ಹಲವು ದುಷ್ಕೃತ್ಯದಲ್ಲಿ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ಪಾತ್ರದ ಬಗ್ಗೆ ಒಂದೂವರೆ ವರ್ಷ ಹಿಂದೆಯೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಪೊಲೀಸರು ಕೊಟ್ಟ ಸಮಗ್ರ ವರದಿ ಬಗ್ಗೆ ಸರ್ಕಾರ ಇನ್ನೂ ಗಮನ ಹರಿಸಿಲ್ಲ. ಆದರೂ ಹೊಸದಾಗಿ ಕಠಿಣ ಕ್ರಮದ ಆಶ್ವಾಸನೆ ನೀಡಿದೆ.

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು (ಆ.2): ರಾಜ್ಯದಲ್ಲಿ ಹಿಂದೂಗಳ ಹತ್ಯೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪ್ಯಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಹಾಗೂ ಸೋಷಿಯಲಿಸ್ಟ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಸಂಘಟನೆಗಳ ಪಾತ್ರದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದ ರಾಜ್ಯ ಪೊಲೀಸ್‌ ಇಲಾಖೆ, ಕಾನೂನು ಕ್ರಮಕ್ಕೆ ಶಿಫಾರಸು ಮಾಡಿದ ವರದಿಗೆ ಸರ್ಕಾರದಿಂದ ಮೋಕ್ಷ ಸಿಗದೆ ಒಂದೂವರೆ ವರ್ಷಗಳಿಂದ ಕಪಾಟಿನಲ್ಲಿ ಧೂಳು ತಿನ್ನುತ್ತಿದೆ. 2020ರಲ್ಲಿ ಬೆಂಗಳೂರಿನ ದೇವರಜೀವನಹಳ್ಳಿ (ಡಿಜೆ ಹಳ್ಳಿ) ಹಾಗೂ ಕಾಡುಕೊಂಡನಹಳ್ಳಿ (ಕೆ.ಜಿ.ಹಳ್ಳಿ) ಗಲಭೆ ಪ್ರಕರಣದಲ್ಲಿ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ 400ಕ್ಕೂ ಹೆಚ್ಚು ಜನರು ಬಂಧಿತರಾಗಿದ್ದರು. ಈ ಘಟನೆ ನಂತರ ಈ ಎರಡು ಸಂಘಟನೆಗಳ ಮೇಲೆ ನಿಷೇಧ ಹೇರುವ ಬಗ್ಗೆ ವರದಿ ನೀಡುವಂತೆ ರಾಜ್ಯ ಪೊಲೀಸ್‌ ಇಲಾಖೆಗೆ ಸೂಚಿಸಿತ್ತು. ಅಂತೆಯೇ ಆಗಿನ ರಾಜ್ಯ ಹೆಚ್ಚುವರಿ ಪೊಲೀಸ್‌ ನಿರ್ದೇಶಕರ (ಕಾನೂನು ಮತ್ತು ಸುವ್ಯವಸ್ಥೆ) ನೇತೃತ್ವದಲ್ಲಿ ನಾಲ್ವರು ಎಸ್ಪಿಗಳ ತಂಡ ಪಿಎಫ್‌ಐ ಮತ್ತು ಎಸ್‌ಡಿಪಿಐಗಳ ಕುರಿತು ಸಮಗ್ರ ವರದಿ ಸಿದ್ದಪಡಿಸಿತು. ಆದರೆ ವರದಿ ಕಾರ್ಯರೂಪಕ್ಕೆ ಬರಲಿಲ್ಲ.

ಈಗ ಕರಾವಳಿ ಭಾಗದಲ್ಲಿ ಸರಣಿ ಕೊಲೆಗಳ ಬಳಿಕ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳ ಮೇಲೆ ನಿಷೇಧ ಹೇರುವಂತಹ ಕಠಿಣ ಕಾನೂನು ಕ್ರಮ ಜರುಗಿಸಲು ವರದಿ ಪಡೆಯುವುದಾಗಿ ಹೇಳಿದ್ದಾರೆ. ಆದರೆ ಈಗಾಗಲೇ ಪೊಲೀಸರ ವರದಿಯೂ ಇದ್ದರೂ ಮತ್ತೆ ವರದಿ ಪಡೆಯುವೆ ಎಂದು ಹೇಳಿರುವುದು ಅಚ್ಚರಿದಾಯಕವಾಗಿದೆ.

ನೆಲೆ, ವಿಸ್ತಾರ ಗುರುತಿಸಿದ್ದ ವರದಿ: ರಾಜ್ಯದಲ್ಲಿ ಈ ಎರಡು ಸಂಘಟನೆಗಳ ಪ್ರತಿ ವಿಧಾನಸಭಾ ಕ್ಷೇತ್ರವಾರು ಕೂಡಾ ಸ್ಥಳೀಯ ಅಧ್ಯಕ್ಷ, ಕಾರ್ಯಕರ್ತ ಹಾಗೂ ಮುಖಂಡರು ಒಳಗೊಂಡಂತೆ 200ಕ್ಕೂ ಹೆಚ್ಚು ಮಂದಿಯ ಮೊಬೈಲ್‌ ಸಂಖ್ಯೆ ಸಮೇತ ವೈಯಕ್ತಿಕ ಮಾಹಿತಿ ಕೂಡಾ ಎಡಿಜಿಪಿ ನೇತೃತ್ವದ ತಂಡ ಸಿದ್ದಪಡಿಸಿತ್ತು ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಪಿಎಫ್‌ಐ, ಎಸ್‌ಡಿಪಿಐ ನಿಷೇಧ ಕೋರಿ ಹಿಂದೂಗಳ ಪ್ರತಿಭಟನೆ

ಹತ್ತು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಎರಡು ಸಂಘಟನೆಗಳ ಸದಸ್ಯರ ಮೇಲೆ ದಾಖಲಾದ ಅಪರಾಧ ಪ್ರಕರಣಗಳು. ಆ ಕೃತ್ಯದಲ್ಲಿ ಬಂಧಿತರಾದ ಸದಸ್ಯರು ಹಾಗೂ ಮುಖಂಡರು, ಕೃತ್ಯದಲ್ಲಿನ ಅವರ ಪಾತ್ರ ಹಾಗೂ ಪ್ರಕರಣಗಳ ತನಿಖೆ ಪ್ರಗತಿ ಬಗ್ಗೆ ಸಹ ವರದಿಯಲ್ಲಿ ಉಲ್ಲೇಖವಾಗಿತ್ತು ಎಂದು ಮೂಲಗಳು ಹೇಳಿವೆ.

ಎಸ್‌ಡಿಪಿಐ, ಎಂಐಎಂಗೆ ಬಿಜೆಪಿಯ ಬಿ ಟೀಮ್‌ ಪಟ್ಟ..!

ವರದಿಯಲ್ಲಿ ಏನಿದೆ?: ಈ ಎರಡು ಸಂಘಟನೆಗಳ ಪ್ರತಿ ವಿಧಾನಸಭಾ ಕ್ಷೇತ್ರವಾರು ಕೂಡಾ ಸ್ಥಳೀಯ ಅಧ್ಯಕ್ಷ, ಕಾರ್ಯಕರ್ತ ಹಾಗೂ ಮುಖಂಡರು ಒಳಗೊಂಡಂತೆ 200ಕ್ಕೂ ಹೆಚ್ಚು ಮಂದಿಯ ಮೊಬೈಲ್‌ ಸಂಖ್ಯೆ ಸಮೇತ ವೈಯಕ್ತಿಕ ಮಾಹಿತಿ. ಹತ್ತು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಎರಡು ಸಂಘಟನೆಗಳ ಸದಸ್ಯರ ಮೇಲೆ ದಾಖಲಾದ ಅಪರಾಧ ಪ್ರಕರಣಗಳು. ಆ ಕೃತ್ಯದಲ್ಲಿ ಬಂಧಿತರಾದ ಸದಸ್ಯರು ಹಾಗೂ ಮುಖಂಡರು, ಕೃತ್ಯದಲ್ಲಿನ ಅವರ ಪಾತ್ರ ಹಾಗೂ ಪ್ರಕರಣಗಳ ತನಿಖೆ ಪ್ರಗತಿ ಬಗ್ಗೆ ಸಹ ವರದಿಯಲ್ಲಿ ಉಲ್ಲೇಖ.