೋಟಿ ಸಾಲ ಇಟ್ಟು ಹೋಗಿದ್ದಾರೆ. ಅವರಿಗೆ ಮುಂಚೆನೇ ತಿಳಿದಿತ್ತೋ ಏನೋ 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಿಕೆ ಬರವಲ್ಲ ಎಂದು ತಿಳಿದು ಈ ರೀತಿಯ ಎಲ್ಲ ಕೆಟ್ಟ ಆಡಳಿತ ನಡೆಸಿ ನಮ್ಮ ತಲೆ ಮೇಲೆ ಕಟ್ಟಿದರು. 

ಬಸ್ ದರ ಶೇ.15 ಹೆಚ್ಚಳ; ಹೊಸ ವರ್ಷದಲ್ಲೂ ಗ್ಯಾರಂಟಿ ಭಾರ ಜನರ ಮೇಲೆ ಹಾಕಿದ ಸರ್ಕಾರ!

ನಾನು ಸಾರ್ವಜನಿಕರ ಗಮನ ಸೆಳೆಯಲು ಇಚ್ಛೆಸುತ್ತೇನೆ.. ನಾವು ಬಸ್ ದರ ಹೆಚ್ಚಿಸಿರುವುದು ಎಲ್ಲದಕ್ಕಿಂತ ಕಡಿಮೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನೋಡಿದರೆ ನಮ್ಮ ರಾಜ್ಯದಲ್ಲೇ ಕಡಿಮೆ ಇದೆ ಹಾಗೂ ಉತ್ತಮ ಸಾರಿಗೆ ವ್ಯವಸ್ಥೆ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ನಂಬರ್ 1. ಈಗಲಾದರೂ ಬಿಜೆಪಿಯವರು ಕೇವಲ ಸುಳ್ಳು ಹೇಳಿ ತನ್ನ ಟ್ವಿಟ್ಟರ್, ಫೇಕ್ ವಾಟ್ಸಪ್ ಸೋಷಿಯಲ್ ಮೀಡಿಯಾ ಯುನಿವರ್ಸಿಟಿಯಿಂದ ಜನರ ದಾರಿ ತಪ್ಪಿಸುವುದನ್ನು ಬಿಡಬೇಕು' ಎಂದು ಅವರು ಬರೆದುಕೊಂಡಿದ್ದಾರೆ.