ನಟ ವಿಷ್ಣುವರ್ಧನ್ ಸಮಾಧಿ ನೆಲೆಸಮಗೊಳಿಸುವ ಘಟನೆ ಕನ್ನಡಿಗರ ಆಕ್ರೋಶಕ್ಕೆ ಕಾರಣಾಗಿದೆ. ಹಲವು ಈ ಕುರಿತು ಪ್ರತಿಕ್ರಿಯೆಸಿದ್ದಾರೆ. ಇದೀಗ ಕೇಂದ್ರ ಸಚಿವ ಶೋಭಾ ಕರದ್ಲಾಂಜೆ ವಿಷ್ಣು ಸಮಾಧಿ ಉಳಿಸಿ, ಕಲಾ ಗ್ರಾಮವಾಗಿ ಅಭಿವೃದ್ಧಿಪಡಿಸಲು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಬೆಂಗಳೂರು (ಆ.10) ಕನ್ನಡ ಮೇರು ನಟ, ಸಾಹಸ ಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅಗಳಿದ ಬಳಿಕ ಪದೇ ಪದೇ ವಿವಾದಗಳೇ ಸೃಷ್ಟಿಯಾಗುತ್ತಿದೆ. ಸಮಾಧಿ, ಸ್ಮಾರಕ ಕುರಿತು ಹಲವು ಹಗ್ಗಾಜಗ್ಗಾಟ, ವಿವಾದಗಳು ನಡೆದಿದೆ. ಇದೀಗ ಏಕಾಏಕಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸಮಾಧಿಯನ್ನೇ ನೆಲಸಮಗೊಳಿಸಿದ ಘಟನೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ಕುರಿತು ನಟ ನಟಿಯರು ಪ್ರತಿಕ್ರಿಯಿಸಿದ್ದಾರೆ. ಇದೀಗ ಕೇಂದ್ರದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಈ ಘಟನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಡಾ.ವಿಷ್ಣುವರ್ಧನ್ ಸಮಾಧಿ ಉಳಿಸಿ, ಕಲಾ ಗ್ರಾಮವಾಗಿ ಅಭಿವೃದ್ಧಿಪಡಿಸಲು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಶೋಭಾ ಕರಂದ್ಲಾಜೆ ಮನವಿಯೇನು?

ಕರ್ನಾಟಕದ ಚಲನಚಿತ್ರ ಲೋಕದಲ್ಲಿ ಸಾಹಸಸಿಂಹ ಎಂದು ಹೆಸರಾಂತ, ಜನಮನಗಳನ್ನು ಗೆದ್ದ. ಶ್ರೇಷ್ಠ ನಟ. ಪದ್ಮಭೂಷಣ ಪುರಸ್ಕೃತ, ಸಂಸ್ಕೃತಿ ಪ್ರೇಮಿ ಡಾ. ವಿಷ್ಣುವರ್ಧನ್ ಅವರ ಸೇವೆ ಮತ್ತು ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ. ಕನ್ನಡ ಮತ್ತು ಕರ್ನಾಟಕದ ಹೆಸರನ್ನು ದೇಶದಾದ್ಯಂತ ಪರಿಚಯಿಸಿದ ಮಹಾನ್ ವ್ಯಕ್ತಿಯಾಗಿದ್ದರು. ಬೆಂಗಳೂರಿನ ಆಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ಡಾ. ವಿಷ್ಣುವರ್ಧನ್ ರವರ ಸ್ಮಾರಕ, ಕನ್ನಡಾಭಿಮಾನಿಗಳ ಹೃದಯದಲ್ಲಿ ಭಾವನಾತ್ಮಕ ಪ್ರೇರಣೆಯ ಕೇಂದ್ರವಾಗಿದೆ. ಆದರೆ ಇತ್ತೀಚೆಗೆ, ಸ್ಮಾರಕ ಇರುವ ಜಾಗವನ್ನು ಕೆಲವರು ತಮ್ಮ ಹಕ್ಕು ಭೂಮಿಯೆಂದು ಹೇಳಿಕೊಂಡು ರಾತ್ರೋರಾತ್ರಿ ಧ್ವಂಸ ಮಾಡಿರುವುದು ನಮ್ಮೆಲ್ಲರಿಗೂ ಭಾರೀ ನೋವು ತಂದಿದೆ. ಡಾ. ವಿಷ್ಣುವರ್ಧನ್ ಸ್ಮಾರಕವನ್ನು ಶಾಶ್ವತವಾಗಿ ಕಾಪಾಡಿ, ಅದನ್ನು ರಾಷ್ಟ್ರೀಯ ಮಟ್ಟದ ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿ, ಕಲೆಯ ಪ್ರದರ್ಶನ, ತರಬೇತಿಯ ಕಲಾ ಗ್ರಾಮವಾಗಿ ಹಾಗೂ ಕನ್ನಡ ಸಂಸ್ಕೃತಿಯ ಪ್ರತೀಕವಾಗಿ ಅಭಿವೃದ್ಧಿಪಡಿಸುವಂತೆ ಕೋರುತ್ತೇನೆ. ಈ ಹಿನ್ನೆಲೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸದರಿ ಭೂಮಿಯನ್ನು ತಕ್ಷಣವೇ ಭೂಸ್ವಾಧೀನಪಡಿಸಿಕೊಳ್ಳಬೇಕು ಹಾಗು ಭೂ ಮಾಲೀಕರಿಗೆ ಸರ್ಕಾರದ ನಿಯಮಾನುಸಾರ ನ್ಯಾಯಸಮ್ಮತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಶೋಭಾ ಕರಂದ್ಲಾಜೆ ಸಿಎಂಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ರಾತ್ರೋ ರಾತ್ರಿ ಸಮಾಧಿ ತೆರವು ಮಾಡಿದ್ದ ಬಾಲಣ್ಣ ಕುಟುಂಬ

ಅಭಿಮಾನ್ ಸ್ಟುಡಿಯೋ ಆರಂಭಿಸಿದ್ದ ಬಾಲಣ್ಣ ಸಮಾಧಿಯೂ ಇದೇ ಜಾಗದಲ್ಲಿದೆ. ಆಗಸ್ಟ್ 8 ರಂದು ಬಾಲಣ್ಣ ಕುಟುಂಬ ಸದಸ್ಯರು ರಾತ್ರೋರಾತ್ರಿ ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮಗೊಳಿಸಿದ್ದರು. ಯಾರಿಗೂ ತಿಳಿಯದಂತೆ ಸಮಾಧಿ ನೆಲಸಮಗೊಳಿಸಿತ್ತು. ಆದರೆ ಮಾಹಿತಿ ಹೊರಬೀಳುತ್ತಿದ್ದಂತೆ ವಿಷ್ಣುವರ್ಧನ್ ಅಭಿಮಾನಿಗಳು, ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿತ್ತು. ಈ ಕುರಿತು ಪ್ರತಿಭಟನೆ ಹೋರಾಟ ನಡೆಸಿತ್ತು. ಸೋಶಿಯಲ್ ಮೀಡಿಯಾ ಮೂಲಕವೂ ಅಭಿಮಾನಿಗಳು ಹೋರಾಟ ಆರಂಭಿಸಿದ್ದಾರೆ.

ಹಲವು ನಟ ನಟಿಯರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿರುವುದು ಅತೀ ದೊಡ್ಡ ಅಪರಾಧ ಎಂದಿದ್ದಾರೆ. ವಾಣಿಜ್ಯ ಉದ್ದೇಶಕ್ಕಾಗಿ ಈ ಅಭಿಮಾನಿಗಳ ನೆಚ್ಚಿನ ನಟನ ಸಮಾಧಿಯನ್ನು ಈ ರೀತಿ ಮಾಡಿರುವುದು ನಿಜಕ್ಕೂ ದುರಂತ ಎಂದು ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.