ಬಸ್ ದರ ಶೇ.15 ಹೆಚ್ಚಳ; ಹೊಸ ವರ್ಷದಲ್ಲೂ ಗ್ಯಾರಂಟಿ ಭಾರ ಜನರ ಮೇಲೆ ಹಾಕಿದ ಸರ್ಕಾರ!
ಕರ್ನಾಟಕದಲ್ಲಿ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಾರಿಗೆ ನಿಗಮಗಳು ಸಾಲದ ಸುಳಿಗೆ ಸಿಲುಕಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು (ಜ.02): ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ದುಬಾರಿ ಬೆಲೆಯ ಭಾರವನ್ನು ಇಳಿಸುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಎಲ್ಲ ದರಗಳನ್ನು ಹೆಚ್ಚಳ ಮಾಡಿ ಬರೆ ಎಳೆಯುತ್ತಿದೆ. ಇದೀಗ ಪುನಃ ಸಾರಿಗೆ ನಿಗಮಗಳು ಸಾಲದ ಸುಳಿಗೆ ಸಿಲುಕಿವೆ ಎಂಬುದನ್ನು ಮನಗಂಡು ಇದೀಗ ಪುನಃ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡುವುದಕ್ಕೆ ಸಚಿವ ಸಂಪುಟದಿಂದ ಒಪ್ಪಿಗೆ ನೀಡಲಾಗಿದೆ. ಈ ಮೂಲಕ ಹೊಸ ವರ್ಷದಲ್ಲಿಯೂ ಗ್ಯಾರಂಟಿ ಭಾರವನ್ನು ಜನರ ಮೇಲೆ ಹಾಕಿ ಕೈ ತೊಳೆದುಕೊಂಡಿದೆ.
ನಿನ್ನೆ ಬಸ್ ದರ ಹೆಚ್ಚಳ ಪ್ರಸ್ತಾಪವಿಲ್ಲವೆಂದೇ ಬರೆ ಎಳೆದ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಸಂಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಸ್ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಹೀಗಾಗಿ, ರಾಜ್ಯದಲ್ಲಿ ಬಸ್ ದರ ಏರಿಕೆ ಮಾಡುವುದಿಲ್ಲ. ನಮ್ಮ ರಾಜ್ಯದಲ್ಲಿ ಗ್ಯಾರಂಟಿಗಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ಡೀಸೆಲ್-ಪೆಟ್ರೋಲ್ ಬೆಲೆ ಏರಿಸಬೇಕಾಯಿತು. ಈ ವರ್ಷ ಗ್ಯಾರಂಟಿ ಯೋಜನೆಗಳಿಗೆ ₹65 ಸಾವಿರ ಕೋಟಿ ನೀಡಬೇಕು. ಉಳಿದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಇದಕ್ಕೆಲ್ಲ ಸಂಪನ್ಮೂಲ ಸಂಗ್ರಹಿಸಬೇಕಲ್ಲವೇ ಎಂದು ಹೇಳಿದ್ದರು. ಇದಾಗಿ ಒಂದು ದಿನ ಬೆಳಗಾಗುವುದರಲ್ಲಿಯೇ ಬಸ್ ದರ ಶೇ.15ರಷ್ಟು ಹೆಚ್ಚಳಕ್ಕೆ ಅನುಮತಿ ನೀಡಿದ್ದಾರೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಹಾಗೂ ಬಿಎಂಟಿಸಿ ನಾಲ್ಕು ನಿಗಮಗಳು ಶಕ್ತಿ ಯೋಜನೆಯಿಂದ ಆದಾಯ ಹೆಚ್ಚಾಗಿ ಗಳಿಸುತ್ತಿದ್ದರೂ ಇಲ್ಲಿ ನಗದೀಕರಣ ಮಾತ್ರ ಸಂಗ್ರಹ ಆಗುತ್ತಿಲ್ಲ. ಮಹಿಳೆಯರ ಪ್ರಯಾಣವೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪುರುಷರಿಂದ ಸಂಗ್ರಹ ಆಗುತ್ತಿರುವ ಹಣ ನೌಕರರಿಗೆ ವೇತನ ಪಾವತಿ, ಬಾಕಿ ಪಾವತಿ, ನಿವೃತ್ತಿ ವೇತನ ಹಂಚಿಕೆ, ಮೃತ ನೌಕರರಿಗೆ ಹಣ ಸಂಚಿಕೆ ಹಾಗೂ ಸಾಲ ತೀರಿಸುವುದಕ್ಕೆ ಸಾಲುತ್ತಿಲ್ಲ. ಹೀಗಾಗಿ, ನಗದೀಕರಣ ಇಲ್ಲದೇ ನಿಗಮಗಳು ಸಂಕಷ್ಟಕ್ಕೆ ಸಿಲುಕಿದ್ದು 5,000 ರೂ. ಸಾಲ ಪಡೆಯಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಇದನ್ನು ಪರಿಶೀಲನೆ ಮಾಡಿದ್ದ ಸರ್ಕಾರ ತುಂಬಾ ಚರ್ಚೆ ಮಾಡಿ ನಾಲ್ಕೂ ನಿಗಮಗಳಿಂದ ಸೇರಿ 2,000 ಕೋಟಿ ರೂ. ಸಾಲ ಪಡೆಯುವುದಕ್ಕೆ ಅನುಮತಿಯನ್ನು ನೀಡಿ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್; ಸಾರಿಗೆ ಇಲಾಖೆಗೆ ₹2000 ಕೋಟಿ ಸಾಲ ಪಡೆಯಲು ಒಪ್ಪಿಗೆ ಕೊಟ್ಟ ಸರ್ಕಾರ!
ಇದೀಗ 2000 ಕೋಟಿ ಸಾಲದ ಪ್ರಸ್ತಾವನೆಗೆ ಘಟನೋತ್ತರವಾಗಿ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡುವುದಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಸರ್ಕಾರ ಒಂದೊಂದೇ ದರವನ್ನು ಹೆಚ್ಚಳ ಮಾಡಿ ಬರೆ ಎಳೆಯುತ್ತಿದೆ. ತಾನು ಕೊಟ್ಟಿದ್ದಕ್ಕಿಂತ ಜನರಿಂದ ಕಿತ್ತುಕೊಳ್ಳುವುದೇ ಜಾಸ್ತಿ ಎನ್ನುವಂತಾಗಿದೆ. ಇದೀಗ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಅದನ್ನು ಸಂಬಂಧಪಟ್ಟ ಇಲಾಖೆಯಿಂದ ಆದೇಶವನ್ನು ಸಿದ್ಧಪಡಿಸಿ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿ ಸಹಿಯೊಂದಿಗೆ ಆದೇಶವಾಗಿ ಜಾರಿಗೆ ತರಲಾಗುತ್ತದೆ. ಇದಕ್ಕೆ ಕನಿಷ್ಟ ಒಂದು ವಾರದಿಂದ ಗರಿಷ್ಠ 15 ದಿನಗಳು ತೆಗೆದುಕೊಳ್ಳಬಹುದು.
ಇದನ್ನೂ ಓದಿ: Bengaluru: ಶಕ್ತಿ ಯೋಜನೆಯಿಂದ ಖಾಲಿ ಅಯ್ತ KSRTC ಖಜಾನೆ, ಪೀಣ್ಯ ಬಸ್ ನಿಲ್ದಾಣ ಲೀಸ್‌ಗಿಟ್ಟ ಸರ್ಕಾರ!