ಯುಪಿ, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ 10 ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಬಹುದು ಎಂದು ಹೇಳಲಾಗುತ್ತಿದೆ.
ನವದೆಹಲಿ(ಏ.15): ದೇಶದ ಹಲವು ರಾಜ್ಯಗಳಿಂದ ಕಲ್ಲಿದ್ದಲು ಕೊರತೆಯ ಸುದ್ದಿಗಳು ವರದಿಯಾಗುತ್ತಿವೆ. ಯುಪಿ, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ 10 ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಬಹುದು ಎಂದು ಹೇಳಲಾಗುತ್ತಿದೆ. ಇದೀಗ ಕೇಂದ್ರ ಸರಕಾರವೂ ಕಲ್ಲಿದ್ದಲು ಕೊರತೆಯ ವಿಷಯವನ್ನು ಒಪ್ಪಿಕೊಂಡಿದೆ. ಇನ್ನು ಯುಪಿ, ಪಂಜಾಬ್ ನಲ್ಲಿ ಕಲ್ಲಿದ್ದಲು ಕೊರತೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ಆಂಧ್ರ, ರಾಜಸ್ಥಾನ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆ ಎದ್ದು ಕಾಣುತ್ತಿದೆ.
ಕಲ್ಲಿದ್ದಲು ಕೊರತೆ ಬಗ್ಗೆ ಸರ್ಕಾರ ಹೇಳಿದ್ದೇನು?
ಕಲ್ಲಿದ್ದಲು ಕೊರತೆಯ ಕುರಿತು ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಅವರನ್ನು ಪ್ರಶ್ನಿಸಿದಾಗ, ಪಂಜಾಬ್ ಮತ್ತು ಯುಪಿಯಲ್ಲಿ ಕಲ್ಲಿದ್ದಲು ಕೊರತೆ ಇಲ್ಲ. ಬದಲಿಗೆ ಆಂಧ್ರ, ರಾಜಸ್ಥಾನ, ತಮಿಳುನಾಡಿನಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದೆ. ಈ ರಾಜ್ಯಗಳಲ್ಲಿ ಕಂಡುಬಂದ ಕಲ್ಲಿದ್ದಲು ಕೊರತೆಯ ಹಿಂದೆ ಬೇರೆ ಬೇರೆ ಕಾರಣಗಳಿವೆ ಎಂದಿದ್ದಾರೆ. ತಮಿಳುನಾಡು ಆಮದು ಮಾಡಿಕೊಂಡ ಕಲ್ಲಿದ್ದಲಿನ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು. ಆದರೆ ಕಳೆದ ಕೆಲವು ದಿನಗಳಲ್ಲಿ, ಆಮದು ಮಾಡಿಕೊಳ್ಳುವ ಕಲ್ಲಿದ್ದಲಿನ ಬೆಲೆ ಬಹಳ ವೇಗವಾಗಿ ಹೆಚ್ಚುತ್ತಿವೆ. ಹೀಗಿರುವಾಗ ಆಮದು ಮಾಡಿಕೊಳ್ಳುವ ಕಲ್ಲಿದ್ದಲು ಅವಲಂಬಿತವಾಗಿದ್ದರೆ ಕಲ್ಲಿದ್ದಲು ಆಮದು ಮಾಡಿಕೊಳ್ಳಿ ಎಂದು ತಮಿಳುನಾಡಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.
ಮತ್ತೊಂದೆಡೆ, ಆಂಧ್ರಪ್ರದೇಶದಲ್ಲೂ ಕಲ್ಲಿದ್ದಲು ಬಿಕ್ಕಟ್ಟು ಇದೆ. ಇಲ್ಲಿಗೆ ರೈಲ್ವೆ ಮೂಲಕ ಕಲ್ಲಿದ್ದಲು ಸಾಗಿಸಲು ವಿಳಂಬವಾಗುತ್ತಿದೆ. ಇದಲ್ಲದೇ ಆಂಧ್ರಪ್ರದೇಶದ ಕಲ್ಲಿದ್ದಲು ಘಟಕದಲ್ಲಿ ಸ್ಫೋಟಕಗಳ ಕೊರತೆ ಉಂಟಾಗಿದೆ. ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಸ್ಫೋಟಕಗಳ ಕೊರತೆ ಉಂಟಾಗಿದೆ ಎಂದು ಅವರು ಹೇಳಿದರು.
9 ದಿನಗಳಿಗಷ್ಟೇ ಸಾಕು ಈಗಿರುವ ಕಲ್ಲಿದ್ದಲು: ಆರ್‌ಕೆ ಸಿಂಗ್
ಇಂಧನ ಸಚಿವರು ಈ ಬಗ್ಗೆ ಮತ್ತಷ್ಟು ವಿವರಣೆ ನೀಡಿ, ದೇಶದಲ್ಲಿ ಕಲ್ಲಿದ್ದಲಿನ ಬೇಡಿಕೆ ಅತ್ಯಂತ ವೇಗವಾಗಿ ಹೆಚ್ಚಿದೆ. ಒಟ್ಟಾರೆ ಬೇಡಿಕೆ ಶೇ.9ರಷ್ಟು ಹೆಚ್ಚಿದೆ ಎಂದರು. ಹಿಂದೆಂದಿಗಿಂತಲೂ ಈ ಬಾರಿ ಬೇಡಿಕೆ ಹೆಚ್ಚಿದೆ. ದೇಶದಲ್ಲಿ ಕಲ್ಲಿದ್ದಲು ನಿಕ್ಷೇಪ ಕಡಿಮೆಯಾಗಿದೆ. ಇಂದಿನಿಂದ, ದೇಶದ ಕಲ್ಲಿದ್ದಲು ನಿಕ್ಷೇಪವು 9 ದಿನಗಳವರೆಗೆ ಮಾತ್ರ ಬಳಸಬಹುದು, ಈ ಹಿಂದೆ ಇದು 14-15 ದಿನಗಳವರೆಗೆ ಬಳಸುವಷ್ಟು ಇರುತ್ತಿತ್ತು. ಬೇಡಿಕೆ ಹೆಚ್ಚಿದ್ದು ನಿಜ. ಆದರೆ ಪೂರೈಕೆ ಅಷ್ಟು ವೇಗವಾಗಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಯಾವೆಲ್ಲಾ ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆ ಇದೆ?
ಈ ಹಿಂದೆ, ದೇಶದ ಸುಮಾರು 10 ರಾಜ್ಯಗಳು ಕಲ್ಲಿದ್ದಲು ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂದು ಮಾಧ್ಯಮ ವರದಿಗಳು ಹೇಳಿದ್ದವು. ಉತ್ತರ ಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಮಧ್ಯಪ್ರದೇಶ, ಜಾರ್ಖಂಡ್, ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ತೆಲಂಗಾಣ ಕಲ್ಲಿದ್ದಲು ಕೊರತೆ ಎದುರಿಸುತ್ತಿವೆ ಎಂದು ವರದಿಗಳು ತಿಳಿಸಿವೆ. ಅಷ್ಟೇ ಅಲ್ಲ, ಜಾರ್ಖಂಡ್, ಬಿಹಾರ, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ಬೇಡಿಕೆಗಿಂತ ಕಡಿಮೆ ವಿದ್ಯುತ್ ಲಭ್ಯವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಯುಪಿಯಲ್ಲಿ 21 ರಿಂದ 22 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯೂ ಇದೆ. ಆದರೆ 19 ರಿಂದ 20 ಸಾವಿರ ಮೆಗಾವ್ಯಾಟ್ ವಿದ್ಯುತ್ ಮಾತ್ರ ಲಭ್ಯವಾಗುತ್ತಿದೆ.
ಮಹಾರಾಷ್ಟ್ರದ ಕಲ್ಲಿದ್ದಲು ಬಿಕ್ಕಟ್ಟಿಗೆ ರಾಜ್ಯವನ್ನು ದೂಷಿಸಿದ ಕೇಂದ್ರ
ಮತ್ತೊಂದೆಡೆ ಮಹಾರಾಷ್ಟ್ರದಲ್ಲೂ ಕಲ್ಲಿದ್ದಲು ಕೊರತೆಯ ಸುದ್ದಿ ವರದಿಯಾಗಿದೆ. ಆದರೆ, ಇದಕ್ಕೆ ಮಹಾರಾಷ್ಟ್ರ ಸರ್ಕಾರವೇ ಕಾರಣ ಎಂದು ಕೇಂದ್ರ ಸಚಿವ ರಾವ್ಸಾಹೇಬ್ ದಾನ್ವೆ ಆರೋಪಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಯೋಜನೆಯಲ್ಲಾದ ಲೋಪದಿಂದಾಗಿ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇದರಿಂದ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ. ಕಲ್ಲಿದ್ದಲು ಕೊರತೆಯ ಬಗ್ಗೆ ಮಹಾರಾಷ್ಟ್ರ ಸರ್ಕಾರ ಆಕ್ರೋಶವನ್ನು ಹುಟ್ಟುಹಾಕುತ್ತಿದೆ ಎಂದು ಅವರು ಹೇಳಿದರು. ಆದರೆ ರಾಜ್ಯ ಸರ್ಕಾರ ಮೊದಲೇ ಸಿದ್ಧತೆ ನಡೆಸಿದ್ದರೆ ಈಗ ರಾಜ್ಯಕ್ಕೆ ವಿದ್ಯುತ್ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದಿದ್ದಾರೆ.
ಪಂಜಾಬ್ ಹೆಚ್ಚುವರಿ ಕಲ್ಲಿದ್ದಲು ಕೇಳಿದೆ
ಮತ್ತೊಂದೆಡೆ, ಪಂಜಾಬ್ ಇಂಧನ ಸಚಿವ ಹರ್ಭಜನ್ ಸಿಂಗ್ ಅವರು ಬುಧವಾರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಉಷ್ಣ ವಿದ್ಯುತ್ ಕೇಂದ್ರಗಳನ್ನು ನಡೆಸಲು ಹೆಚ್ಚುವರಿ ಕಲ್ಲಿದ್ದಲು ಪೂರೈಸುವಂತೆ ಒತ್ತಾಯಿಸಿದರು. ವಾಸ್ತವವಾಗಿ, ಪಂಜಾಬ್‌ನಲ್ಲಿ ಭತ್ತದ ಬಿತ್ತನೆಯ ಅವಧಿ ನಡೆಯುತ್ತಿದೆ, ಆದ್ದರಿಂದ ವಿದ್ಯುತ್‌ಗೆ ಸಾಕಷ್ಟು ಬೇಡಿಕೆಯಿದೆ. ಇನ್ನು ಕೇಂದ್ರ ಸಚಿವರ ಭೇಟಿ ವೇಳೆ ಕಲ್ಲಿದ್ದಲು ಬಿಕ್ಕಟ್ಟು ಮತ್ತು ವಿದ್ಯುತ್ ಕೊರತೆಯ ವಿಷಯದ ಬಗ್ಗೆಯೂ ಮಾತನಾಡಿದ್ದಾರೆನ್ನಲಾಗಿದೆ.
