ಬೆಂಗಳೂರು (ಅ.10):  ‘ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ಪ್ರತಿ ಬಡ ಕುಟುಂಬದ ಪ್ರತಿ ಸದಸ್ಯನಿಗೂ 10 ಕೆ.ಜಿ. ಅಕ್ಕಿ ನೀಡುತ್ತೇವೆ’ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಕಾಂಗ್ರೆಸ್‌ ರಾರ‍ಯಲಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ 7 ಕೆ.ಜಿ. ಅಕ್ಕಿ ನೀಡುತ್ತಿತ್ತು. ಇದೀಗ ಯಡಿಯೂರಪ್ಪ ಅವರು ಅದನ್ನು 5 ಕೆ.ಜಿ.ಗೆ ಇಳಿಸಿದ್ದಾರೆ. ಕಡಿಮೆ ಮಾಡದೆ ಹೆಚ್ಚಿಸಿದ್ದರೆ ಏನಾಗುತ್ತಿತ್ತು. ಅವರೇನು ಅವರ ಅಪ್ಪನ ಮನೆಯಿಂದ ಯೋಜನೆಗೆ ಹಣ ತಂದು ಕೊಡುತ್ತಿದ್ದಾರಾ? ನಾನೂ ನಮ್ಮ ಅಪ್ಪನ ಮನೆಯಿಂದ ಯೋಜನೆಗೆ ಹಣ ಕೊಟ್ಟಿರಲಿಲ್ಲ. ಮುಂದೆ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಾಗ 10 ಕೆ.ಜಿ. ಅಕ್ಕಿ ನೀಡುತ್ತೇವೆ’ ಎಂದು ಹೇಳಿದರು.

'ಕಾಂಗ್ರೆಸ್‌ಗೆ ಭಾರತದಲ್ಲಿ ಮತದಾರರೇ ಇಲ್ಲ, ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ನಿಂತರೆ ಗೆಲ್ಲಬಹುದು'

‘ಕಾಂಗ್ರೆಸ್‌ ಸರ್ಕಾರದ ನನ್ನ ಐದು ವರ್ಷಗಳ ಮುಖ್ಯಮಂತ್ರಿ ಅಧಿಕಾರಾವಧಿಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್‌ ನಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೆವು. ಇವತ್ತು ಬಡವರು ಎರಡು ಹೊತ್ತು ನೆಮ್ಮದಿಯಾಗಿ ಊಟ ಮಾಡುತ್ತಿದ್ದರೆ ಅನ್ನಭಾಗ್ಯ ಯೋಜನೆಯೇ ಕಾರಣ’ ಎಂದರು.