Asianet Suvarna News Asianet Suvarna News

ಶಿವಮೊಗ್ಗ ಸುಬ್ಬಣ್ಣಗೆ ಭಾವಪೂರ್ಣ ಅಂತಿಮ ವಿದಾಯ: ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ನಗರದಲ್ಲಿ ಹೃದಯಾಘಾತದಿಂದ ನಿಧನರಾದ ಕರ್ನಾಟಕ ಸುಗಮ ಸಂಗೀತದ ಪ್ರಸಿದ್ಧ ಗಾಯಕ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿವಮೊಗ್ಗ ಸುಬ್ಬಣ್ಣ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. 

Shivamogga Subbanna funeral with all the government honour gvd
Author
Bangalore, First Published Aug 13, 2022, 3:45 AM IST

ಬೆಂಗಳೂರು (ಆ.13): ನಗರದಲ್ಲಿ ಹೃದಯಾಘಾತದಿಂದ ನಿಧನರಾದ ಕರ್ನಾಟಕ ಸುಗಮ ಸಂಗೀತದ ಪ್ರಸಿದ್ಧ ಗಾಯಕ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿವಮೊಗ್ಗ ಸುಬ್ಬಣ್ಣ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಬನಶಂಕರಿ ವಿದ್ಯುತ್‌ ಚಿತಾಗಾರದಲ್ಲಿ ಶಿವಮೊಗ್ಗ ಸುಬ್ಬಣ್ಣ ಅವರ ಪುತ್ರ ಶ್ರೀರಂಗ ಅವರು ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಸಿದರು. ಅಂತ್ಯಕ್ರಿಯೆಯಲ್ಲಿ ಸುಬ್ಬಣ್ಣ ಅವರ ಪುತ್ರಿ ಭಾಗೇಶ್ರೀ, ಸೊಸೆ ಅರ್ಚನಾ ಉಡುಪ ಸೇರಿದಂತೆ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಅದಕ್ಕೂ ಮುನ್ನ ಬೆಳಗ್ಗೆ 10.30ಕ್ಕೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಕಂದಾಯ ಸಚಿವ ಆರ್‌.ಅಶೋಕ್‌, ಸಚಿವರಾದ ನಾರಾಯಣಗೌಡ, ಸುನಿಲ್‌ಕುಮಾರ್‌, ಮಾಜಿ ಸಚಿವ ಈಶ್ವರಪ್ಪ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ನಾಗತಿಹಳ್ಳಿ ಚಂದ್ರಶೇಖರ್‌, ಮುಖ್ಯಮಂತ್ರಿ ಚಂದ್ರು, ಪಿಇಎಸ್‌ ಕಾಲೇಜು ಕುಲಪತಿ ಡಾ.ದೊರೆಸ್ವಾಮಿ ಅವರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Shivamogga Subbanna Passed Away: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಹಿರಿಯ ನಟ ಜೈಜಗದೀಶ್‌, ಕಸಾಪ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಾಶೆಟ್ಟಿ, ಸಂಗೀತ ಕಟ್ಟಿ, ವೈ.ಕೆ.ಮುದ್ದುಕೃಷ್ಣ, ರಮೇಶ್‌ಚಂದ್ರ, ವೇಮಗಲ್‌ ನಾರಾಯಣಸ್ವಾಮಿ, ಚಲನಚಿತ್ರ ವಾಣಿಜ್ಯ ಮಂಡಳಿಯ ಇತರೆ ಪದಾಧಿಕಾರಿಗಳು, ಗಾಯಕರುಗಳು ಸೇರಿದಂತೆ ಹಲವರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಒಂದೆಡೆ ಗಣ್ಯರು, ಅಭಿಮಾನಿಗಳು, ಸಾರ್ವಜನಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದರೆ, ಮತ್ತೊಂದೆಡೆ ಗಾಯಕರಾದ ಕಿಕ್ಕೇರಿ ಕೃಷ್ಣಮೂರ್ತಿ, ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು ಸೇರಿದಂತೆ ಮತ್ತಿತರ ಗಾಯಕರುಗಳು ಅಗಲಿದ ಹಿರಿಯ ಚೇತನ ಶಿವಮೊಗ್ಗ ಸುಬ್ಬಣ್ಣ ಅವರು ಹಾಡಿದಂತ ಹಾಡುಗಳನ್ನು ಹಾಡುವ ಮೂಲಕ ಗೀತ ನಮನ ಸಲ್ಲಿಸಿದರು.

ಶಿವಮೊಗ್ಗ ಸುಬ್ಬಣ್ಣರ ಅಗಲಿಕೆಗೆ ಕಾಗೇರಿ ಸಂತಾಪ: ಒಡನಾಡಿ, ಹಿತೈಷಿ ಆಗಿದ್ದ ಶಿವಮೊಗ್ಗ ಸುಬ್ಬಣ್ಣ ನಾಡಿನ ಹೆಸರಾಂತ ಗಾಯಕರಾಗಿದ್ದರು. ವೃತ್ತಿಯಿಂದ ವಕೀಲರಾಗಿ ಅಪಾರ ಜನಮನ್ನಣೆ ಗಳಿಸಿದ್ದ ಸುಬ್ಬಣ್ಣ ಹಿನ್ನೆಲೆ ಗಾಯಕರಾಗಿ ಉತ್ತಮ ಹೆಸರು ಸಂಪಾದಿಸಿದ್ದರು. ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದ ಇವರು ಸರಳ-ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಶ್ರೀಯುತರ ಆತ್ಮಕ್ಕೆ ಭಗವಂತನು ಚಿರಶಾಂತಿ ದಯಪಾಲಿಸಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ಅವರ ಅಗಲುವಿಕೆಯ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ, ಕನ್ನಡದಲ್ಲಿ ಟ್ವೀಟ್!

ಗಾಯ​ಕ ಸುಬ್ಬಣ್ಣ ಕೊಡುಗೆ ಅಪಾರ: ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನದಿಂದ ಸಂಗೀತ ಕ್ಷೇತ್ರಕ್ಕೆ ಅಪಾರ ನಷ್ಟಉಂಟಾಗಿದೆ. ತಮ್ಮದೇ ಆದ ಹಾಡಿನ ಶೈಲಿಯಲ್ಲಿ ಹಾಡುಗಳನ್ನು ಹಾಡುವುದರ ಜೊತೆಗೆ ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸಿ ಅಪಾರ ಕೊಡುಗೆ ನೀಡಿದ್ದರು ಎಂದು ಮಾಜಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಶ್ರೀಮಂದಾರ ತಿಳಿಸಿದ್ದಾರೆ. ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟು ಹಿನ್ನೆಲೆ ಗಾಯಕ ಎಂಬ ಹೆಗ್ಗಳಿಕೆ ಸುಬ್ಬಣ್ಣ ಹೊಂದಿದ್ದರು. ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಸಂತ ಶಿಶುನಾಳ ಶರೀಫ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದರು. ಕುವೆಂಪು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿ ಪುರಸ್ಕರಿಸಿತ್ತು. ಸಂಗೀತ ಪ್ರೇಮಿಗಳ ಮನದಲ್ಲಿ ತಮ್ಮ ಹಾಡುಗಳ ಮೂಲಕ ಶಾಶ್ವತವಾಗಿ ಉಳಿದಿದ್ದಾರೆ ಎಂದು ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios