ನೀರಿನ ಮೇಲೆ ವಿಮಾನಗಳು ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಲು ನಿರ್ದಿಷ್ಟ ಸ್ಥಳ ಗುರುತಿಸಿ ವಿಮಾನ ನಿಲ್ದಾಣ ನಿರ್ಮಿಸಿ ವಾಟರ್ ಏರೋ ಡ್ರೋಮ್ ಮಾಡಲಾಗುತ್ತದೆ.
ಶಿವಮೊಗ್ಗ (ಆ.29): ಇತ್ತೀಚಿಗಷ್ಟೇ ದೇಶದ ಎರಡನೇ ಅತಿ ಉದ್ದದ ಸೇತುವೆ ಉದ್ಘಾಟನೆ ಕಂಡಿರುವ ಶಿವಮೊಗ್ಗ ಜಿಲ್ಲೆಯ ಸಿಗಂದೂರು ಭಾಗದಲ್ಲಿ ಪ್ರವಾಸಿಗರನ್ನು ಸೆಳೆಯಲು ಶರಾವತಿ ಹಿನ್ನೀರಿನಲ್ಲಿ ವಾಟರ್ ಏರೋಡ್ರಮ್ ಸ್ಥಾಪಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಸಿದ್ಧತೆ ನಡೆಸಿದೆ ಈ ಕುರಿತು ಒಂದು ವರದಿ. ದೇಶದಲ್ಲಿಯೇ ಎರಡನೇ ಅತಿ ಉದ್ದದ ಕೇಬಲ್ ತಂತ್ರಜ್ಞಾನ ಆಧಾರಿತ ಸಿಗಂದೂರು ಸೇತುವೆ ಉದ್ಘಾಟನೆ ಬೆನ್ನಲ್ಲೇ ಇದೀಗ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ವಾಟರ್ ಏರೋಡ್ರಮ್ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಶಿವಮೊಗ್ಗ ಜಿಲ್ಲೆಯ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ದೊಡ್ಡ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಈ ಹಿಂದೆ ಲಾಂಚ್ ನಲ್ಲಿ ಶರಾವತಿ ನದಿ ದಾಟಿ ಭಕ್ತರು ದೇಗುಲಕ್ಕೆ ಹೋಗಿ ಬರುತ್ತಿದ್ದ ಪ್ರವಾಸಿಗರು ಶರಾವತಿ ಹಿನ್ನೀರಿನಲ್ಲಿ ಲಾಂಚ್ ಪ್ರಯಾಣದ ರುದ್ರರಮಣೀಯ ಅನುಭವವನ್ನು ತಮ್ಮದಾಗಿಸಿ ಕೊಳ್ಳುತ್ತಿದ್ದರು. ಈಗ ಕೇಬಲ್ ಆಧಾರಿತ ತಂತ್ರಜ್ಞಾನದ ಅತಿ ಉದ್ದವಾದ ಸೇತುವೆ ನಿರ್ಮಾಣವಾಗಿದ್ದು, ಮತ್ತಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ. ತೆಗೆದುಕೊಂಡಿರುವ ಲಾಂಚ್ ಸೇವೆ ಬಳಸಿಕೊಂಡು ಸಿಗಂದೂರು ಸೇತುವೆ ಆಚೀಚೆ ಲಾಂಚ್ ನಲ್ಲಿಯೇ ಹೊಟೇಲ್ ಆರಂಭಿಸುವ ಕುರಿತು ಚರ್ಚೆಗಳು ಚಾಲ್ತಿಯಲ್ಲಿದೆ.
ಹೀಗಿರುವಾಗಲೇ ಕೇಂದ್ರ ಸರ್ಕಾರ ಲಿಂಗನಮಕ್ಕಿ ಜಲಾಶಯದ ಶರಾವತಿ ನದಿ ಹಿನ್ನೀರಿನಲ್ಲಿ ವಾಟರ್ ಏರೋಡ್ರೋಮ್ ಸ್ಥಾಪಿಸುವ ಯೋಜನೆ ರೂಪಿಸಿದ್ದು ಪ್ರವಾಸಿಗರಲ್ಲಿ ಕುತೂಹಲದ ಜೊತೆಗೆ ರೋಮಾಂಚನ ಮೂಡಿಸಿದೆ. ಅಷ್ಟೇ ಅಲ್ಲದೆ ಇದರಿಂದ ಪ್ರವಾಸಿಗರ ಸಂಖ್ಯೆ ಮತ್ತು ಹೆಚ್ಚಾಗುವ ನಿರೀಕ್ಷೆ ಮೂಡಿಸಿದೆ. ಕರಾವಳಿ ಮತ್ತು ಮಲೆನಾಡು ಸೇರಿದಂತೆ ಕರ್ನಾಟಕದ 7 ಕಡೆ ಉಡಾನ್ ಯೋಜನೆ ಅಡಿ ವಾಟರ್ ಏರೋ ಡ್ರೋಮ್ ಸ್ಥಾಪಿಸಲು ಕೇಂದ್ರ ವಿಮಾನಯಾನ ಸಚಿವಾಲಯದಿಂದ ಸ್ಥಳ ಗುರುತಿಸಲಾಗಿದೆ.
ನೀರಿನ ಮೇಲೆ ವಿಮಾನಗಳು ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಲು ನಿರ್ದಿಷ್ಟ ಸ್ಥಳ ಗುರುತಿಸಿ ವಿಮಾನ ನಿಲ್ದಾಣ ನಿರ್ಮಿಸಿ ವಾಟರ್ ಏರೋ ಡ್ರೋಮ್ ಮಾಡಲಾಗುತ್ತದೆ. ಸಾಮಾನ್ಯವಾಗಿ ವಿಸ್ತಾರವಾದ ನದಿಗಳು, ಜಲಾಶಯಗಳ ಹಿನ್ನೀರು ಭಾಗ, ಕರಾವಳಿ ಪ್ರದೇಶಗಳಲ್ಲಿ ವಾಟರ್ ಏರೋಡ್ರೋಮ್ ನಿರ್ಮಿಸಲಾಗುತ್ತದೆ. ಇದೀಗ ಸಿಗಂದೂರು ಸೇತುವೆ ಸಮೀಪ ಶರಾವತಿ ನದಿ ಹಿನ್ನಿರಿನಲ್ಲಿ ಕೇಂದ್ರ ಸರ್ಕಾರದ ಉಡಾನ್ 5.5 ಯೋಜನೆ ಅಡಿ ವಾಟರ್ ಏರೋಡ್ರೋಮ್ ನಿರ್ಮಾಣಕ್ಕೆ ಉತ್ಸುಕವಾಗಿದೆ. ಇನ್ನು ಸಿಗಂದೂರು ಸಮೀಪದ ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನಲ್ಲಿ ವಾಟರ್ ಏರೋಡ್ರಮ್ ಸ್ಥಾಪನೆ ಪ್ರವಾಸಿಗರನ್ನು ಮತ್ತಷ್ಟು ಸೆಳೆಯಲಿದೆ.
