ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ಮೊಬೈಲ್ ಸರಬರಾಜು ಮಾಡುತ್ತಿದ್ದ ಜಾಲ ಬಯಲು. ಮನೋವೈದ್ಯ ಸೇರಿ ಮೂವರ ಬಂಧನ. ಜೈಲಿನೊಳಗಿನ ಭಯೋತ್ಪಾದಕ ಚಟುವಟಿಕೆಗಳ ತನಿಖೆ.
ಬೆಂಗಳೂರು (ಜು.10): ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮನ ವೈದ್ಯ ಡಾ.ನಾಗರಾಜ್ ಜೈಲಲ್ಲಿರುವ ಉಗ್ರ, ಶಂಕಿತ ಉಗ್ರರು ಸೇರಿ ಕೈದಿಗಳಿಗೆ ಮೊಬೈಲ್ ಕೊಟ್ಟು 10 - 50 ಸಾವಿರ ರು.ವರೆಗೂ ಹಣ ಪಡೆ ಯುತ್ತಿದ್ದ ವಿಚಾರ ಎನ್‌ಐಎ ತನಿಖೆ ಯಲ್ಲಿ ಬೆಳಕಿಗೆ ಬಂದಿದೆ. ಉಗ್ರರಿಗೆ ನೆರವು ಆರೋಪದಡಿ ಎನ್‌ಐಎ ಮಂಗಳವಾರ ಬೆಂಗಳೂರು ನಗರ ಮತ್ತು ಕೋಲಾರದ 5 ಕಡೆ ದಾಳಿ ನಡೆಸಿ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ.ನಾಗರಾಜ್, ಸಿಎಆರ್ ಎಎಸ್‌ಐ ಚಾಂದ್ ಪಾಷಾ ಹಾಗೂ ಶಂಕಿತ ಉಗ್ರ ಜುನೈದ್ ಅಹಮದ್‌ನ ತಾಯಿ ಅನೀಸ್ ಫಾತಿಮಾಳನ್ನು ಬಂಧಿಸಿದ್ದಾರೆ.
ನಾಗರಾಜ್ ಹಣದಾಸೆಗೆ ಜೈಲಿನಲ್ಲಿರುವ ಲಷ್ಕರ್-ಎ-ತೊಯ್ದಾ(ಎಲ್‌ಇಟಿ) ಉಗ್ರ ಸಂಘಟನೆಯ ಟಿ.ನಾಸೀರ್,ಇತರೆ ಕೈದಿಗಳಿಗೆ ಮೊಬೈಲ್ ಮಾರಾಟ ಮಾಡಿದ್ದ. ಇದಕ್ಕೆ ತನ್ನ ಸಹಾಯಕಿ ಪವಿತ್ರಾ ರನ್ನುಬಳಸಿಕೊಂಡಿದ್ದ, 2-3 ಸಾವಿರ ರು. ಬೆಲೆಯ ಮೊಬೈಲ್ ಗಳನ್ನು 10 ಸಾವಿರ ರು.ನಿಂದ 50 ಸಾವಿರ ರೂಪಾಯಿವರೆಗೆ ಮಾರಾಟ ಮಾಡಿದ್ದ. ಈ ಮೊಬೈಲ್‌ಗಳನ್ನು ಬಳಸಿಕೊಂಡು ಉಗ್ರ ನಾಸೀರ್ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಹಲವು ಮಾಹಿತಿ ಬಹಿರಂಗ: ಜೈಲಿನಲ್ಲಿಂದಲೇ ಉಗ್ರ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಆರೋಪದಡಿ ಸಿಸಿಬಿ ಪೊಲೀಸರು 2023ರಲ್ಲಿ ಸುಲ್ತಾನ್‌ಪಾಳ್ಯ, ಭದ್ರಪ್ಪ ಲೇಔಟ್ ಸೇರಿ ವಿವಿಧೆಡೆ ದಾಳಿ ನಡೆಸಿ ಐವರು ಶಂಕಿತರನ್ನು ಬಂಧಿಸಿದ್ದರು. ಆರೋಪಿಗಳ ಮನೆಯಲ್ಲಿ ಗ್ರಾನೈಡ್, ಮದ್ದುಗುಂಡುಗಳು, ಸೇರಿ ಸ್ಫೋಟಕ ಜಪ್ತಿ ಮಾಡಿದ್ದರು. ತನಿಖೆ ಆರಂಭಿಸಿದ್ದ ಎನ್‌ಐಎ ಅಧಿಕಾರಿಗಳು ಲಷ್ಕರ್‌ನ ದ.ಭಾರತದ ಕಮಾಂಡರ್ ಕೇರಳದ ನಾಸೀರ್‌ನನ್ನು ಪತ್ತೆ ಹಚ್ಚಿದರು.
ಜೈಲಿನಿಂದಲೇ ಉಗ್ರ ಕೃತ್ಯಗಳಿಗೆ ಸಂಚು: ನಾಸೀರ್ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ಸೇರಿ 30ಕ್ಕೂ ಅಧಿಕ ಪ್ರಕರಣಗಳಲ್ಲಿ ಆರೋಪಿ. ಕೆಲ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರದ ಜೈಲಲ್ಲಿದ್ದಾನೆ. ಜೈಲಿನಲ್ಲಿದ್ದೇ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸುತ್ತಿದ್ದ.ಜೈಲು ಸೇರುವ ಮುಸ್ಲಿಂ ಯುವಕರ ಸೆಳೆದು ಮುಸ್ಲಿಂ ಮೂಲಭೂತವಾದಿಗಳನ್ನಾಗಿ ಪರಿವರ್ತಿಸುತ್ತಿದ, ಆ ಯುವಕರು ಜೈಲಿನಿಂದ ಬಿಡುಗಡೆಯಾದ ಬಳಿಕ ದುಷ್ಕೃತ್ಯ ಎಸಗಲು ಸಿದ್ಧತೆಯಲ್ಲಿ ತೊಡಗಿದ್ದರು. ಅಷ್ಟರಲ್ಲಿ ಸಿಸಿಬಿ ದಾಳಿ ನಡೆಸಿ ಐವರನ್ನು ಬಂಧಿಸಿದ್ದರು.
ಶಂಕಿತರೊಂದಿಗೆ ಚಾಂದ್ ನಿರಂತರ ಸಂಪರ್ಕ: ಎನ್‌ಐಎ ಬಂಧಿಸಿರುವ ಚಾಂದ್ ಪಾಷಾ ಜೈಲಿನಲ್ಲಿರುವ ಉಗ್ರ ನಾಸೀರ್ ಮತ್ತು ಇತರೆ ಶಂಕಿತರನ್ನು ಜೈಲಿನಿಂದ ನ್ಯಾಯಾಲಯಗಳಿಗೆ ಕರೆದೊಯ್ಯುವಾಗ ಎಸ್ಕಾರ್ಟ್‌ನಿರ್ವಹಿಸುತ್ತಿದ್ದ, ಈ ವೇಳೆ ಅವರು ಹಣ ಪಡೆದುಕೊಳ್ಳಲು ನೆರವು ನೀಡುತ್ತಿದ್ದ. ಶಂಕಿತ ಸಲ್ಮಾನ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಎರಡು ವರ್ಷದ ಹಿಂದೆ ಸಲ್ಮಾನ್ ತಪ್ಪಿಸಿಕೊಳ್ಳಲು ನೆರವು ನೀಡಿದ್ದ ವಿಚಾರ ಎನ್‌ಐಎ ತನಿಖೆ ವೇಳೆ ಗೊತ್ತಾಗಿದೆ.
ಶಂಕಿತ ಉಗ್ರರಿಗೆ ಸಿಮ್: ಕೋಲಾರ ಮೂಲದ ವ್ಯಕ್ತಿಗೆ ಎನ್‌ಐಎ ನೋಟಿಸ್
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲೇ ಕೂತು ಭಯೋತ್ಪಾದಕ ಕೃತ್ಯಗಳಿಗೆ ಸಂಚು ಪ್ರಕರಣ ಸಂಬಂಧ ಶಂಕಿತ ಉಗ್ರರಿಗೆ ಸಿಮ್ ಕಾರ್ಡ್ ನೀಡಿದ ಆರೋಪದಡಿ ಕೋಲಾರ ಮೂಲದ ಸತೀಶ್ ಎಂಬಾತನಿಗೆ ಎನ್ ಐಎ ಅಧಿಕಾರಿಗಳು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆತ ತನ್ನ ವಕೀಲರ ಜೊತೆ ವಿಚಾರಣೆಗೆ ಹಾಜರಾಗಿದ್ದರು ಎಂದು ತಿಳಿದುಬಂದಿದೆ. ಸತೀಶ್ ವೈಟ್ ಫೀಲ್ಡ್‌ನ ದೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಕರಣದ ತನಿಖೆ ವೇಳೆ ಶಂಕಿತರಿಗೆ ಸತೀಶ್ ಸಿಮ್ ಕಾರ್ಡ್ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಈ ಸಿಮ್ ಕಾರ್ಡ್ ಬಳಸಿ ಜೈಲಿನಿಂದಲೇ ಉಗ್ರ ಟಿ.ನಾಸೀರ್ ತನ್ನ ಸಹಚರರಿಗೆ ಕರೆ ಮಾಡಿ ದುಷ್ಕೃತ್ಯಗಳ ಸಂಚು ರೂಪಿಸಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಹೀಗಾಗಿ ಎನ್‌ಐಎ ಅಧಿಕಾರಿಗಳು ಸತೀಶ್ ಮನೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
