ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಯಾವುದೇ ವಿವಾದವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

ತುಮಕೂರು (ಜು.15): ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಯಾವುದೇ ವಿವಾದವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಗಂದೂರು ಸೇತುವೆ ಉದ್ಘಾಟನೆಗೆ ಯಾರ ವಿರೋಧವೂ ಇಲ್ಲ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ ಅವರೇ ಬಂದು ಉದ್ಘಾಟನೆ ಮಾಡಲು ಮುಂದಾಗಿದ್ದಾರೆ. ಈ ಉದ್ಘಾಟನೆಯನ್ನು ಮುಂದಕ್ಕೆ ಹಾಕಿ ಎಂದಷ್ಟೇ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ.

ಆ ಮೂಲಕ ಈ ಸೇತುವೆ ಉದ್ಘಾಟನೆ ಸಂಬಂಧ ರಾಜ್ಯ ಸರ್ಕಾರದ ವಿರೋಧವನ್ನು ಸಮರ್ಥಿಸಿಕೊಂಡರು. ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ರಾಜ್ಯ ಸರ್ಕಾರದ್ದೂ ಪಾಲು ಇರುತ್ತದೆ ಎಂದು ಅವರು ಹೇಳಿದರು. ಒಂದೊಂದು ಬಾರಿ ಮುಖ್ಯಮಂತ್ರಿಗಳು ಉದ್ಘಾಟನಾ ಕಾರ್ಯಕ್ರಮಗಳಿಗೆ ಹೋಗಲು ಸಾಧ್ಯವಾಗದಿದ್ದಾಗ ನಮ್ಮಲ್ಲೇ ಇರುವ ಒಬ್ಬರು ಸಚಿವರೊಬ್ಬರನ್ನು ನಿಯೋಜಿಸುತ್ತಾರೆ. ಇದು ರಾಜ್ಯ ಸರ್ಕಾರದ ಪದ್ದತಿ. ಆದರೆ ಎಲ್ಲೋ ಒಂದು ಕಡೆ ಈ ವಿಚಾರದಲ್ಲಿ ಸಂವಹನ ಸಮಸ್ಯೆ ಆಗಿರಬಹುದು. ಅದನ್ನು ಸರಿಪಡಿಸಿಕೊಂಡರಾಯಿತು ಎಂದರು.

ರೇಷ್ಮೆ ಹೆಚ್ಚು ಲಾಭದಾಯಕ: ರೇಷ್ಮೆ ಕೃಷಿಯು ಹೆಚ್ಚು ಲಾಭ ತರುವ ಕೃಷಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ರೇಷ್ಮೆ ಇಲಾಖೆ ಸಹಯೋಗದಲ್ಲಿ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ರೇಷ್ಮೆ ಬೆಳೆಗಾರರ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರೇಷ್ಮೆ ಉದ್ಯಮ 200 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿದೆ. ಹಿಪ್ಪುನೇರಳೆಯನ್ನು ಅವಲಂಬಿಸಿ ರೇಷ್ಮೆ ಕೃಷಿ ಮಾಡುವ ಪದ್ಧತಿ ದೇಶದ ಯಾವುದೇ ಭಾಗದಲ್ಲಿ ಕಾಣ ಸಿಗುವುದಿಲ್ಲ.

ಕರ್ನಾಟಕದಲ್ಲಿ ಉತ್ಪಾದಿಸುವ ಮೈಸೂರು ರೇಷ್ಮೆ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಹೆಣ್ಣಿನ ಅಂದ ಹೆಚ್ಚಿಸುವ ಮೈಸೂರು ರೇಷ್ಮೆಯಂತಹ ಗುಣಮಟ್ಟಕ್ಕೆ ಯಾವುದೇ ರೇಷ್ಮೆ ಸರಿಸಾಟಿಯಿಲ್ಲ ಎಂದು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚಿನ ಕೃಷಿಕರು ರೇಷ್ಮೆ ಉದ್ಯಮವನ್ನು ಅವಲಂಬಿಸಿದ್ದಾರೆ. ಪ್ರಾರಂಭದಲ್ಲಿ ರಾಜ್ಯದ ಏಳೆಂಟು ಜಿಲ್ಲೆಗಳಲ್ಲಿದ್ದ ರೇಷ್ಮೆ ಉದ್ಯಮ ಪ್ರಸ್ತುತ ರಾಜ್ಯದಾದ್ಯಂತ ಹಬ್ಬುತ್ತಿದೆ. ರಾಮನಗರ ಜಿಲ್ಲೆಯು ಏಷ್ಯಾದಲ್ಲಿಯೇ ಬೃಹತ್ ರೇಷ್ಮೆ ಮಾರುಕಟ್ಟೆಯಾಗಿ ಗುರುತಿಸಿಕೊಂಡಿದ್ದು, ಪ್ರತಿ ದಿನ 2ಕೋಟಿ ರು.ಗಳ ವಹಿವಾಟು ನಡೆಯುತ್ತದೆ . ವರ್ಷಕ್ಕೆ 6 ಬೆಳೆ ಬೆಳೆಯಬಹುದಾದ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡರೆ ರೈತರು ಸಂಕಷ್ಟದಿಂದ ಹೊರಬರಬಹುದು ಎಂದು ತಿಳಿಸಿದರು.