ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಖೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಶಸ್ತ್ರಚಿಕಿತ್ಸೆಯ ಮೂಲಕ ಮೊಬೈಲ್ ಹೊರತೆಗೆಯಲಾಗಿದ್ದು, ಈ ಘಟನೆ ಜೈಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತನಿಖೆ ಮುಂದುವರೆದಿದೆ.
ಶಿವಮೊಗ್ಗ(ಜುಲೈ.12): ಶಿವಮೊಗ್ಗ ಜಿಲ್ಲೆಯ ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಖೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದ್ದು, ಈ ಘಟನೆ ಜೈಲಿನ ಭದ್ರತಾ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಖೈದಿಯ ಹೊಟ್ಟೆಯಿಂದ ಶಸ್ತ್ರಚಿಕಿತ್ಸೆಯ ಮೂಲಕ ಮೊಬೈಲ್ ಫೋನ್ ಹೊರತೆಗೆದಿದ್ದಾರೆ. ಖೈದಿ ದೌಲತ್ (30) ಎಂಬಾತನಿಗೆ ಶಿವಮೊಗ್ಗದ ನ್ಯಾಯಾಲಯವು ಪ್ರಕರಣವೊಂದರಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಜೂನ್ 24ರಂದು ದೌಲತ್, ಜೈಲಿನ ಆಸ್ಪತ್ರೆಗೆ ಭೇಟಿ ನೀಡಿ, ತಾನು ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದ. ಆದರೆ ವೈದ್ಯರು ಪರೀಕ್ಷೆಯ ವೇಳೆ ಅವನ ಹೊಟ್ಟೆಯಲ್ಲಿ ವಸ್ತುವೊಂದು ಇರುವುದು ಕಂಡುಬಂದಿತ್ತು. ಮೊದಲು ಕಲ್ಲು ಎಂದೇ ಭಾವಿಸಿದ್ದ ವೈದ್ಯರು. ಹೆಚ್ಚಿನ ಚಿಕಿತ್ಸೆಗಾಗಿ ಖೈದಿಯನ್ನ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಎಕ್ಸ್‌ರೇ ಪರೀಕ್ಷೆ ನಡೆಸಿದಾಗ ದೌಲತ್‌ನ ಹೊಟ್ಟೆಯಲ್ಲಿ ವಸ್ತುವೊಂದು ಇರುವುದು ದೃಢಪಟ್ಟಿತು. ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ವೈದ್ಯರು, ಖೈದಿಯ ಹೊಟ್ಟೆಯಿಂದ ಆಶ್ಚರ್ಯಕರವಾಗಿ ಮೊಬೈಲ್ ಫೋನ್ ಒಂದನ್ನು ಹೊರತೆಗೆದರು. ಈ ಘಟನೆಯು ಜೈಲಿನ ಭದ್ರತಾ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳನ್ನು ಬಯಲಿಗೆಳೆದಿದೆ.
ಈ ಬಗ್ಗೆ ಕೇಂದ್ರ ಕಾರಾಗೃಹದ ಅಧೀಕ್ಷಕ ರಂಗನಾಥ್, ಜೈಲಿನೊಳಗೆ ಮೊಬೈಲ್ ಫೋನ್ ತಲುಪಿದ ಕುರಿತು ಸಮಗ್ರ ತನಿಖೆ ನಡೆಸುವಂತೆ ತುಂಗಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ತನಿಖೆಯನ್ನು ಕೈಗೊಂಡಿದ್ದಾರೆ. ಜೈಲಿನ ಒಳಗೆ ಮೊಬೈಲ್ ಫೋನ್ ತಲುಪಿದ ಬಗ್ಗೆ ಹಲವು ಊಹಾಪೋಹಗಳು ಕೇಳಿಬಂದಿದ್ದು, ಈ ಘಟನೆಯು ಜೈಲಿನ ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ತನಿಖೆಯು ಜೈಲಿನ ಭದ್ರತಾ ಕ್ರಮಗಳ ದೌರ್ಬಲ್ಯವನ್ನು ಬಯಲಿಗೆಳೆಯಲಿದೆಯೇ ಎಂಬುದು ಕಾದುನೋಡಬೇಕಾಗಿದೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
