ಬೀದರ್ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಜೆಪಿ ಎಂಎಲ್ಎ ಸಿದ್ದು ಪಾಟೀಲ್ ಮತ್ತು ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಉಸ್ತುವಾರಿ ಸಚಿವ ಖಂಡ್ರೆ ಮುಂದೆಯೇ ಪರಸ್ಪರ ಅವಾಚ್ಯ ಪದಗಳಿಂದ ನಿಂದಿಸಿಕೊಂಡಿದ್ದಾರೆ ಹಾಗೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಬೀದರ್ : ಬೀದರ್ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ಬಿಜೆಪಿ ಎಂಎಲ್ಎ ಸಿದ್ದು ಪಾಟೀಲ್ ಮತ್ತು ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಅವರು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮುಂದೆಯೇ ಪರಸ್ಪರ ಅವಾಚ್ಯ ಪದಗಳಿಂದ ನಿಂದಿಸಿಕೊಂಡಿದ್ದಾರೆ ಹಾಗೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಇದರ ಪರಿಣಾಮ ಜಿ.ಪಂ. ಸಭಾಂಗಣ ರಣರಂಗವಾಗಿ ಪರಿವರ್ತನೆ ಆಗಿದ್ದು, ಶಾಸಕರ ಈ ವರ್ತನೆ ಜನತೆಯ ಟೀಕೆಗೆ ಗುರಿಯಾಗಿದೆ.
ಹುಮ್ನಾಬಾದ್‌ನಲ್ಲಿನ ಗುರುನಾನಕ ಝೀರಾ ಟ್ರಸ್ಟ್ ದಾನದ ಜಮೀನು ಖಾಸಗಿ ಲೇಔಟ್‌ಗೆ ಬಳಕೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಕಾದಾಟ ನಡೆದಿದೆ. ಕೊನೆಗೆ ಸಚಿವ ಈಶ್ವರ ಖಂಡ್ರೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ, ವಿಕೋಪಕ್ಕೆ ತಿರುಗುತ್ತಿದ್ದ ಸಂಘರ್ಷ ತಪ್ಪಿಸಿದ್ದಾರೆ.
ಈ ಮಧ್ಯೆ, ಬೀದರ್ ಜಿಲ್ಲೆ ಹುಮ್ನಾಬಾದ್ ನಲ್ಲಿನ ಶಾಸಕ ಸಿದ್ದು ಪಾಟೀಲ್ ಹಾಗೂ ಮಾಜಿ ಸಚಿವ ರಾಜಶೇಖರ ಪಾಟೀಲ್ ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವರ ಬೆಂಬಲಿಗರು ಸೇರಿದ್ದು, ಉದ್ವಿಗ್ನ ವಾತಾವರಣ ನೆಲೆಗೊಂಡಿದೆ. ಹೀಗಾಗಿ, ಅಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸವಾಲು-ಪ್ರತಿ ಸವಾಲು:
ಜಿ.ಪಂ.ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ 1ರ ಸುಮಾರಿಗೆ ಸಭೆ ಆರಂಭವಾಯಿತು. ಬಿಜೆಪಿ ಶಾಸಕ ಡಾ.ಸಿದ್ದಲಿಂಗಪ್ಪ (ಸಿದ್ದು) ಪಾಟೀಲ್ ಅವರು ಮಾತನಾಡಿ, ‘ಕಳೆದ ತ್ರೈಮಾಸಿಕ ಸಭೆಗಳಲ್ಲಿ ನಾವು ಕೇಳಿದ ಪ್ರಶ್ನೆಗಳಿಗೆ ಈವರೆಗೂ ಉತ್ತರ ಸಿಕ್ಕಿಲ್ಲ, ಹುಮನಾಬಾದ್ ನ ಸರ್ವೇ ನಂಬರ್ 202 ಹಾಗೂ 205ರ ಅರಣ್ಯ ಭೂಮಿ ಹಾಗೂ ಸರ್ಕಾರಿ ಭೂಮಿಯನ್ನು ಕೆಲ ಖಾಸಗಿಯವರು ಕಬ್ಜಾ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಿ ಬಡವರಿಗೆ ನಿವೇಶನ ಕೊಡಿ. ಗುರುನಾನಕ್ ಝೀರಾ ಟ್ರಸ್ಟ್‌ಗೆ ಸಿಖ್ ಸಮುದಾಯದವರ ಏಳ್ಗೆಗಾಗಿ ಕೊಟ್ಟಿರುವ ದಾನದ ಭೂಮಿಯನ್ನು ಲೇಔಟ್ ಆಗಿ ಪರಿವರ್ತಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳಲಾಗುತ್ತಿಲ್ಲ’ ಎಂದು ಆರೋಪಿಸಿದರು. ಈ ಆರೋಪ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಅವರನ್ನು ಕೆರಳಿಸಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಈಶ್ವರ ಖಂಡ್ರೆಯವರು, ‘ಇದರ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸುತ್ತೇನೆ’ ಎಂದು ಸಮಾಧಾನಪಡಿಸಲು ಯತ್ನಿಸಿದರು.
ಈ ವೇಳೆ, ಮಧ್ಯ ಪ್ರವೇಶಿಸಿದ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಅವರು, ‘ಈ ಲೇಔಟ್ ಒಂದು ಟ್ರಸ್ಟ್ ಅಡಿ ಬರುತ್ತಿರುವುದರಿಂದ ಇದು ಅಕ್ರಮ ಅಲ್ಲ ಸಕ್ರಮವಾಗಿದೆ’ ಎಂದರು. ಇದಕ್ಕೆ ತಿರುಗೇಟು ನೀಡಿದ ಸಿದ್ದಲಿಂಗಪ್ಪ ಪಾಟೀಲ್, ‘ಅಕ್ರಮ ಆಗಿಲ್ಲ ಎಂದಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಸವಾಲೆಸೆದರು. ಆಗ ಎಂಎಲ್ಸಿ ಸಹೋದರರಾದ ಡಾ.ಚಂದ್ರಶೇಖರ ಪಾಟೀಲ್ ಹಾಗೂ ಭೀಮರಾವ್ ಪಾಟೀಲ್ ಅವರು ಕೂಡ, ‘ಆ ಲೇಔಟ್ ಸಕ್ರಮವಾಗಿದೆ, ಇಲ್ಲಿ ಯಾವುದೇ ಕಾನೂನು ಬಾಹಿರ ಆಗಿಲ್ಲ, ಇದು ಸುಳ್ಳಾದರೆ ನಾವೂ ಸಹ ನಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ’ ಎಂದು ಪ್ರತಿಸವಾಲು ಹಾಕಿದರು.
ಈ ವೇಳೆ, ಮಧ್ಯ ಪ್ರವೇಶಿಸಿದ ಸಚಿವರು, ‘ಯಾರೂ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ’ ಎಂದು ಹೇಳುತ್ತಿರುವಾಗಲೇ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಅವರತ್ತ ಭೀಮರಾವ್ ಪಾಟೀಲ್ ನುಗ್ಗಿ ಬಂದು, ಕೈ ಎತ್ತಿದಾಗ ಇಬ್ಬರ ಮಧ್ಯೆ ಜಗಳ ಆರಂಭವಾಗಿ, ಕೈ-ಕೈ ಮಿಲಾಯಿಸಲು ಮುಂದಾದರು.
ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಸಚಿವ ಈಶ್ವರ ಖಂಡ್ರೆ ಮಧ್ಯ ಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಲು ಮುಂದಾದರು. ಜೊತೆಗೆ, ಸಚಿವರು ಸಭೆಯನ್ನು ಮುಂದೂಡುವುದಾಗಿ ಘೋಷಿಸಿದರು.
ಆಗಿದ್ದೇನು?
- ಹುಮನಾಬಾದ್ ಗುರುನಾನಕ ಝೀರಾ ಟ್ರಸ್ಟ್ ದಾನದ ಜಮೀನು ಖಾಸಗಿ ಲೇಔಟ್‌ಗೆ
- ಇದೇ ಕಾದಾಟಕ್ಕೆ ಮೂಲ. ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಎದುರೇ ಗಲಾಟೆ
- ಇದು ಅಕ್ರಮ ಎಂದ ಸಿದ್ದು ಪಾಟೀಲ್. ಅಕ್ರಮ ಅಲ್ಲ ಎಂದ ಭೀಮರಾವ್ ಪಾಟೀಲ್
- ಆಗ ಇಬ್ಬರ ಮಧ್ಯೆಯೂ ಭಾರಿ ವಾಕ್ಸಮರ. ಗಲಾಟೆ, ಕೈ ಮಿಲಾಯಿಸಿದ ಶಾಸಕರು


