ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳೂ ಕೊರೋನಾ ಎದುರಿಸಲು ಸರ್ವ ರೀತಿಯಲ್ಲೂ ಸಜ್ಜಾಗಬೇಕು. ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‌ ಸಿದ್ಧಪಡಿಸಬೇಕು. ಕೊರೋನಾ ಸೋಂಕಿತರಿಗಾಗಿಯೇ ಕೆಲ ಐಸಿಯು ಬೆಡ್‌ಗಳನ್ನು ಮೀಸಲಿಡಬೇಕು ಎಂದು ಸ್ಪಷ್ಟ ಸೂಚನೆ ನೀಡಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್‌ 

ಬೆಂಗಳೂರು(ಡಿ.29): ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೊರೋನಾ ಪ್ರಕರಣಗಳ ಚಿಕಿತ್ಸೆಗೆ ತ್ವರಿತ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಕೊರೋನಾ ವಾರ್ಡ್‌ ಹಾಗೂ ಐಸಿಯು ಬೆಡ್‌ಗಳನ್ನು ಮೀಸಲಿಡಬೇಕು ಎಂಬುದು ಸೇರಿ ಹಲವು ಸೂಚನೆಗಳನ್ನುಳ್ಳ ಸುತ್ತೋಲೆಯನ್ನು ಆರೋಗ್ಯ ಇಲಾಖೆ ಹೊರಡಿಸಿದೆ. ಕೊರೋನಾ ಸೋಂಕು ಉಲ್ಬಣ ಹಿನ್ನೆಲೆಯಲ್ಲಿ ಮಂಗಳವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು.

ಇವುಗಳನ್ನು ಅಧಿಕೃತ ಸುತ್ತೋಲೆ ರೂಪದಲ್ಲಿ ಹೊರಡಿಸಿರುವ ಆರೋಗ್ಯ ಇಲಾಖೆ ಆಯುಕ್ತ ರಂದೀಪ್‌, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳೂ ಕೊರೋನಾ ಎದುರಿಸಲು ಸರ್ವ ರೀತಿಯಲ್ಲೂ ಸಜ್ಜಾಗಬೇಕು. ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‌ ಸಿದ್ಧಪಡಿಸಬೇಕು. ಕೊರೋನಾ ಸೋಂಕಿತರಿಗಾಗಿಯೇ ಕೆಲ ಐಸಿಯು ಬೆಡ್‌ಗಳನ್ನು ಮೀಸಲಿಡಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

ಹುಬ್ಬಳ್ಳಿ: ಕಿಮ್ಸ್‌ ಇಮೇಜ್‌ ಬದಲಿಸಿದ ಕೊರೋನಾ..!

ಇನ್ನು ಕೊರೋನಾ ಸೋಂಕಿತರ ಸಂಪರ್ಕಿತರಲ್ಲಿ ಸೋಂಕು ಲಕ್ಷಣ ಕಂಡು ಬಂದರೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು. ರಾಜ್ಯಾದ್ಯಂತ ಕೊರೋನಾ ಸೋಂಕಿತರು ಯಾವುದೇ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಟೆಲಿ ಐಸಿಯು ಮೂಲಕ ಕೇಂದ್ರ ಕಚೇರಿಯಿಂದಲೇ ನಿಗಾ ವಹಿಸಬೇಕು. ಇನ್ನು ಜಿಲ್ಲಾ ಮಟ್ಟದಲ್ಲಿ ಡೆತ್‌ ಆಡಿಟ್‌ ಮಾಡಬೇಕು. ಕೊರೋನಾ ಸಾವಿನ ಕಾರಣಗಳ ಕುರಿತ ವರದಿಯನ್ನು ಆಗಿಂದಾಗ್ಗೆ ಆಯುಕ್ತರಿಗೆ ಕಳುಹಿಸಬೇಕು. ಕೊರೋನಾ ಸೋಂಕು ದೃಢಪಡದ ಹೊರತು ಅನಗತ್ಯ ಸಿಟಿ ಸ್ಕ್ಯಾನ್‌ ಮಾಡದಂತೆ ರೋಗಿಗಳು ಹಾಗೂ ಸ್ಕ್ಯಾನಿಂಗ್‌ ಕೇಂದ್ರಗಳಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಕರ್ನಾಟಕದಲ್ಲಿ ಮತ್ತೆ ಕೊರೋನಾ ಹೆಚ್ಚಳ: ಹೊಸ ವರ್ಷಾಚರಣೆಗೆ ನಿರ್ಬಂಧ ಫಿಕ್ಸ್‌?

ಇನ್ನು ಕೊರೋನಾ ಸೋಂಕು ಹರಡದಂತೆ ಜನದಟ್ಟಣೆ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೊರೋನಾ ಮುನ್ನೆಚ್ಚರಿಕಾ ನಡೆ ಪಾಲಿಸಬೇಕು ಎಂದು ಹೇಳಲಾಗಿದೆ.

ಆರೋಗ್ಯ ಸಿಬ್ಬಂದಿಗೆ ಫ್ಲೂ ಶಾಟ್ಸ್‌: ಪ್ರತ್ಯೇಕ ಸುತ್ತೋಲೆ

ಇನ್ನು ಆರೋಗ್ಯ ಸಿಬ್ಬಂದಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಜ್ವರದ ಲಸಿಕೆ (ಫ್ಲೂ ವ್ಯಾಕ್ಸಿನ್) ನೀಡಲು ನಿಧರಿಸಲಾಗಿದೆ. ಇದನ್ನು ಯಾವ ರೀತಿ ನೀಡಬೇಕು? ಯಾವ್ಯಾವ ಹಂತದಲ್ಲಿ ಯಾರಿಗೆ ಆದ್ಯತೆ ನೀಡಿ ಲಸಿಕೆ ನೀಡಬೇಕು ಎಂಬ ಕುರಿತು ಪ್ರತ್ಯೇಕ ಸುತ್ತೋಲೆ ಹೊರಡಿಸುವುದಾಗಿ ತಿಳಿಸಲಾಗಿದೆ.