ಬೆಂಗಳೂರು(ಜ.31): ಮಾನವ ಸಮಾಜದ ಪ್ರಮುಖ ಶಕ್ತಿ ಸಂಪನ್ಮೂಲವಾಗಿರುವ ವಿದ್ಯುತ್ ವಿಕೇಂದ್ರೀಕರಣಕ್ಕೆ ಟೊಂಕ ಕಟ್ಟಿ ನಿಂತಿರುವ SELCO ಫೌಂಡೇಶನ್, ವಿದ್ಯುತ್ ವಿಕೇಂದ್ರೀಕರಣದ ಮಹತ್ವ ತಿಳಿಸುವ ಎರಡು ದಿನಗಳ SUNಚಲನ ಕಾರ್ಯಾಗಾರವನ್ನು ಯಶಸ್ವಿಯಾಗಿ ಮುಗಿಸಿದೆ.

ಕಾರ್ಯಾಗಾರದ ಎರಡನೇ ದಿನದ ಸಭೆ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಆಧುನಿಕ ಸರ್ಕಾರಗಳು ಕೇವಲ ಸಮಾಜದ ನಿರ್ದಿಷ್ಟ ವರ್ಗದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, SELCOದಂತಹ ಸಂಸ್ಥೆಗಳು ತಳ ಮಟ್ಟದ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಗಮನ ಸೆಳೆದಿವೆ ಎಂದು ಹೇಳಿದರು.

ಸಮಾಜದ ಶ್ರೀಮಂತ ವರ್ಗದ ಬಳಿ ವಿದ್ಯುತ್ ಅಭಾವದ ಸಮಸ್ಯೆಗೆ ಪರಿಹಾರವಿದ್ದು, ಗ್ರಾಮಗಳಲ್ಲಿ ವಾಸಿಸುವ ಬಡ ಜನರಲ್ಲಿ ಇದಕ್ಕೆ ಪರಿಹಾರವಿಲ್ಲ. ಹಳ್ಳಿಗಳಲ್ಲಿನ ವಿದ್ಯುತ್ ಸಮಸ್ಯೆ ನಿವಾರಣೆಗೆಂದೇ SELCOದಂತಹ ನಿಸ್ವಾರ್ಥ ಸಂಘಟನೆಗಳು ದುಡಿಯುತ್ತಿದ್ದು, ಇದಕ್ಕೆ ಪ್ರಜ್ಞಾವಂತ ವರ್ಗ ಕೈಜೋಡಿಸಬೇಕಿದೆ ಎಂದು ರವಿಕುಮಾರ್ ಮನವಿ ಮಾಡಿದರು.

ಈ ವೇಳೆ ಮಾತನಾಡಿದ SELCO ಫೌಂಡೇಶನ್ ಮುಖ್ಯಸ್ಥ ಡಾ. ಹರೀಶ್ ಹಂದೆ, ಶಕ್ತಿ ಸಂಪನ್ಮೂಲಗಳು ಬಡತನ ಮತ್ತು ದಾರಿದ್ರ್ಯತನದಿಂದ ದೇಶವನ್ನು ಮುಕ್ತಗೊಳಿಸಬಹುದಾಗಿದ್ದು, ವಿದ್ಯುತ್ ವಿಕೇಂದ್ರೀಕರಣ ಇಂದಿನ ತುರ್ತು ಅವಶ್ಯವಾಗಿದೆ ಎಂದು ಹೇಳಿದರು.

SELCO ಫೌಂಡೇಶನ್ ಮೂಲಕ ಕರ್ನಾಟಕದಲ್ಲಿ ನಾವಿದನ್ನು ಸಾಧ್ಯ ಮಾಡಿ ತೋರಿಸಿದ್ದು, ಹಳ್ಳಿ ಹಳ್ಳಿಗೂ ವಿದ್ಯುತ್ ತಲುಪಿಸಲು ದೇಶದ ಪ್ರಜ್ಷಾವಂತ ವರ್ಗ  ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಈ ವೇಳೆ ಡಾ. ಹರೀಶ್ ಹಂದೆ ಮನವಿ ಮಾಡಿದರು.

ಇನ್ನು ಕರುಣಾ ಟ್ರಸ್ಟ್ ನ ಡಾ. ಸುದರ್ಶನ್, ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ,  DATC ಸಂಸ್ಥೆಯ ಮಾಲತೇಶ್ ಪುಟ್ಟಣ್ಣವರ್ ಕೂಡ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.

ಶಕ್ತಿ ಸಂಪನ್ಮೂಲದ ವಿಕೇಂದ್ರೀಕರಣ: ತುರ್ತಾಗಿ ಆಗ್ಬೇಕಣ್ಣ!