ಬೆಂಗಳೂರು (23):  ಪ್ರಭಾವಿ ರಾಜಕಾರಣಿಗಳ ಹೆಸರು ಬಳಸಿಕೊಂಡು ಗಣ್ಯವ್ಯಕ್ತಿಗಳು ಸೇರಿದಂತೆ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪಿ ಯುವರಾಜ ಅಲಿಯಾಸ್‌ ಸ್ವಾಮಿ ಆಸ್ತಿ ಮುಟ್ಟುಗೋಲಿಗೆ ನಗರದ ಸೆಷನ್ಸ್‌ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.

"

ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ನಗರದ 67ನೇ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಕಾತ್ಯಾಯನಿ ಅವರು ಯುವರಾಜ್‌ಗೆ ಸೇರಿದ 26 ಆಸ್ತಿಗಳ ಮುಟ್ಟುಗೋಲಿಗೆ ಆದೇಶಿಸಿದ್ದಾರೆ.

ಆರೋಪಿಯ ವಿರುದ್ಧ ನಡೆದ ತನಿಖೆಯಲ್ಲಿ ಸುಮಾರು 90 ಕೋಟಿ ರು. ಮೌಲ್ಯದ 26 ಸ್ಥಿರಾಸ್ತಿಗಳನ್ನು ಅಕ್ರಮವಾಗಿ ಸಂಪಾದನೆ ಮಾಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಸರ್ಕಾರಿ ಅಭಿಯೋಜಕ ಬಿ.ಎಸ್‌. ಪಾಟೀಲ್‌ ಅವರ ಮೂಲಕ ‘ಅಪರಾಧ ಕಾಯ್ದೆ ತಿದ್ದುಪಡಿ ಕಲಂ 3 ಮತ್ತು 4 ಅನ್ವಯ’ ಆರೋಪಿಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಪರಭಾರೆ ಮಾಡದಿರಲು ಆದೇಶ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಟ್ಯಾಕ್ಸಿ ಚಾಲಕನಿಗೂ 30 ಲಕ್ಷ ವಂಚಿಸಿದ ಯುವರಾಜ ಸ್ವಾಮಿ..! ..

ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ ಬಿ.ಎಸ್‌.ಪಾಟೀಲ್‌, ಸುಳ್ಳು ಹೇಳಿ ಸಂಪಾದನೆ ಮಾಡಿರುವ ಹಣದಲ್ಲಿ ಆರೋಪಿ ಯುವರಾಜ ಬೆಂಗಳೂರು ನಗರ, ಮದ್ದೂರು, ಅರಸೀಕೆರೆ, ಸಕಲೇಶಪುರ ಸೇರಿ ವಿವಿಧೆಡೆ ಖರೀದಿಸಿರುವ 26 ಸ್ಥಿರಾಸ್ತಿಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಬಹುತೇಕ ಎಲ್ಲ ಆಸ್ತಿಯನ್ನು ಪತ್ನಿ ಹೆಸರಿನಲ್ಲಿ ಗಳಿಸಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ಒದಗಿಸಬೇಕಾಗಿದೆ. ಅಲ್ಲದೆ, ಸರ್ಕಾರದ ಹಿತಾಸಕ್ತಿಯೂ ಇದೆ. ಆದ್ದರಿಂದ ಆರೋಪಿಯ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಾದ, ದಾಖಲೆ ಪರಿಶೀಲನೆ ನಡೆಸಿದ ನ್ಯಾಯಾಲಯ, ಆರೋಪಿಯ 26 ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಪರಭಾರೆ ಮಾಡದಂತೆ ಮಧ್ಯಂತರ ಆದೇಶ ಹೊರಡಿಸಿದೆ.

ಹುದ್ದೆ ಕೊಡಿಸುವ ನೆಪದಲ್ಲಿ ವಂಚನೆ:

ಆರೋಪಿ ರಾಜ್ಯಪಾಲರ ಹುದ್ದೆ, ಸರ್ಕಾರಿ ನೌಕರಿ, ಮೆಡಿಕಲ್‌ ಸೀಟ್‌, ನಿಗಮ- ಮಂಡಳಿಗೆ ಅಧ್ಯಕ್ಷ ಸ್ಥಾನ ಕೊಡಿಸುವ ನೆಪದಲ್ಲಿ ಕೋಟ್ಯಂತರ ರು. ಪಡೆದು ವಂಚನೆ ಮಾಡಿದ್ದು, ಈತನ ವಿರುದ್ಧ ಹೈಗ್ರೌಂಡ್ಸ್‌, ಸದಾಶಿವನಗರ, ಉಪ್ಪಾರಪೇಟೆ, ವಿಲ್ಸನ್‌ ಗಾರ್ಡನ್‌, ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಗಳಲ್ಲಿ 14 ಪ್ರಕರಣಗಳು ದಾಖಲಾಗಿವೆ. ಆರೋಪ ಸಂಬಂಧ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಯಾವ್ಯಾವ ಆಸ್ತಿ ಜಪ್ತಿ?

ಮದ್ದೂರಿನ ಕಾಡುಕೊತ್ತನಹಳ್ಳಿಯಲ್ಲಿ 13 ನಿವೇಶನ (ಮೌಲ್ಯ 56 ಲಕ್ಷ ರು.), ಬೆಂಗಳೂರು ಉತ್ತರ ತಾಲೂಕು ಮಲ್ಲತ್ತಹಳ್ಳಿಯಲ್ಲಿ 1 ನಿವೇಶನ (15 ಲಕ್ಷ), ನಾಗರಬಾವಿಯಲ್ಲಿ 1 ನಿವೇಶನ (3.75 ಕೋಟಿ), ಸಕಲೇಶಪುರದ ಅಗನಿ ಗ್ರಾಮದಲ್ಲಿ ಬಾಲಾಜಿ ಕಾಫಿ ಪ್ಲಾಂಟೇಶನ್‌ (3 ಕೋಟಿ), 1.20 ಎಕರೆ ಜಮೀನು (96 ಲಕ್ಷ ), ಬೆಂಗಳೂರು ದಕ್ಷಿಣ ಕೊಮ್ಮಘಟ್ಟಗ್ರಾಮದಲ್ಲಿ 222 ಚದರ ಮೀಟರ್‌ ಜಾಗ, ನಾಗರಬಾವಿಯಲ್ಲಿ 48 ಲಕ್ಷ ಹಾಗೂ 1.25 ಕೋಟಿ ರು. ಮೌಲ್ಯದ ಎರಡು ನಿವೇಶನ, ಹೆಗ್ಗನಹಳ್ಳಿಯಲ್ಲಿ 1 ನಿವೇಶನ (5.62 ಲಕ್ಷ), ಸಕಲೇಶಪುರದಲ್ಲಿ 5 ಎಕರೆ 7 ಗುಂಟೆ (5.30 ಕೋಟಿ), ಸಕಲೇಶಪುರದ ಅಗನಿ ಗ್ರಾಮದಲ್ಲಿ ಪ್ರತ್ಯೇಕ ಕಡೆ 11 ಎಕರೆ ಜಮೀನು, ಬೆಂಗಳೂರಿನ ಜ್ಞಾನಭಾರತಿಯಲ್ಲಿ ಎರಡು ಸಾವಿರ ಅಡಿ ಜಾಗ (1.50 ಕೋಟಿ), ಆರ್‌ಪಿಸಿ ಲೇಔಟ್‌ನಲ್ಲಿ 1 ನಿವೇಶನ (9 ಲಕ್ಷ ) ಮತ್ತು ಕೆಂಗೇರಿ ಸಮೀಪದ ಕೆ.ಕೃಷ್ಣಸಾಗರದಲ್ಲಿ 1 ನಿವೇಶನ (80 ಲಕ್ಷ) ಹೊಂದಿದ್ದಾರೆ. ಈ ಎಲ್ಲ ಆಸ್ತಿಯನ್ನು ತನ್ನ ಪತ್ನಿ ಪ್ರೇಮಾ ಹೆಸರಿನಲ್ಲಿ 2007ರಿಂದ 2020 ವರೆಗೂ ಯುವರಾಜ್‌ ಖರೀದಿಸಿದ್ದಾನೆ.