ರಾಜ್ಯದಲ್ಲಿ 2ನೇ ಸಲ 8000+ ಕೊರೋನಾ ಪ್ರಕರಣಗಳು, ಆಗಸ್ಟ್‌ನಲ್ಲೇ ಹೆಚ್ಚು ಸಾವು!

ರಾಜ್ಯದಲ್ಲಿ ಕೊರೋನಾ ಅಬ್ಬರ ಮತ್ತೆ ಮರುಕಳಿಸಿದೆ. ಬುಧವಾರ(ಆ.19) ಮತ್ತೊಮ್ಮೆ ಕರ್ನಾಟಕದಲ್ಲಿ ಒಂದೇ ದಿನ ಕೊರೋನಾ ಪೀಡಿತರ ಸಂಖ್ಯೆ ಎರಡನೇ ಬಾರಿಗೆ 8 ಸಾವಿರದ ಗಡಿ ದಾಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 

Second Time Karnataka register More then 8 thousand COVID 19 Cases on August 19th

ಬೆಂಗಳೂರು(ಆ.20): ರಾಜ್ಯದಲ್ಲಿ ಬುಧವಾರ ದಾಖಲೆಯ 63,085 ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಇದರ ಪರಿಣಾಮವಾಗಿ ಮಹಾಮಾರಿಯ ಆರ್ಭಟ ಕರುನಾಡಿನಲ್ಲಿ ಆರಂಭವಾದ ನಂತರ ಎರಡನೇ ಬಾರಿಗೆ ಸೋಂಕು ಎಂಟು ಸಾವಿರದ ಗಡಿ ದಾಟಿದೆ.

ಬುಧವಾರ ಒಂದೇ ದಿನ ಮತ್ತೆ 8,642 ಮಂದಿಗೆ ಸೋಂಕು ದೃಢಪಟ್ಟು, 126 ಮಂದಿ ಸೋಂಕಿತರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆಗಸ್ಟ್‌ 15ರಂದು ಒಂದೇ ದಿನ 8,818 ಮಂದಿಗೆ ಸೋಂಕು ದೃಢಪಟ್ಟು ದಾಖಲೆ ನಿರ್ಮಿಸಿತ್ತು. ನಾಲ್ಕು ದಿನಗಳ ಬಳಿಕ ಮತ್ತೆ ಎಂಟು ಸಾವಿರದ ಗಡಿ ದಾಟಿದೆ. ಇದರೊಂದಿಗೆ ರಾಜ್ಯದ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 2.49 ಲಕ್ಷಕ್ಕೆ ಏರಿದೆ. ಇನ್ನು ಇದುವರೆಗೂ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 4,327 (ಅನ್ಯ ಕಾರಣದಿಂದ ಮೃತಪಟ್ಟ 16 ಸೋಂಕಿತರ ಮರಣ ಹೊರತುಪಡಿಸಿ) ತಲುಪಿದೆ.

ಬೆಂಗಳೂರು: ಕೇವಲ 5 ದಿನದಲ್ಲಿ 228 ಮಂದಿ ಬಲಿ ಪಡೆದ ಮಹಾಮಾರಿ ಕೊರೋನಾ

ಇದರ ನಡುವೆ ಬುಧವಾರ ಸೋಂಕಿನಿಂದ ಗುಣಮುಖರಾದ 7,201 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ತನ್ಮೂಲಕ ಇದುವರೆಗೂ ಕೋವಿಡ್‌ನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 1.64 ಲಕ್ಷಕ್ಕೆ ಏರಿಕೆಯಾಗಿದೆ. ಉಳಿದ 81 ಸಾವಿರ ಮಂದಿ ಸಕ್ರಿಯ ಸೋಂಕಿತರು ರಾಜ್ಯದ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 704 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರೆಲ್ಲರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬೆಂಗಳೂರಲ್ಲಿ 2804 ಹೊಸ ಪ್ರಕರಣ:

ಬೆಂಗಳೂರು ನಗರ ಒಂದರಲ್ಲೇ ಬುಧವಾರ 2,804 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರಿಂದ ನಗರದ ಒಟ್ಟು ಸೋಂಕಿತರ ಸಂಖ್ಯೆ 96,910ಕ್ಕೇರಿದ್ದು, ಇದರಲ್ಲಿ 62,041 ಮಂದಿ ಗುಣಮುಖರಾಗಿದ್ದಾರೆ. ಉಳಿದ 33,280 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ರಾಜ್ಯದ ಇತರೆ ಜಿಲ್ಲೆಗಳ ಪೈಕಿ ಬುಧವಾರ ಶಿವಮೊಗ್ಗದಲ್ಲಿ 915, ಮೈಸೂರು 562, ಬಳ್ಳಾರಿ 537, ಬೆಳಗಾವಿ 379, ಉಡುಪಿ 375, ಧಾರವಾಡ 253, ದಕ್ಷಿಣ ಕನ್ನಡ 234, ದಾವಣಗೆರೆ, ಹಾಸನ ತಲಾ 228, ಮಂಡ್ಯ 185, ಬಾಗಲಕೋಟೆ 163, ಗದಗ 149, ರಾಯಚೂರು 153, ಕಲಬುರಗಿ 154, ಹಾವೇರಿ 137, ಕೊಪ್ಪಳ 133, ರಾಜನಗರ 126, ಉತ್ತರ ಕನ್ನಡ 119, ಚಾಮರಾಜ ನಗರ 111, ವಿಜಯಪುರ 107, ಚಿಕ್ಕಮಗಳೂರು 100, ತುಮಕೂರು 94, ಕೋಲಾರ 86, ಚಿಕ್ಕಬಳ್ಳಾಪುರ 73, ಬೆಂಗಳೂರು ಗ್ರಾಮಾಂತರ 68, ಚಿತ್ರದುರ್ಗ 47, ಬೀದರ್‌ 43, ಯಾದಗಿರಿ 41 ಮತ್ತು ಕೊಡಗು ಜಿಲ್ಲೆಯಲ್ಲಿ 38 ಮಂದಿಗೆ ಸೋಂಕು ದೃಢಪಟ್ಟಿದೆ.

ಬೆಂಗಳೂರಲ್ಲಿ ಆಗಸ್ಟ್‌ನಲ್ಲೇ ಅತಿ ಹೆಚ್ಚು ಸಾವು:

ಬುಧವಾರ ವರದಿಯಾಗಿರುವ 126 ಸಾವಿನ ಪ್ರಕರಣಗಳ ಪೈಕಿ ರಾಜಧಾನಿ ಬೆಂಗಳೂರಿನಲ್ಲೇ 56 ಮಂದಿ ಸಾವನ್ನಪ್ಪಿದ್ದು, ಇದು ಆಗಸ್ಟ್‌ ತಿಂಗಳಲ್ಲೇ ನಗರದ ಅತಿ ಹೆಚ್ಚಿನ ಸಾವಿನ ಸಂಖ್ಯೆಯಾಗಿದೆ. ಉಳಿದಂತೆ ಬೀದರ್‌, ಧಾರವಾಡ, ಮತ್ತು ಬಳ್ಳಾರಿಯಲ್ಲಿ ತಲಾ 9, ಕೊಪ್ಪಳ 8, ದಾವಣಗೆರೆ 7, ತುಮಕೂರು ಮತ್ತು ಮೈಸೂರು ತಲಾ 5, ದಕ್ಷಿಣ ಕನ್ನಡ 4, ಹಾವೇರಿ, ಕಲಬುರಗಿ ಮತ್ತು ಬೆಳಗಾವಿ ತಲಾ 3, ರಾಯಚೂರು, ಶಿವಮೊಗ್ಗ, ಗದಗ ಮತ್ತು ವಿಜಯಪುರ ತಲಾ 2, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ ತಲಾ ಒಬ್ಬರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇದರಲ್ಲಿ ಆರು ಪ್ರಕರಣಗಳಲ್ಲಿ ಸೋಂಕಿನ ಸಂಪರ್ಕ ಪತ್ತೆಯಾಗಿಲ್ಲ. ಉಳಿದ ಪ್ರಕರಣಗಳು ಐಎಲ್‌ಐ, ಸಾರಿ ಮತ್ತು ವಿವಿಧ ಪೂರ್ವ ಕಾಯಿಲೆಗಳ ಹಿನ್ನೆಲೆಯಿಂದ ಕೂಡಿವೆ.
 

Latest Videos
Follow Us:
Download App:
  • android
  • ios