ಬೆಂಗಳೂರು(ಜ.24): ಪ್ರಕೃತಿ ಯಾರ ಸ್ವತ್ತೂ ಅಲ್ಲ. ಅದರಂತೆ ಪ್ರಕೃತಿಯ ಪ್ರತಿಯೊಂದೂ ಅಂಶದ ಮೇಲೂ ಪ್ರತಿಯೊಬ್ಬರ ಹಕ್ಕಿದೆ. 

ನೀರು, ಗಾಳಿ, ಬೆಳಕು ಹೀಗೆ ಯಾವುದನ್ನು ನಾವು ಶಕ್ತಿ ಸಂಪನ್ಮೂಲ ಎಂದು ಕರೆಯುತ್ತೇವೆಯೋ ಅವೆಲ್ಲಾ ಭೂಮಿಯ ಮೇಲೆ ಬದುಕುತ್ತಿರುವ ಪ್ರತಿಯೊಂದೂ ಜೀವಿಗೆ ಸೇರಿದ್ದು. 

ಅಂದರೆ ನವೀಕರಿಸಬಹುದಾದ ಮತ್ತು ನವೀಕರಿಸಲು ಬಾರದ ಎಲ್ಲಾ ಶಕ್ತಿ ಸಂಪನ್ಮೂಲಗಳ ಮೇಲೆ ಎಲ್ಲಾ ಜೀವಿಗಳ ಸಮಾನ ಹಕ್ಕಿದೆ.

ಆದರೆ ಇಂದು ಈ ಶಕ್ತಿ ಸಂಪನ್ಮೂಲ ನಮ್ಮ ಸಮಾಜದಲ್ಲಿ ನಾನಾ ಕಾರಣಗಳಿಂದಾಗಿ ಸರಿಸಮಾನವಾಗಿ ಹಂಚಿಕೆಯಾಗುತ್ತಿಲ್ಲ. ನಗರೀಕರಣದಿಂದಾಗಿ ಸರ್ಕಾರಗಳು ಈ ಶಕ್ತಿ ಸಂಪನ್ಮೂಲಗಳ ಹಂಚಿಕೆಯನ್ನು ನಗರಗಳತ್ತಲೇ ಕೇಂದ್ರೀಕರಣಗೊಳಿಸುತ್ತಿವೆ.

ಆದರೆ ಈ ಶಕ್ತಿ ಸಂಪನ್ಮೂಲಗಳ ವಿಕೇಂದ್ರೀಕರಣ ಇಂದಿನ ತುರ್ತು ಅವಶ್ಯವಾಗಿದೆ. ಅದರಂತೆ SELCO ಫೌಂಡೇಶನ್ ಸಂಸ್ಥೆ  ಶಕ್ತಿ ಸಂಪನ್ಮೂಲಗಳ ವಿಕೇಂದ್ರೀಕರಣದ ಕುರಿತು ಜಾಗೃತಿ ಮೂಡಿಸಲು ಇದೇ ಜ.29ರಿಂದ ಎರಡು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

ಮೊದಲ ದಿನ(ಜ.29) ತುಮಕೂರು ಮತ್ತು ಗುಬ್ಬಿಯಲ್ಲಿ ಕ್ಷೇತ್ರ ಅಧ್ಯಯನ ಹಮ್ಮಿಕೊಳ್ಳಲಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಶಕ್ತಿ ಸಂಪನ್ಮೂಲಗಳ ಬಳಕೆ ಮತ್ತು ಬಡತನ ನಿರ್ಮೂಲನೆಯಲ್ಲಿ ಶಕ್ತಿ ಸಂಪನ್ಮೂಲಗಳ ಪಾತ್ರದ ಕುರಿತು ಜಾಗೃತಿ ಮೂಡಿಸಲಾಗುತ್ತದೆ.

ಎರಡನೇಯ ದಿನ(ಜ.30) ಬೆಂಗಳೂರಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಹಲವು ತಜ್ಞರು ಈ ಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ವಿಚಾರ ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಾಗಾರದ ಆಶಯ ಭಾಷಣವನ್ನು ಸಂಸ್ಥೆಯ ಚೇರಮನ್ ಡಾ. ಹರೀಶ್ ಹಂದೆ ಮಾಡಲಿದ್ದಾರೆ.

ಸೆಲ್ಕೋ ಫೌಂಡೇಶನ್:

ಭಾರತದ ಗ್ರಾಮಾಂತರ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಶಕ್ತಿ ಹರಿಕಾರ ಎಂದೇ ಖ್ಯಾತಿಗಳಿಸಿರುವ ಮ್ಯಾಗ್ಸೇಸ್ಸೆ ಪ್ರಶಸ್ತಿ ಪುರಸ್ಕೃತ ಡಾ. ಹರೀಶ್ ಹಂದೆ ಸೆಲ್ಕೋ ಫೌಂಡೇಶನ್‌ನ್ನು ಮುನ್ನಡೆಸುತ್ತಿದ್ದಾರೆ.

ಹಳ್ಳಿಗಳಲ್ಲಿ ಸೌರಶಕ್ತಿಯ ಸಹಾಯದಿಂದ ವಿದ್ಯುತ್ ಶಕ್ತಿ ತಲುಪಿಸುವ ಕಾಯಕದಲ್ಲಿ ಸೆಲ್ಕೋ ಫೌಂಡೇಶನ್ ನಿರತವಾಗಿದೆ. 

ಹರೀಶ್ ಹಂದೆ ಅವರ ಕಾರ್ಯವನ್ನು ಶ್ಲಾಘಿಸಿದ್ದ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಹಂದೆ ಅವರನ್ನು ಅಮೆರಿಕಕ್ಕೆ ಬರುವಂತೆ ಆಹ್ವಾನಿಸಿದ್ದರು.