ರಾಜ್ಯದಲ್ಲಿ ತೀವ್ರ ವಿದ್ಯುತ್‌ ಕ್ಷಾಮ, - ಕಲ್ಲಿದ್ದಲು ಕೊರತೆ: ಹಲವು ಉತ್ಪಾದನಾ ಘಟಕ ಬಂದ್‌ ಎರಡು ದಿನಗಳಿಗೆ ಆಗುವಷ್ಟೂ ಕಲ್ಲಿದ್ದಲು ದಾಸ್ತಾನು ಇಲ್ಲ ರಾಯಚೂರಿನ 3, ಉಡುಪಿ 2 , ಬಳ್ಳಾರಿಯ 1 ಘಚಕ ಸ್ಥಗಿತ

ಬೆಂಗಳೂರು(ಏ.19) :ರಾಜ್ಯದಲ್ಲಿ ತೀವ್ರ ಕಲ್ಲಿದ್ದಲಿನ ಕೊರತೆಯಿಂದಾಗಿ ಶನಿವಾರ ಹಾಗೂ ಭಾನುವಾರ ಆರು ಶಾಖೋತ್ಪನ್ನ ವಿದ್ಯುತ್‌ ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಂಡಿತ್ತು. ಪರಿಣಾಮ ವಿದ್ಯುತ್‌ ಪೂರೈಕೆಯಲ್ಲಿ ಸಾಕಷ್ಟುವ್ಯತ್ಯಯವಾಗಿದ್ದು, ರಾಜ್ಯಾದ್ಯಂತ ಕಳೆದ ಎರಡು ದಿನಗಳಿಂದ ತೀವ್ರ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ.

ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳಲ್ಲಿನ ಉತ್ಪಾದನೆ 6220 ಮೆ.ವ್ಯಾ.ನಿಂದ 1915 ಮೆ.ವ್ಯಾಗೆ ಕುಸಿದಿದೆ. ಇದೇ ವೇಳೆ, ಬೇಸಿಗೆ ಹಿನ್ನೆಲೆಯಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗಿದ್ದರೂ, ಒಟ್ಟಾರೆ ಎಲ್ಲ ಮೂಲಗಳಿಂದ ಪೂರೈಕೆ ಆಗುತ್ತಿದ್ದ ವಿದ್ಯುತ್‌ ನಿತ್ಯದ ಸರಾಸರಿ 14,000 ಮೆ.ವ್ಯಾಟ್‌ನಿಂದ 11,550 ಮೆ.ವ್ಯಾಟ್‌ಗೆ (ಗರಿಷ್ಠ) ಶನಿವಾರ ಕುಸಿದಿದೆ. ಭಾನುವಾರ ಈ ಪ್ರಮಾಣ ಮತ್ತಷ್ಟುಕಡಿಮೆಯಾಗಿ 9,918 ಮೆ.ವ್ಯಾಟ್‌ಗೆ (ಗರಿಷ್ಠ) ಕುಸಿದಿದೆ. ಪರಿಣಾಮ, ಮಳೆಯ ನೆಪದಲ್ಲಿ ರಾಜ್ಯಾದ್ಯಂತ ತೀವ್ರ ವಿದ್ಯುತ್‌ ಕಡಿತ ಆರಂಭವಾಗಿದೆ ಎನ್ನಲಾಗಿದೆ.

ಕಲ್ಲಿದ್ದಲು ಕೊರತೆ ಒಪ್ಪಿಕೊಂಡ ಕೇಂದ್ರ, ಭೀಕರ ಸೆಕೆ ನಡುವೆ ಈ ರಾಜ್ಯಗಳಲ್ಲಿ ವಿದ್ಯುತ್ ವ್ಯತ್ಯಯ!

ರಾಜ್ಯದ ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳಲ್ಲಿ ಕಲ್ಲಿದ್ದಲು ತಳಕಚ್ಚಿದೆ. ಕಲ್ಲಿದ್ದಲು ಗಣಿಗಳಿಂದ ರೇಕ್‌ಗಳಲ್ಲಿ ಸಾಗಣೆಯಾಗುವ ಕಲ್ಲಿದ್ದಲಿಗೆ ಕಾದು ಕುಳಿತು ನಂತರ ಬಳಕೆ ಮಾಡುವಂತಾಗಿದ್ದು, ಎರಡು ದಿನಗಳಿಗೆ ಆಗುವಷ್ಟೂಕಲ್ಲಿದ್ದಲು ಸಹ ಶೇಖರಣೆಯಿಲ್ಲ.

ಕಲ್ಲಿದ್ದಲು ಕೊರತೆಯಿಂದ ಬಳ್ಳಾರಿಯ ಕುಡುತಿನಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ ಒಂದು ಘಟಕ, ರಾಯಚೂರಿನ ಶಕ್ತಿನಗರದ (ಆರ್‌ಟಿಪಿಎಸ್‌) ಕೇಂದ್ರದಲ್ಲಿ ಮೂರು ಘಟಕ, ಉಡುಪಿಯ ಯುಪಿಸಿಎಲ್‌ (ಅದಾನಿ) ಕೇಂದ್ರದ ಎರಡೂ ಘಟಕ ಸ್ಥಗಿತಗೊಂಡಿದ್ದವು. ಪರಿಣಾಮ ಒಟ್ಟು 6,220 ಮೆ.ವ್ಯಾಟ್‌ ವಿದ್ಯುತ್‌ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್‌ ಘಟಕಗಳಲ್ಲಿ ಕೇವಲ ಗರಿಷ್ಠ 2,365 ಮೆ.ವ್ಯಾಟ್‌ ವಿದ್ಯುತ್‌ ಮಾತ್ರ ಶನಿವಾರ ಉತ್ಪಾದನೆಯಾಗಿದೆ. ಇನ್ನು ಭಾನುವಾರ ಆರ್‌ಟಿಪಿಎಸ್‌ನ 3 ಘಟಕ (2,6,7ನೇ ಘಟಕ), ಬಿಟಿಪಿಎಸ್‌ನ 1 ಘಟಕ, ಉಡುಪಿಯ ಯುಪಿಸಿಎಲ್‌ (ಅದಾನಿ​​) ಕೇಂದ್ರದ ಎರಡೂ ಘಟಕ ಸ್ಥಗಿತಗೊಂಡಿದ್ದವು. ಹೀಗಾಗಿ ಭಾನುವಾರ ಈ ಪ್ರಮಾಣ 1,915 ಮೆ.ವ್ಯಾಟ್‌ಗೆ ಕುಸಿದಿದೆ.

Coal Production ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಿ, ಸಚಿವ ಜೋಶಿ

ವಿದ್ಯುತ್‌ ಉತ್ಪಾದನೆ ತೀವ್ರ ಕುಸಿತ:

ಆರ್‌ಟಿಪಿಎಸ್‌ನ ಎಂಟು ಘಟಕಗಳಿಗೆ 1,720 ಮೆ.ವ್ಯಾಟ್‌ ಉತ್ಪಾದನೆ ಸಾಮರ್ಥ್ಯವಿದೆ. ಮೊದಲೇ 5 ಘಟಕಗಳಿಂದ ಮಾತ್ರ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದ ಕೇಂದ್ರದಲ್ಲಿ ಶನಿವಾರ ಹಾಗೂ ಭಾನುವಾರ 2, 6 ಮತ್ತು 7ನೇ ಘಟಕವನ್ನು ಕಲ್ಲಿದ್ದಲು ಕೊರತೆಯಿಂದ ಸ್ಥಗಿತಗೊಳಿಸಲಾಗಿತ್ತು. ಪರಿಣಾಮ ಭಾನುವಾರ 454 ಮೆ.ವ್ಯಾಟ್‌ (ಗರಿಷ್ಠ ಲೋಡ್‌) ವಿದ್ಯುತ್‌ ಉತ್ಪಾದನೆಯಾಗಿದೆ.

ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದಲ್ಲಿ ಎರಡು ಘಟಕಗಳಿಂದ 1,600 ಮೆ.ವ್ಯಾಟ್‌. ವಿದ್ಯುತ್‌ ಉತ್ಪಾದನಾ ಸಾಮರ್ಥ್ಯವಿದ್ದರೂ 810 ಮೆ.ವ್ಯಾಟ್‌ ಮಾತ್ರ ಉತ್ಪಾದನೆಯಾಗಿದ್ದು, ಬಳ್ಳಾರಿಯ ಬಿಟಿಪಿಎಸ್‌ನ 3 ಘಟಕಗಳಿಂದ 1,700 ಮೆ.ವ್ಯಾಟ್‌ ಉತ್ಪಾದನೆ ಸಾಮರ್ಥ್ಯವಿದ್ದರೂ ಗರಿಷ್ಠ 651 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗಿದೆ. ಇದರಿಂದ ತೀವ್ರ ವಿದ್ಯುತ್‌ ಕೊರತೆ ಉಂಟಾಗಿದೆ.

ಸಾಮರ್ಥ್ಯದ 3ನೇ 1 ಭಾಗದಷ್ಟೂಪೂರೈಕೆಯಿಲ್ಲ:

ರಾಜ್ಯದ ವಿವಿಧ ಯೋಜನೆಗಳಲ್ಲಿ 8,852 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿದ್ದರೂ ಶನಿವಾರ 4,755 ಗರಿಷ್ಠ ಹಾಗೂ 2,738 ಮೆ.ವ್ಯಾಟ್‌ ಕನಿಷ್ಠ ವಿದ್ಯುತ್‌ ಮಾತ್ರ ಉತ್ಪಾದನೆಯಾಗಿದೆ. ಭಾನುವಾರ ಗರಿಷ್ಠ ಉತ್ಪಾದನೆಯೂ 2,988 ಮೆ.ವ್ಯಾಟ್‌ಗೆ ಕುಸಿದಿದೆ.

ಕೇಂದ್ರದ ಮೂಲಗಳಿಂದ 15,479 ಮೆ.ವ್ಯಾಟ್‌ ಪೂರೈಕೆ ಸಾಮರ್ಥ್ಯವಿದ್ದರೂ ಶನಿವಾರ ಕೇವಲ 3,533 ಮೆ.ವ್ಯಾಟ್‌ ಗರಿಷ್ಠ ಹಾಗೂ 2,175 ಮೆ.ವ್ಯಾಟ್‌ ಕನಿಷ್ಠ, ಭಾನುವಾರ 4,541 ಮೆ.ವ್ಯಾಟ್‌ ಗರಿಷ್ಠ 1,529 ಮೆ.ವ್ಯಾಟ್‌ ಕನಿಷ್ಠ ವಿದ್ಯುತ್‌ ಪೂರೈಕೆಯಾಗಿದೆ. ಇತರೆ ಎಕ್ಸ್‌ಚೇಂಜ್‌ಗಳಾದ ಜಿಂದಾಲ್‌ನಿಂದಲೂ ಕಡಿಮೆ ವಿದ್ಯುತ್‌ ಪೂರೈಕೆಯಾಗಿದ್ದು, ಒಟ್ಟು 31,393 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿರುವ ರಾಜ್ಯದಲ್ಲಿ ಕೇವಲ ಮೂರನೇ ಒಂದು ಭಾಗದಷ್ಟೂವಿದ್ಯುತ್‌ ಪೂರೈಕೆಯಾಗಿಲ್ಲ. ಇದರಿಂದಲೇ ಸಮಸ್ಯೆ ಉಂಟಾಗುತ್ತಿದೆ ಎಂದು ಎಸ್ಕಾಂಗಳು ದೂರಿವೆ.

ಕಲ್ಲಿದ್ದಲು ಕೊರತೆ ಇದೆ: ಕೆಪಿಟಿಸಿಎಲ್‌

ಈ ಬಗ್ಗೆ ಕೆಪಿಟಿಸಿಎಲ್‌ ಅಧಿಕಾರಿಗಳಿಗೆ ಪ್ರಶ್ನಿಸಿದರೆ, ರಾಜ್ಯದ ಮೂರು ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹಣೆ ಕೇವಲ ಒಂದು ದಿನಕ್ಕಾಗುವಷ್ಟಿದೆ. ಸಾಮಾನ್ಯವಾಗಿ ದಿನವೊಂದಕ್ಕೆ 12ರಿಂದ 15 ರೇಕುಗಳಲ್ಲಿ ಕಲ್ಲಿದ್ದಲು ಪೂರೈಕೆಯಾಗುತ್ತಿತ್ತು. ಈಗ 8ರಿಂದ 9 ರೇಕುಗಳಲ್ಲಿ ಲಭ್ಯವಾಗುತ್ತಿದೆ. ಒಂದು ರೇಕಿನಲ್ಲಿ ಸಾಮಾನ್ಯವಾಗಿ 700ರಿಂದ 800 ಟನ್‌ ಕಲ್ಲಿದ್ದಲು ಪೂರೈಕೆಯಾಗುತ್ತದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ತೀವ್ರ ಅಭಾವ ಉಂಟಾಗಿತ್ತು. ಜನವರಿ, ಫೆಬ್ರವರಿಯಲ್ಲಿ ಸುಧಾರಿಸಿದ್ದರೂ ಕ್ರಮೇಣ ಮತ್ತೆ ಅಭಾವ ತೀವ್ರಗೊಂಡಿದೆ. ಆದರೂ ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ಎಲ್ಲೂ ಅನಗತ್ಯ ವಿದ್ಯುತ್‌ ಕಡಿತ ಉಂಟಾಗದಂತೆ ಎಸ್ಕಾಂಗಳಿಂದ ವಿದ್ಯುತ್‌ ಪೂರೈಕೆಯಾಗುತ್ತಿದೆ ಎಂದು ಹೇಳುತ್ತಾರೆ.

ಬೇಡಿಕೆ ಹಾಗೂ ಪೂರೈಕೆಯ ಅಂತರ

ದಿನವೊಂದಕ್ಕೆ ರಾಜ್ಯದ ಸರಾಸರಿ ವಿದ್ಯುತ್‌ ಬೇಡಿಕೆ - 13,500 ಮೆ.ವ್ಯಾಟ್‌ನಿಂದ 14,000 ಮೆ.ವ್ಯಾಟ್‌

ದಿನಕ್ಕೆ ಪೂರೈಕೆಯಾಗುತ್ತಿರುವ ಸರಾಸರಿ ವಿದ್ಯುತ್‌ - 10 ಸಾವಿರ ಮೆ.ವ್ಯಾಟ್‌

ವಿದ್ಯುತ್‌ ಕೊರತೆ - 3,500 ಮೆ.ವ್ಯಾಟ್‌ನಿಂದ 4 ಸಾವಿರ ಮೆ.ವ್ಯಾಟ್‌

ವರದಿ: ಶ್ರೀಕಾಂತ್‌ ಎನ್‌. ಗೌಡಸಂದ್ರ