ಬೀದರ್ ಜಿಲ್ಲೆಯ ಸಂತಪೂರ್ ಪೊಲೀಸರು ತೆಲಂಗಾಣದಿಂದ ನಡೆಯುತ್ತಿದ್ದ ಅಕ್ರಮ ಗಾಂಜಾ ಸಾಗಾಟ ಜಾಲವನ್ನು ಯಶಸ್ವಿಯಾಗಿ ಬೇಧಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ನಡೆಸಿದ ದಾಳಿಯಲ್ಲಿ, ಮೂವರು ಆರೋಪಿಗಳನ್ನು ಬಂಧಿಸಿ 10 ಲಕ್ಷ ಮೌಲ್ಯದ 20.63 ಕೆಜಿ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ್ದ ಆಟೋ ವಶಪಡಿಸಿಕೊಂಡಿದ್ದಾರೆ.
ಬೀದರ್ (ಜ.3): ಗಡಿ ಜಿಲ್ಲೆ ಬೀದರ್‌ನಲ್ಲಿ ಅಕ್ರಮ ಮಾದಕ ದ್ರವ್ಯ ಜಾಲದ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ನೆರೆ ರಾಜ್ಯ ತೆಲಂಗಾಣದಿಂದ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಜಾಲವನ್ನು ಬೇಧಿಸಿರುವ ಸಂತಪೂರ್ ಪೊಲೀಸರು, ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಸಹಿತ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು
ತೆಲಂಗಾಣ ರಾಜ್ಯದ ಹಂಗರಗಾ ಗ್ರಾಮದ ಕಡೆಯಿಂದ ಬೀದರ್ ಜಿಲ್ಲೆಗೆ ಆಟೋವೊಂದರಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಸಂತಪೂರ್ ಪೊಲೀಸರು, ಔರಾದ್ ತಾಲೂಕಿನ ಜಂಬಗಿ(ಬಿ) ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ.
ಆಟೋದಲ್ಲಿ ಪತ್ತೆಯಾಯ್ತು 20 ಕೆ.ಜಿ ಗಾಂಜಾ!
ಅರಣ್ಯ ಮಾರ್ಗವಾಗಿ ಬರುತ್ತಿದ್ದ ಆಟೋವನ್ನು ತಡೆದು ತಪಾಸಣೆ ನಡೆಸಿದಾಗ, ಅದರಲ್ಲಿದ್ದ ಎರಡು ಬ್ಯಾಗ್‌ಗಳು ಅನುಮಾನಾಸ್ಪದವಾಗಿ ಕಂಡುಬಂದಿವೆ. ಬ್ಯಾಗ್‌ಗಳನ್ನು ತೆರೆದು ಪರಿಶೀಲಿಸಿದ ಪೊಲೀಸರು ಅಲ್ಲಿನ ದೃಶ್ಯ ಕಂಡು ದಂಗಾಗಿದ್ದಾರೆ. ಸುಮಾರು 10 ಲಕ್ಷ ರೂಪಾಯಿ ಮೌಲ್ಯದ 20.63 ಕೆಜಿ ಗಾಂಜಾ ಪತ್ತೆಯಾಗಿದ್ದು, ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ್ದ ಆಟೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅರೆಸ್ಟ್ ಆದ ಖತರ್ನಾಕ್ ಗ್ಯಾಂಗ್:
ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಔರಾದ್ ತಾಲೂಕಿನ ಘಾಮಾ ತಾಂಡಾದವನಾಗಿದ್ದರೆ, ಉಳಿದಿಬ್ಬರು ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಸೂರಥ್ಯ ನಾಯಕ ತಾಂಡಾ ನಿವಾಸಿಗಳೆಂದು ಗುರುತಿಸಲಾಗಿದೆ. ಅಂತರರಾಜ್ಯ ಗಾಂಜಾ ಪೂರೈಕೆ ಜಾಲದೊಂದಿಗೆ ಇವರು ನಿಕಟ ಸಂಬಂಧ ಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು
ಮಾದಕ ದ್ರವ್ಯ ಮಾರಾಟ ಮತ್ತು ಸಾಗಾಟದಂತಹ ಗಂಭೀರ ಅಪರಾಧ ಎಸಗಿದ ಹಿನ್ನೆಲೆಯಲ್ಲಿ, ಬಂಧಿತರ ವಿರುದ್ಧ ಸಂತಪೂರ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಜಾಲದ ಹಿಂದೆ ಇನ್ನು ಯಾರಾದರೂ ಪ್ರಭಾವಿ ವ್ಯಕ್ತಿಗಳಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.


