Asianet Suvarna News Asianet Suvarna News

ಟ್ಯಾಕ್ಸಿ ಚಾಲಕನಿಗೂ 30 ಲಕ್ಷ ವಂಚಿಸಿದ ಯುವರಾಜ ಸ್ವಾಮಿ..!

ಕೆಎಂಎಫ್‌ ಉದ್ಯೋಗದ ಹೆಸರಿನಲ್ಲಿ 30 ಲಕ್ಷ ಧೋಖಾ| ಪ್ರಕರಣ ದಾಖಲು| 2019ರ ಜುಲೈನಲ್ಲಿ ವಿಮಾನ ನಿಲ್ದಾಣಕ್ಕೆ ಡ್ರಾಪ್‌ ಮಾಡುವಾಗ ಆಟೋ ಚಾಲಕ ಲೋಕೇಶ್‌ಗೆ ಯುವರಾಜನ ಪರಿಚಯ| ಆರ್‌ಟಿಜಿಎಸ್‌ ಮೂಲಕ ಯುವರಾಜನ ಕಾರು ಚಾಲಕನ ಬ್ಯಾಂಕ್‌ ಖಾತೆಗೆ 20 ಲಕ್ಷ ಜಮೆ| 

Yuvraj Swami Cheat to Auto Driver in Bengaluru grg
Author
Bengaluru, First Published Jan 15, 2021, 7:43 AM IST

ಬೆಂಗಳೂರು(ಜ.15): ವಂಚಕ ಯುವರಾಜನ ಮೋಸದ ಜಾಲವನ್ನು ಶೋಧಿಸಿದಷ್ಟು ಹೊಸ ಕೃತ್ಯಗಳು ಹೊರಬರುತ್ತಿವೆ. ಟ್ಯಾಕ್ಸಿ ಚಾಲಕನ ಅಳಿಯನೊಬ್ಬನಿಗೆ ಕೆಎಂಎಫ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 30 ಲಕ್ಷ ಸುಲಿದು ಟೋಪಿ ಹಾಕಿರುವ ಕುತೂಹಲಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಕಮಲಾನಗರದ ಗೋವಿಂದಯ್ಯ ಎಂಬುವರೇ ವಂಚನೆಗೊಳಗಾಗಿದ್ದು, ಈ ಬಗ್ಗೆ ಜ್ಞಾನಭಾರತಿ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ತನಿಖೆ ಸಲುವಾಗಿ ಪ್ರಕರಣವನ್ನು ಸಿಸಿಬಿಗೆ ಆಯುಕ್ತ ಕಮಲ್‌ ಪಂತ್‌ ವರ್ಗಾಯಿಸಿದ್ದಾರೆ. ಯುವರಾಜ್‌ ವಿರುದ್ಧ ಅಧಿಕೃತವಾಗಿ ದಾಖಲಾದ 7ನೇ ವಂಚನೆ ಪ್ರಕರಣ ಇದಾಗಿದೆ.

ದೂರಿನ ವಿವರ ಹೀಗಿದೆ:

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋವಿಂದಯ್ಯ ಹಾಗೂ ಅವರ ಸಂಬಂಧಿಕ ಲೋಕೇಶ್‌ ಕ್ಯಾಬ್‌ ಚಾಲಕರಾಗಿದ್ದಾರೆ. 2019ರ ಜುಲೈನಲ್ಲಿ ವಿಮಾನ ನಿಲ್ದಾಣಕ್ಕೆ ಡ್ರಾಪ್‌ ಮಾಡುವಾಗ ಲೋಕೇಶ್‌ಗೆ ಯುವರಾಜನ ಪರಿಚಯವಾಗಿದೆ. ಆಗ ಯುವರಾಜ, ‘ನಾನು ಆರ್‌ಎಸ್‌ಎಸ್‌ ಮುಖಂಡ. ಹಲವು ಗಣ್ಯ ವ್ಯಕ್ತಿಗಳು ನನಗೆ ಸ್ನೇಹಿತರಿದ್ದಾರೆ. ಏನಾದರೂ ಸರ್ಕಾರಿ ಕೆಲಸ ಇದ್ದರೆ ಹೇಳು ಮಾಡಿಸಿಕೊಡುತ್ತೇನೆ’ ಎಂದು ಮೊಬೈಲ್‌ ನಂಬರ್‌ ಕೊಟ್ಟಿದ್ದ. ಈ ವಿಚಾರವನ್ನು ಲೋಕೇಶ್‌, ತನ್ನ ಸಂಬಂಧಿ ಗೋವಿಂದಯ್ಯರಿಗೆ ತಿಳಿಸಿದ್ದ. ತನ್ನ ಅಳಿಯ ವೇಣುಗೋಪಾಲ್‌ಗೆ ಸರ್ಕಾರಿ ಕೆಲಸ ಕೊಡಿಸುವ ಉದ್ದೇಶಕ್ಕೆ ಯುವರಾಜನ ಭೇಟಿ ಮಾಡಿಸುವಂತೆ ಲೋಕೇಶ್‌ಗೆ ಗೋವಿಂದಯ್ಯ ದುಂಬಾಲು ಬಿದ್ದಿದ್ದರು.

ಸಂತೋಷ್ ಹೆಸರಿನಲ್ಲೂ ಯುವರಾಜ್ ಧೋಖಾ..!

ನಾಗರಬಾವಿಯ ಯುವರಾಜನ ಮನೆಗೆ ತನ್ನ ಪತ್ನಿ, ಅಳಿಯ, ಮಗಳೊಂದಿಗೆ ಗೋವಿಂದಯ್ಯ ತೆರಳಿದ್ದರು. ಆ ವೇಳೆ ಅವರಿಗೆ ಊಟೋಪಚಾರದ ಆತಿಥ್ಯ ನೀಡಿದ್ದ ಯುವರಾಜ, ಕೆಎಂಎಫ್‌ನಲ್ಲಿ ಮಾರುಕಟ್ಟೆವ್ಯವಸ್ಥಾಪಕನ ಹುದ್ದೆ ಖಾಲಿ ಇದೆ. ತಿಂಗಳಿಗೆ .80 ಸಾವಿರ ವೇತನ ಸಿಗಲಿದೆ. ಕೆಲಸ ಬೇಕಾದರೆ 30 ಲಕ್ಷ ಕೊಡುವಂತೆ ಬೇಡಿಕೆವೊಡ್ಡಿದ್ದ. ಈ ಪ್ರಸ್ತಾಪಕ್ಕೊಪ್ಪಿದ ಗೋವಿಂದಯ್ಯ, ಆರ್‌ಟಿಜಿಎಸ್‌ ಮೂಲಕ ಯುವರಾಜನ ಕಾರು ಚಾಲಕನ ಬ್ಯಾಂಕ್‌ ಖಾತೆಗೆ 20 ಲಕ್ಷ ಜಮೆ ಮಾಡಿದ್ದರು. ಇದಾದ ಮೇಲೆ ಮತ್ತೆ .10 ಲಕ್ಷವನ್ನು ಯುವರಾಜನ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದರು. ಹೀಗೆ ಒಟ್ಟು 30 ಲಕ್ಷ ಕೊಟ್ಟಿದ್ದರು. ತಿಂಗಳು ಕಳೆದರೂ ಯಾವುದೇ ಕೆಲಸ ಮಾಡಿಸಿಕೊಡದೆ ಇದ್ದಾಗ ಗೋವಿಂದಯ್ಯ, ತಮ್ಮ ಹಣ ವಾಪಸ್‌ ಕೊಡುವಂತೆ ಒತ್ತಾಯ ಮಾಡಿದ್ದರು. ನಿಮಗೆ ಕೆಲಸ ಮಾಡಿಸಿಕೊಡುತ್ತೇನೆ. ಹಣ ಕೊಡುವುದಿಲ್ಲ ಎಂದು ಯುವರಾಜ ಸಬೂಬು ಹೇಳಿಕೊಂಡು ಕಾಲಹರಣ ಮಾಡಿದ್ದ. ಹೀಗಿರುವಾಗ ಆತನನ್ನು ಸಿಸಿಬಿ ಬಂಧಿಸಿದ ಮಾಹಿತಿ ತಿಳಿಯಿತು. ನಮಗೆ ಸಹ ವಂಚಿಸಿದ್ದಾನೆ ಎಂದು ಗೋವಿಂದಯ್ಯ ದೂರಿನಲ್ಲಿ ಅಲವತ್ತುಕೊಂಡಿದ್ದಾರೆ.
 

Follow Us:
Download App:
  • android
  • ios