ಕೊಪ್ಪಳದ ಬಸಾಪುರ ಗ್ರಾಮದಲ್ಲಿ ಬಲ್ಡೋಟಾ ಕಾರ್ಖಾನೆಯ ಸಿಬ್ಬಂದಿ ಮತ್ತು ಕುರಿಗಾಹಿಗಳ ನಡುವೆ ನಡೆದ ಹಲ್ಲೆಯಿಂದಾಗಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಕಾರ್ಖಾನೆಯ ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ತೆರಳಿದ್ದ ಕುರಿಗಾಹಿಗಳ ಮೇಲೆ ಸಿಬ್ಬಂದಿ ಹಲ್ಲೆ ನಡೆಸಿದ್ದು, ಎರಡೂ ಕಡೆಯಿಂದ ದೂರು ದಾಖಲಾಗಿದೆ.

ಕೊಪ್ಪಳ (ಜುಲೈ.26): ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದ ಬಲ್ಡೋಟಾ ಕಾರ್ಖಾನೆಯ ಸಿಬ್ಬಂದಿಯಿಂದ ಕುರಿಗಾಹಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಕಾರ್ಖಾನೆ ವಿರುದ್ಧದ ರೈತರ ಪ್ರತಿಭಟನೆ ಮತ್ತೊಂದು ಹಂತ ತಲುಪಿದೆ.

ಕಾರ್ಖಾನೆ ಒಳಗಿರುವ ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ತೆರಳಿದ್ದ ಕುರಿಗಾಹಿಗಳ ಮೇಲೆ ಶುಕ್ರವಾರ ಸಿಬ್ಬಂದಿ ಹಲ್ಲೆ ನಡೆಸಿದ್ದು, ಈ ಘಟನೆ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಮೂರು ದಿನಗಳಿಂದ ಕಾರ್ಖಾನೆಯ ಸಿಬ್ಬಂದಿ ಜಾನುವಾರುಗಳನ್ನು ಕೆರೆಗೆ ಬಿಡದಂತೆ ತಡೆಯುತ್ತಿದ್ದರು. ಈ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರೂ, ಯಾವುದೇ ಕ್ರಮ ಕೈಗೊಳ್ಳದ ಕಾರ್ಖಾನೆಯ ಸಿಬ್ಬಂದಿ, ನಿನ್ನೆ ಕುರಿಗಾಹಿಗಳ ಮೇಲೆ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕುರಿಗಾಹಿಗಳೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ-ದೂರು ದಾಖಲಾಗಿದ್ದು, ಒಟ್ಟು 50 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಇಂದು ರೈತರು ಮತ್ತು ಬಲ್ಡೋಟಾ ಬಚಾವೋ ಹೋರಾಟ ಸಮಿತಿಯ ಸದಸ್ಯರು ಕಾರ್ಖಾನೆಯ ಕೆರೆ ಮುಂಭಾಗದಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

ಕಾರ್ಖಾನೆಯಿಂದ ಕೆರೆಯ ಅತಿಕ್ರಮಣ ಮತ್ತು ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ತಕ್ಷಣ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಬಲ್ಡೋಟಾ ಕಾರ್ಖಾನೆಯ ವಿರುದ್ಧ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.