ದೆಹಲಿಯಲ್ಲಿನ ಹವಾಮಾನ ವೈಪರೀತ್ಯದಿಂದಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನವನ್ನು ಜೈಪುರದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ಎಟಿಸಿ ಸೂಚನೆ ಮೇರೆಗೆ ಈ ಮಾರ್ಗ ಬದಲಾವಣೆ ಮಾಡಲಾಗಿದ್ದು, ಹವಾಮಾನ ತಿಳಿಯಾದ ನಂತರ ವಿಮಾನ ದೆಹಲಿಗೆ ಪ್ರಯಾಣಿಸಲಿದೆ.

ಬೆಂಗಳೂರು/ದೆಹಲಿ (ಮೇ.28): ರಾಷ್ಟ್ರರಾಜಧಾನಿ ದೆಹಲಿಯಲ್ಲಿ ದಿಢೀರನೆ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ವಿಶೇಷ ವಿಮಾನವು ದೆಹಲಿ ಬದಲಿಗೆ ರಾಜಸ್ಥಾನದ ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ. ದೆಹಲಿ ಸುತ್ತಮುತ್ತ ಭಾರಿ ಗಾಳಿ ಮತ್ತು ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಎಟಿಎಸ್‌ (Air Traffic Control) ಸೂಚನೆಯ ಮೇರೆಗೆ ಸಿಎಂ ಇದ್ದ ವಿಮಾನದ ಮಾರ್ಗವನ್ನು ಜೈಪುರದತ್ತ ಬದಲಾಯಿಸಿ ಅಲ್ಲಿ ಇಳಿಸಲಾಗಿದೆ. ಜೈಪುರದಿಂದ ದೆಹಲಿಗೆ ವಿಮಾನವು ಮರಳಿ ಪ್ರಯಾಣ ಬೆಳೆಸಲು ಕನಿಷ್ಠ ಇನ್ನೂ ಒಂದು ಗಂಟೆಗೂ ಅಧಿಕ ಸಮಯ ಬೇಕಾಗಬಹುದು ಎಂದು ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಮಾನದಲ್ಲಿದ್ದ ಪ್ರಮುಖ ನಾಯಕರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖರು ಮತ್ತು ರಾಜ್ಯದ ಸಚಿವರ ದೊಡ್ಡ ದಂಡೇ ಈ ವಿಶೇಷ ವಿಮಾನದಲ್ಲಿದೆ. ರಣದೀಪ್ ಸಿಂಗ್ ಸುರ್ಜೇವಾಲಾ (ಕರ್ನಾಟಕ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ), ಕೆ.ಜೆ. ಜಾರ್ಜ್, ಬೈರತಿ ಸುರೇಶ್, ಎ.ಎಸ್. ಪೊನ್ನಣ್ಣ, ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಅಭಿಷೇಕ್ ದತ್ ವಿಮಾನದಲ್ಲಿದ್ದರು.

ಸದ್ಯ ಜೈಪುರದಲ್ಲೇ ಸಿಎಂ ಮತ್ತು ನಾಯಕರ ತಂಡ ಹವಾಮಾನ ತಿಳಿಯಾಗುವವರೆಗೆ ಕಾಯುತ್ತಿದ್ದು, ದೆಹಲಿಯಲ್ಲಿ ವಾತಾವರಣ ಸುಧಾರಿಸಿದ ತಕ್ಷಣವೇ ಜೈಪುರದಿಂದ ದೆಹಲಿಯತ್ತ ವಿಶೇಷ ವಿಮಾನವು ಹಾರಾಟ ನಡೆಸಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.