ಕರ್ನಾಟಕದಲ್ಲಿ ಮತ್ತೆ ಕೊರೋನಾ ಹೆಚ್ಚಳ: ಹೊಸ ವರ್ಷಾಚರಣೆಗೆ ನಿರ್ಬಂಧ ಫಿಕ್ಸ್?
ರಾಜ್ಯದಲ್ಲಿ ಕೋವಿಡ್ ಸೊಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಡೆಸಿದ ಜಿನೋಮ್ ಸಿಕ್ವೇನ್ಸಿಂಗ್‌ನಲ್ಲಿ ನಿರೀಕ್ಷೆಯಂತೆ ಓಮಿಕ್ರಾನ್ ವೈರಾಣು ಉಪತಳಿ ಜೆಎನ್.1 ಪತ್ತೆಯಾಗಿದೆ. 34 ಕೋವಿಡ್ ಸೋಂಕಿತರಿಗೆ ಜೆಎನ್.1 ಪಾಸಿಟಿವ್ ಬಂದಿದೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು(ಡಿ.26): ನೂತನ ಉಪತಳಿ ವೇಗವಾಗಿ ಹರಡುವ ಲಕ್ಷಣ ಹೊಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕು ಉಲ್ಬಣವಾಗುವ ಆತಂಕವನ್ನೂ ಸೃಷ್ಟಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಕೋವಿಡ್ ಸೊಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಡೆಸಿದ ಜಿನೋಮ್ ಸಿಕ್ವೇನ್ಸಿಂಗ್‌ನಲ್ಲಿ (ವೈರಾಣು ವಂಶವಾಹಿ ರಚನೆ ವಿಶ್ಲೇಷಣೆ) ನಿರೀಕ್ಷೆಯಂತೆ ಓಮಿಕ್ರಾನ್ ವೈರಾಣು ಉಪತಳಿ ಜೆಎನ್.1 ಪತ್ತೆಯಾಗಿದೆ. 34 ಕೋವಿಡ್ ಸೋಂಕಿತರಿಗೆ ಜೆಎನ್.1 ಪಾಸಿಟಿವ್ ಬಂದಿದೆ ಎಂದು ಮಾಹಿತಿ ಹಂಚಿಕೊಂಡರು.
ಆತಂಕ ಬೇಕಾಗಿಲ್ಲ:
ರಾಜ್ಯದ ಜನರು ಆತಂಕ ಪಡುವ ಅಗತ್ಯವಿಲ್ಲ. ಜೆಎನ್.1 ಉಪತಳಿ ಅಪಾಯಕಾರಿ ಅಲ್ಲ ಎಂಬುದನ್ನು ತಜ್ಞರು ಈಗಾಗಲೇ ಹೇಳಿದ್ದಾರೆ. ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸ್ಬಲ್ಪ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆಯಿಂದ ಕೂಡ ಈಗಾಗಲೇ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್ ಎದುರಿಸಲು ಸನ್ನದ್ಧರಾಗುವಂತೆ ಎರಡು ಮೂರು ಬಾರಿ ಸಭೆ ನಡೆಸಿ ಆಸ್ಪತ್ರೆಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಹೊಸ ವರ್ಷಕ್ಕೆ ಕೋವಿಡ್ 4ನೇ ಅಲೆ ಭೀತಿ, JN.1 ಪ್ರಕರಣ 63ಕ್ಕೆ ಏರಿಕೆ, ಸಕ್ರಿಯ ಕೊರೋನಾ 4054!
ಹೊಸ ವರ್ಷಾಚರಣೆಗೆ ನಿರ್ಬಂಧ ಇಲ್ಲ:
ಜೆಎನ್ .1 ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ಹೊಸ ಮಾರ್ಗಸೂಚಿ ಬಂದಿಲ್ಲ. ಹೀಗಾಗಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸುವ ಯಾವುದೇ ಚಿಂತನೆಗಳಿಲ್ಲ. ಮಂಗಳವಾರ ನಡೆಯಲಿರುವ ಸಚಿವ ಸಂಪುಟ ಉಪ ಸಮಿತಿಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.