ಬೆಂಗಳೂರು: ಕೇವಲ 5 ದಿನದಲ್ಲಿ 228 ಮಂದಿ ಬಲಿ ಪಡೆದ ಮಹಾಮಾರಿ ಕೊರೋನಾ
ಆಗಸ್ಟ್ ತಿಂಗಳಿನಲ್ಲಿ ನಿನ್ನೆ ಅತ್ಯಧಿಕ ಸಾವು| ಬುಧವಾರ 56 ಮಂದಿಯ ಜೀವ ತೆಗೆ ಕೊರೋನಾ| ಲಕ್ಷದ ಗಡಿಯಲ್ಲಿ ಸೋಂಕಿತರ ಸಂಖ್ಯೆ| ಬುಧವಾರ 2,804 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 96,910ಕ್ಕೆ ಏರಿಕೆ|
ಬೆಂಗಳೂರು(ಆ.20): ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, ಬುಧವಾರ 56 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದು ಆಗಸ್ಟ್ ತಿಂಗಳಿನಲ್ಲಿ ಒಂದೇ ದಿನ ದಾಖಲಾದ ಅತಿ ಹೆಚ್ಚಿನ ಸಾವಿನ ಸಂಖ್ಯೆಯಾಗಿದೆ. ಕಳೆದ ಐದು ದಿನಗಳಿಂದ ನಗರದಲ್ಲಿ ಕೊರೋನಾ ಸೋಂಕಿಗೆ 228 ಮಂದಿ ಸಾವನ್ನಪ್ಪಿದ್ದಾರೆ.
ಆ.16 ಮತ್ತು 18 ರಂದು ತಲಾ 49 ಮಂದಿ ಸೋಂಕಿನಿಂದ ಮೃತಪಟ್ಟಿದ್ದು ಅತಿ ಹೆಚ್ಚಿನ ಸಾವಿನ ಸಂಖ್ಯೆಯಾಗಿತ್ತು. ಆದರೆ, ಬುಧವಾರ 56 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ನಗರದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,588ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಕೊರೋನಾ ಸ್ಫೋಟ: ದಾಖಲೆ ಪ್ರಮಾಣದಲ್ಲಿ ಸೋಂಕಿತರು ಪತ್ತೆ
ಬುಧವಾರ 2,804 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 96,910ಕ್ಕೆ ಏರಿಕೆಯಾಗಿದೆ. 2,549 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 62,041ಕ್ಕೆ ಏರಿಕೆಯಾಗಿದೆ. ಸದ್ಯ 33,280 ಸಕ್ರಿಯ ಪ್ರಕರಣಗಳಿವೆ. 329 ಮಂದಿಗೆ ನಗರದ ವಿವಿಧ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೊರೋನಾ ಆಸ್ಪತ್ರೆ, ಆರೈಕೆ ಕೇಂದ್ರ ಖಾಲಿ!
ನಗರದಲ್ಲಿರುವ 33,280 ಸಕ್ರಿಯ ಕೊರೋನಾ ಸೋಂಕಿತರ ಪೈಕಿ ಶೇ.75ರಷ್ಟುಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಹೀಗಾಗಿ, ನಗರದ ಬಹುತೇಕ ಕೊರೋನಾ ಆಸ್ಪತ್ರೆ, ಆರೈಕೆ ಕೇಂದ್ರದಲ್ಲಿ ಹಾಸಿಗೆಗಳು ಖಾಲಿ ಉಳಿದಿವೆ.
ಸಾರ್ವಜನಿಕರಲ್ಲಿ ಕೊರೋನಾ ಸೋಂಕಿನ ಬಗ್ಗೆ ಅರಿವು ಹಾಗೂ ಸರ್ಕಾರದ ಹೋಂ ಐಸೋಲೇಷನ್‌ಗೆ ಅವಕಾಶ ಮಾಡಿಕೊಟ್ಟಪರಿಣಾಮ ಕೊರೋನಾ ಸೋಂಕಿತರಿಗೆ ಉಂಟಾಗುತ್ತಿದ್ದ ಹಾಸಿಗೆ ಸಮಸ್ಯೆ ಸಾಕಷ್ಟುಪರಿಹಾರವಾಗಿದೆ.
ನಗರದಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳು ಹಾಗೂ ಬಿಬಿಎಂಪಿ ಕೊರೋನಾ ಆರೈಕೆ ಕೇಂದ್ರಗಳಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಗೆ 16,165 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ ಬುಧವಾರದ ಮಾಹಿತಿ ಪ್ರಕಾರ 8,810 ಹಾಸಿಗೆ ಮಾತ್ರ ಭರ್ತಿಯಾಗಿವೆ. ಉಳಿದಂತೆ 7,355 ಹಾಸಿಗೆ ಇನ್ನೂ ಖಾಲಿ ಇವೆ.
ನಗರದಲ್ಲಿರುವ 33,280 ಸಕ್ರಿಯ ಸೋಂಕಿತರ ಪೈಕಿ ಶೇ.75 ರಷ್ಟುಅಂದರೆ 24,470 ಮಂದಿ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಆರೈಕೆ ಪಡೆಯುತ್ತಿದ್ದಾರೆ. ಇನ್ನು ಪ್ರತಿ ನಿತ್ಯ 2500ಕ್ಕೂ ಅಧಿಕ ಸೋಂಕಿತರ ಪೈಕಿ ಬಹುತೇಕರು ಮಧ್ಯಮ ಸೋಂಕಿನ ಲಕ್ಷಣ ಹೊಂದಿದವರಾಗಿದ್ದಾರೆ. ಹಾಗಾಗಿ, ಬಿಬಿಎಂಪಿಯೂ ಹೋಂ ಐಸೋಲೇಷನ್‌ಗೆ ಹೆಚ್ಚಿನ ಅವಕಾಶ ಮಾಡಿಕೊಡುತ್ತಿದೆ.
ಶೇ.61ಕ್ಕಿಂತ ಹೆಚ್ಚಿನ ಹಾಸಿಗೆ ಖಾಲಿ:
ನಗರದ 300ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಯಲ್ಲಿ ಒಟ್ಟು 5258 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ 2069 ಹಾಸಿಗೆ ಮಾತ್ರ ಭರ್ತಿಯಾಗಿವೆ. ಇನ್ನು 3189 ಹಾಸಿಗೆ ಖಾಲಿ ಇವೆ. ಶೇ.61ರಷ್ಟುಹಾಸಿಗೆ ಖಾಲಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ
ಹೋಂ ಐಸೋಲೇಷನ್‌ನಲ್ಲಿ ಹೆಚ್ಚಿನ ಸೋಂಕಿತರು ಇದ್ದಾರೆ. ಜತೆಗೆ ಖಾಸಗಿ ಆಸ್ಪತ್ರೆಯಲ್ಲಿ ಶೇ.50 ರಷ್ಟುಹಾಸಿಗೆ ಮಿಸಲಿಟ್ಟಿದ್ದು, ಸೋಂಕಿತರು ಹೋಂ ಐಸೋಲೇಷನ್ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಿದೆ ಎಂದು ರಾಜೀವ್ ಗಾಂಧಿ ಆಸ್ಪತ್ರೆಯ ನಿರ್ದೇಶಕ, ಡಾ. ಸಿ.ನಾಗರಾಜ್ ಅವರು ತಿಳಿಸಿದ್ದಾರೆ.
ಹೋಮ್ ಐಸೋಲೇಷನ್‌ಗೆ ಲಂಚ ಕೇಳಿದರೆ ಕಠಿಣ
ಹೋಂ ಐಸೋಲೇಷನ್‌ಗೆ ಒಳಗಾಗಲು ಅನುಮತಿ ನೀಡಲು ಕೊರೋನಾ ಸೋಂಕಿತರಿಂದ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆಂಬ ಆರೋಪಗಳು ದೃಢಪಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಎಚ್ಚರಿಸಿದ್ದಾರೆ.
ಅಮರ ಜ್ಯೋತಿ ನಗರದಲ್ಲಿ ಸೋಂಕು ದೃಢಪಟ್ಟವ್ಯಕ್ತಿಗೆ ಹೋಂ ಐಸೋಲೇಷನ್‌ನಲ್ಲಿ ಇರುವುದಕ್ಕೆ ಅವಕಾಶ ನೀಡಲು ಲಂಚ ಕೇಳುತ್ತಿರುವ ದೂರು ಬಂದಿದೆ. ಈ ಕುರಿತು ಪರಿಶೀಲನೆ ನಡೆಸುತ್ತಿದ್ದು, ಒಂದು ವೇಳೆ ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಲಂಚ ಕೇಳಿದವರು ಬಿಬಿಎಂಪಿ ಸಿಬ್ಬಂದಿಯೇ ಎಂಬುದರ ಬಗ್ಗೆ ಸ್ಪಷ್ಟಮಾಹಿತಿ ಇಲ್ಲ. ಸಾರ್ವಜನಿಕರು ಮತ್ತು ಸೋಂಕಿತರು ಯಾವುದೇ ಕಾರಣಕ್ಕೂ ಯಾರಿಗೂ ಹಣ ನೀಡಬೇಡಿ. ಹೋಂ ಐಸೋಲೇಷನ್‌ಗೆ ಅಥವಾ ಆರೈಕೆ ಕೇಂದ್ರದಲ್ಲಿ ದಾಖಲಿಸಲು ಬಿಬಿಎಂಪಿ ಯಾವುದೇ ರೀತಿಯ ಶುಲ್ಕ ಪಡೆಯುತ್ತಿಲ್ಲ. ಎಲ್ಲವೂ ಸಂಪೂರ್ಣ ಉಚಿತವಾಗಿದೆ. ಒಂದು ವೇಳೆ ಯಾರಾದರೂ ಹಣ ಕೇಳಿದರೆ ದೂರು ನೀಡುವಂತೆ ಮನವಿ ಮಾಡಿದ್ದಾರೆ.
ಒತ್ತಾಯದ ದೂರು ಇವೆ
ಮಧ್ಯಮ ಸೋಂಕಿನ ಲಕ್ಷಣ ಇರುವವರು ಹೋಂ ಐಸೋಲೇಷನ್‌ಗೆ ಒಳಗಾಗುತ್ತೇವೆ ಎಂದರೂ ಆ್ಯಂಬುಲೆನ್ಸ್ ಬರುತ್ತಿದೆ, ನಿಮಗೆ ಕೋವಿಡ್ ಆರೈಕೆ ಅಥವಾ ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸಿದ್ದೇವೆ, ಬನ್ನಿ ಎಂದು ಅಧಿಕಾರಿಗಳು ಒತ್ತಾಯ ಮಾಡುತ್ತಿರುವ ದೂರುಗಳನ್ನೂ ಗಂಭೀರವಾಗಿ ಪರಿಗಣಿಸಲಾಗುವುದು. ಸೋಂಕಿನ ಲಕ್ಷಣ ಇಲ್ಲದೆ ಹಾಗೂ ಅವರ ಮನೆಯಲ್ಲೇ ಪ್ರತ್ಯೇಕವಾಗಿ ಐಸೋಲೇಷನ್‌ನಲ್ಲಿ ಇರಲು ವ್ಯವಸ್ಥೆ ಇದ್ದರೆ, ಅವರಿಗೆ ಕೋವಿಡ್ ಆರೈಕೆ ಕೇಂದ್ರಕ್ಕೆ ಬರುವಂತೆ ಒತ್ತಡ ಹೇರುವಂತಿಲ್ಲ. ಈ ರೀತಿಯ ದೂರುಗಳು ದೃಢಪಟ್ಟರೆ ಸಂಬಂಧ ಪಟ್ಟಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.