ಶಕ್ತಿ ಯೋಜನೆ ಅಡಿಯಲ್ಲಿ ಸಾರಿಗೆ ನಿಗಮಗಳಿಗೆ ಜೂನ್‌ ತಿಂಗಳ ವಂತಿಕೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ 125.48 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.

ಬೆಂಗಳೂರು (ಆ.3) :  ಶಕ್ತಿ ಯೋಜನೆ ಅಡಿಯಲ್ಲಿ ಸಾರಿಗೆ ನಿಗಮಗಳಿಗೆ ಜೂನ್‌ ತಿಂಗಳ ವಂತಿಕೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ 125.48 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಸಾಮಾನ್ಯ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅದರ ಮೊತ್ತವನ್ನು ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ನೀಡಲಿದೆ. ಜೂನ್‌ 11ರಿಂದ ಯೋಜನೆ ಆರಂಭವಾಗಿದ್ದು, ಆಗಸ್ಟ್‌ 1ರವರೆಗೆ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್‌ ಮೌಲ್ಯ 719.87 ಕೋಟಿ ರು.ಗಳಾಗಿದೆ. ಅದರಲ್ಲಿ ಜೂನ್‌ 11ರಿಂದ 30ರವರೆಗೆ 248.30 ಕೋಟಿ ರು.ಗಳಾಗಿದೆ. ಆದರೆ, ರಾಜ್ಯ ಸರ್ಕಾರ ಇದೀಗ ನಾಲ್ಕು ನಿಗಮಗಳಿಗೆ ಜೂನ್‌ ತಿಂಗಳ ವಂತಿಕೆಯಾಗಿ 125.48 ಕೋಟಿ ರು. ಬಿಡುಗಡೆ ಮಾಡಿದ್ದು, 122.82 ಕೋಟಿ ರು. ಹಣ ಬಿಡುಗಡೆ ಮಾಡುವುದನ್ನು ಬಾಕಿ ಉಳಿಸಿಕೊಂಡಿದೆ.

ಗೃಹಲಕ್ಷ್ಮೀ ಜಾರಿಯಾಗುತ್ತಿದ್ದಂತೆ ಮಹಿಳಾ ಪ್ರಯಾಣಿಕರ ಸಂಖ್ಯೆ ಕುಸಿತ!

ಯಾವ ನಿಗಮಕ್ಕೆಷ್ಟುಹಣ?

ನಿಗಮ ಒಟ್ಟು ಟಿಕೆಟ್‌ ಮೌಲ್ಯ ಬಿಡುಗಡೆಯಾಗಿರುವ ಅನುದಾನದ ಮೊತ್ತ

  • ಕೆಎಸ್ಸಾರ್ಟಿಸಿ 92.73 ಕೋಟಿ ರು. 47.15. ಕೋಟಿ ರು.
  • ಬಿಎಂಟಿಸಿ 43.64 ಕೋಟಿ ರು. 21.85. ಕೋಟಿ ರು.
  • ಎನ್‌ಡಬ್ಲ್ಯೂಕೆಆರ್‌ಟಿಸಿ 64.99 ಕೊಟಿ ರು. 32.57. ಕೋಟಿ ರು.
  • ಕೆಕೆಆರ್‌ಟಿಸಿ 46.92 ಕೊಟಿ ರು. 23.90. ಕೋಟಿ ರು.
  • ಒಟ್ಟು 248.30 ಕೋಟಿ ರು. 125.48 ಕೋಟಿ ರು.

ಹೀಗೆ ಸರ್ಕಾರದಿಂದ ಪೂರ್ಣಪ್ರಮಾಣದಲ್ಲಿ ಅನುದಾನ ಬರದ ಕಾರಣ ನಿಗಮಗಳಿಗೆ ಆರ್ಥಿಕವಾಗಿ ಹಿನ್ನಡೆಯಾಗುತ್ತಿದೆ.

ಸರ್ಕಾರದಿಂದ ಕಡಿಮೆ ಅನುದಾನ ಬಿಡುಗಡೆಯಾಗಿರುವ ಕುರಿತು ಕೆಎಸ್ಸಾರ್ಟಿಸಿ ಅಧಿಕಾರಿಗಳನ್ನು ಕೇಳಿದರೆ, ಆರ್ಥಿಕ ಇಲಾಖೆ ಶಕ್ತಿ ಯೋಜನೆಯ ಮೊದಲ ಕಂತಿನ ಹಣವನ್ನು ನಿಗಮಗಳಿಗೆ ಪಾವತಿಸಿದೆ. ಜೂನ್‌ ತಿಂಗಳ ವಂತಿಕೆಯ ಬಾಕಿ ಹಣವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅಲ್ಲದೆ, ಟಿಕೆಟ್‌ ಮೌಲ್ಯ ಸೇರಿದಂತೆ ಇನ್ನಿತರ ಪರಿಶೀಲನೆ ನಡೆಸುತ್ತಿರುವ ಕಾರಣ ಪೂರ್ಣಪ್ರಮಾಣದಲ್ಲಿ ಅನುದಾನ ಪಾವತಿಸಿಲ್ಲ. ಆದಷ್ಟುಬೇಗ ಉಳಿದ 122.82 ಕೋಟಿ ರು. ಹಣ ಪಾವತಿಸುವುದಾಗಿ ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ.

ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿದ್ದರೂ ಕೆಎಸ್ಸಾರ್ಟಿಸಿಯಲ್ಲಿನ 30 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ, ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ವೇತನ ಪಾವತಿಸಲಾಗಿದೆ. ಉಳಿದ ನಿಗಮಗಳಲ್ಲೂ ನಿಗದಿತ ಅವಧಿಯಲ್ಲಿ ವೇತನ ಪಾವತಿಯಾಗಲಿದೆ. ಶಕ್ತಿ ಯೋಜನೆಯಿಂದ ನಿಗಮಗಳ ಆರ್ಥಿಕ ಪರಿಸ್ಥಿತಿಗೆ ಸಮಸ್ಯೆಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಮಹಿಳೆಯರ ಫ್ರೀ ಬಸ್‌ನಿಂದ ಗಂಡಸರಿಗೆ ಪ್ರಯಾಸ, ಖರೀದಿಸಿ ಮಾರುತಿ ಕಾರು ಜಾಹೀರಾತು ವೈರಲ್!

ಜುಲೈ ತಿಂಗಳ ಮೊತ್ತ 455.73 ಕೋಟಿ ರು.

ಶಕ್ತಿ ಯೋಜನೆ ಅಡಿಯಲ್ಲಿ ಜೂನ್‌ ತಿಂಗಳಲ್ಲಿ 10.54 ಕೋಟಿ ಮಹಿಳಾ ಪ್ರಯಾಣಿಕರು ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದು, ಅದರ ಟಿಕೆಟ್‌ ಮೌಲ್ಯ 248.30 ಕೋಟಿ ರು.ಗಳಾಗಿದೆ. ಹಾಗೆಯೇ ಜುಲೈ ತಿಂಗಳಲ್ಲಿ 19.52 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು, ಟಿಕೆಟ ಮೌಲ್ಯ 455.73 ಕೋಟಿ ರು.ಗಳಾಗಿವೆ.