ಕೊಪ್ಪಳ(ಅ.22):  ಶಾಸಕ ಜಮೀರ್‌ ಅಹ್ಮದ್‌ ಹೇಳಿದಂತೆ ಸಿದ್ದರಾಮಯ್ಯ ಅವರು ಮತ್ತೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲು ಸಾಧ್ಯವೇ ಇಲ್ಲ. ಕಾಂಗ್ರೆಸ್‌ಗೆ ಭಾರತದಲ್ಲಿ ಮತದಾರರೇ ಇಲ್ಲದಂತೆ ಆಗಿದೆ. ಹೀಗಾಗಿ, ಸಿದ್ದರಾಮಯ್ಯ ಅವರು ಬೇಕಾದರೆ ಪಾಕಿಸ್ತಾನದಲ್ಲಿ ನಿಂತರೆ ಗೆಲ್ಲಬಹುದು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ. ರವಿ ವ್ಯಂಗ್ಯವಾಡಿದರು.

"

ಕೊಪ್ಪಳ ನಗರದ ಶಿವಶಾಂತ ಮಂಗಲ ಭವನದಲ್ಲಿ ವಿಧಾನಪರಿಷತ್‌ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಶಶಿಲ್‌ ನಮೋಶಿ ಅವರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವುದು ದೂರದ ಮಾತು. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಇವರು ಗೆದ್ದಿದ್ದು ಎಷ್ಟು? ಆಗ ಬಿಜೆಪಿ ಇನ್ನೊಂದಿಷ್ಟು ಕೆಲಸ ಮಾಡಿದ್ದರೆ ಕಾಂಗ್ರೆಸ್‌ ಪಕ್ಷ ಸೊನ್ನೆಯಾಗುತ್ತಿತ್ತು. ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿಯೇ ಸಿದ್ದರಾಮಯ್ಯ ಅವರು ಮೈಸೂರಿನಲಗಲೇ ಸೋತು ಸುಣ್ಣವಾದರು. ಇನ್ನು ಬಾದಾಮಿಯಲ್ಲಿ ತಿಣುಕಾಡಿ ಗೆದ್ದಿದ್ದಾರೆ. ಕಾಂಗ್ರೆಸ್‌ಗೆ ಇಲ್ಲಿ ಮತದಾರರು ಇಲ್ಲದಂತೆ ಆಗಿದ್ದು, ಪಾಕಿಸ್ತಾನ ಅಥವಾ ಚೀನಾದಲ್ಲಿ ಹೋಗಿ ಸ್ಪರ್ಧೆ ಮಾಡಿದರೆ ಗೆಲ್ಲಬಹುದು ಎಂದು ಕುಟುಕಿದರು.

ವಿಧಾನಪರಿಷತ್‌ ಚುನಾವಣೆಯಲ್ಲಿ ಗೆದ್ದೇಗೆಲ್ಲುತ್ತೇವೆ. ಇದು ಮುಂದಿನ ಚುನಾವಣೆಯ ದಿಕ್ಸೂಚಿ ಅಂತೆಲ್ಲ ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಗೆಲ್ಲುವುದು ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದರು. ಸಿದ್ದರಾಮಯ್ಯ ಈಗ ಮತ್ತೆ ಹಿಂದುಳಿದ ವರ್ಗದವರ ಬಗ್ಗೆ, ದಲಿತರ ಬಗ್ಗೆ ಮಾತನಾಡುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಅದು ನೆನಪಾಗಲೇ ಇಲ್ಲವೇ? ಹಾಗೆ ನೋಡಿದರೆ ಅಂಬೇಡ್ಕರ್‌ ಅವರನ್ನು ಎರಡು ಬಾರಿ ಸೋಲಿಸಿದವರು ಕಾಂಗ್ರೆಸ್‌ನವರು. ಅಂಬೇಡ್ಕರ್‌ ಅವರ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್‌ನವರಿಗೆ ಇಲ್ಲ. ಅಂಬೇಡ್ಕರ್‌ ಅವರಿಗೆ ಗೌರವ ಕೊಟ್ಟಿದ್ದು ಬಿಜೆಪಿ ಸರ್ಕಾರ ಬಂದ ಮೇಲೆ. ಅವರ ದೆಹಲಿಯ ಮನೆಯನ್ನು ಸ್ಮಾರಕ ಮಾಡಿದ್ದೇವೆ. ಅವರ ಕುರಿತು ಸಾಕಷ್ಟುಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ. ಆದರೆ, ಕಾಂಗ್ರೆಸ್‌ ಅಧಿಕಾರದಲ್ಲಿ ಇರುವವರೆಗೂ ಅವರಿಗೆ ಗೌರವ ನೀಡಲೇ ಇಲ್ಲ ಎಂದರು.

ಅಧಿಕಾರ ಬಿಟ್ಟು ಕೆಳಗಿಳಿಯಿರಿ, ನಾವು ಮ್ಯಾನೇಜ್‌ ಮಾಡ್ತೇವೆ: ಬಿಎಸ್‌ವೈ ಸರ್ಕಾರಕ್ಕೆ ಸಿದ್ದು ಟಾಂಗ್‌

ವಿರೋಧ ಪಕ್ಷವಾಗುವುದಕ್ಕೂ ಯೋಗ್ಯತೆ ಇಲ್ಲ

ಕಾಂಗ್ರೆಸ್‌ ನಾಯಕರಿಗೆ ವಿರೋಧ ಪಕ್ಷವಾಗುವುದಕ್ಕೂ ಯೋಗ್ಯತೆ ಇಲ್ಲ. ಬರಿ ಟ್ವೀಟರ್‌ನಲ್ಲಿಯೇ ಕಾಲಕಳೆಯುವ ಇವರು ಅದನ್ನೇ ಸಾಧನೆ ಎಂದುಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಾಟೆ ಕಾಂಗ್ರೆಸ್‌ ಕುಮ್ಮಕ್ಕಿನಿಂದಲೇ ಆಗಿದೆ. ಅಲ್ಲಿ ಯಾವುದೇ ಹಿಂದೂಗಳ ಪಾತ್ರವೇ ಇಲ್ಲ. ಆದರೂ ಅದನ್ನು ಕೋಮುಗಲಭೆ ಎಂದು ಬಿಂಬಿಸಲು ಹೋದರು. ಆದರೆ, ವಾಸ್ತವದಲ್ಲಿ ಅದು ಕಾಂಗ್ರೆಸ್‌ ಪಕ್ಷದಲ್ಲಿನ ಒಳಜಗಳವಾಗಿದೆ. ಕಾಂಗ್ರೆಸ್‌ ಶಾಸಕನನ್ನೇ ರಕ್ಷಣೆ ಮಾಡಿಕೊಳ್ಳುವುದು ಆಗಲಿಲ್ಲ ಇವರಿಗೆ. ಇಂಥವರು ಬಿಜೆಪಿ ಕುರಿತು ಮಾತನಾಡುತ್ತಾರೆ. ಅದೇನೋ ಉಪ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆಯಂತೆ. ಇವರು ಇದುವರೆಗೂ ಎದುರಿಸಿದ ಚುನಾವಣೆಯಲ್ಲಿ ಎಷ್ಟುಗೆದ್ದಿದ್ದಾರೆ? ಲೋಕಸಭಾ ಚುನಾವಣೆಯಲ್ಲಿ ಎಷ್ಟುಸ್ಥಾನ ಗೆದ್ದಿದ್ದಾರೆ? ಈಗ ಉಪ ಚುನಾವಣೆ ದಿಕ್ಸೂಚಿಯಾಗಲಿದೆ ಎನ್ನುತ್ತಿದ್ದಾರೆ. ನಾನು ಈ ಸವಾಲನ್ನು ಸ್ವೀಕಾರ ಮಾಡುತ್ತೇನೆ. ಅದೇನು ಆಗುತ್ತದೆಯೋ ನೋಡಿಯೇ ಬಿಡೋಣ. ಕಾಂಗ್ರೆಸ್‌ನವರು ಇನ್ನು ಅಧಿಕಾರದ ಕನಸು ಸಹ ಕಾಣುವಂತೆ ಇಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಉಪ ಚುನಾವಣೆಯಲ್ಲಿ ನಾವು ಗೆಲ್ಲುವುದು ನಿಶ್ಚಿತ. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಶಶೀಲ್‌ ನಮೋಶಿ ಅವರ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು. ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್‌, ಪರಣ್ಣ ಮುನವಳ್ಳಿ, ಬಸವರಾಜ ದಡೆಸುಗೂರು, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ, ಅಭ್ಯರ್ಥಿ ಶಶಿಲ್‌ ನಮೋಶಿ, ಹೇಮಲತಾ ಪರೀಕ್ಷಿತರಾಜ, ಅಶ್ವತ್ಥನಾರಾಯಣ್‌, ಕೆ. ಶರಣಪ್ಪ, ವಿರೂಪಾಕ್ಷಪ್ಪ ಸಿಂಗನಾಳ, ಅಮರೇಶ ಕರಡಿ, ಸಿ.ವಿ. ಚಂದ್ರಶೇಖರ, ಸಿದ್ದೇಶ ಯಾದವ್‌, ಪ್ರಭು ಕಗ್ಗಲ್‌, ಈಶಪ್ಪ ಹಿರೇಮನಿ, ಉಮೇಶ ಸಜ್ಜನ್‌ ಇದ್ದರು. ಚಂದ್ರಶೇಖರ ಹಲಿಗೇರಿ ಕಾರ್ಯಕ್ರಮ ನಿರೂಪಿಸಿದರು.