ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಕುಮಾರ್ ನಾಯಕ್ ₹3,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿದ್ದಾರೆ. ಇ-ಸ್ವತ್ತು ನೊಂದಣಿಗಾಗಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಶಿವಮೊಗ್ಗ (ಜು.17): ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಕುಮಾರ್ ನಾಯಕ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶ್ರೀರಾಂಪುರ ಗ್ರಾಮದ ನಿವಾಸಿ ವಿನೋದ್ ತಮ್ಮ ತಾಯಿಯ ಹೆಸರಿನಲ್ಲಿರುವ 30×50 ಅಳತೆಯ ಜಾಗದಲ್ಲಿ ಆರ್‌ಸಿಸಿ ಮನೆ ನಿರ್ಮಿಸಲು ಇ-ಸ್ವತ್ತು ನೊಂದಣಿಗಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಸಲ್ಲಿಸಿದ ಬಳಿಕವೂ ಹಲವು ದಿನಗಳ ಕಾಲ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಕೆಲಸ ಮುಂದುವರಿಯದಿರುವ ಕುರಿತು ವಿಚಾರಿಸಲು ಕಾರ್ಯದರ್ಶಿ ಕುಮಾರ್ ನಾಯಕ್‌ರನ್ನು ಭೇಟಿಯಾದಾಗ, ಅವರು ₹3,000 ಲಂಚದ ಬೇಡಿಕೆ ಇಟ್ಟಿದ್ದರು.
ವಿನೋದ್ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಎಸ್‌ಪಿ ಮಂಜುನಾಥ್ ಚೌಧರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಕುಮಾರ್ ನಾಯಕ್ ಲಂಚ ಸ್ವೀಕರಿಸುವ ವೇಳೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಈ ಘಟನೆಯು ಗ್ರಾಮೀಣ ಆಡಳಿತದಲ್ಲಿ ಭ್ರಷ್ಟಾಚಾರದ ಆರೋಪಗಳಿಗೆ ಮತ್ತೊಂದು ಉದಾಹರಣೆಯಾಗಿದೆ.
ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಸರಕಾರಿ ಕಚೇರಿಗಳಲ್ಲಿ ಲಂಚದ ಕಿರಿಕಿರಿಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿರುವುದರಿಂದ ಗ್ರಾಮಪಂಚಾಯ್ತಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
