*ಸಂಕನೂರು ಸಮಿತಿ ವರದಿ ಪರಿಶೀಲಿಸಿ ಶೀಘ್ರ ಹೊಸ ಸುತ್ತೋಲೆ*ಸುತ್ತೋಲೆ ಹೊರಡಿಸುವವರೆಗೆ ಶಾಲೆಗಳಿಗೆ ಸಮಸ್ಯೆ ಆಗದಂತೆ ಕ್ರಮ*ಇವರಪ್ಪಂದಾ ಶಾಲೆಗಳು ಬಂದ್ ಮಾಡಿಸೋಕೆ: ಮಾಧುಸ್ವಾಮಿ ಆಕ್ರೋಶ
ವಿಧಾನ ಪರಿಷತ್(ಡಿ. 15): ರಾಜ್ಯದ ಅನುದಾನ ರಹಿತ (Unaided) ಮತ್ತು ಅನುದಾನ ಸಹಿತ (Aided Schools) ಶಾಲೆಗಳ ಮಾನ್ಯತೆ ನವೀಕರಣ ಮಾಡಲು ಶಿಕ್ಷಣ ಇಲಾಖೆ ರೂಪಿಸಿರುವ ನಿಯಮಾವಳಿ ಸರಳೀಕರಣಕ್ಕೆ ಸಂಬಂಧಿಸಿದ ಸಂಕನೂರು ಸಮಿತಿ ನೀಡಿರುವ ವರದಿ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚರ್ಚಿಸಿ ಈ ಅಧಿವೇಶನ ಮುಗಿಯುವುದರೊಳಗೆ ಹೊಸ ಸುತ್ತೋಲೆ ಹೊರಡಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B C Nagesh) ಭರವಸೆ ನೀಡಿದ್ದಾರೆ.
ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ,ಎಸ್. ಬೋಜೇಗೌಡ, ಮರಿತಿಬ್ಬೇಗೌಡ ಮತ್ತು ಪುಟ್ಟಣ್ಣ ಅವರು ಪ್ರಸ್ತಾಪಿಸಿದ ಈ ವಿಷಯದ ಬಗ್ಗೆ ಉತ್ತರಿಸಿದ ಸಚಿವರು, ಹೊಸ ಸುತ್ತೋಲೆ ಹೊರಡಿಸುವವರೆಗೂ ಅನುದಾನ ರಹಿತ ಹಾಗೂ ಅನುದಾನ ಸಹಿತ ಶಾಲೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ತಡೆ ಹಿಡಿದಿರುವ ಶಿಕ್ಷಕರ ವೇತನವನ್ನು ಶೀಘ್ರದಲ್ಲೇ ಕೊಡಿಸಲಾಗುವುದು. ಮಾನ್ಯತೆ ನವೀಕರಣ ಆಗದಿದ್ದರೂ ಮಕ್ಕಳ ಪರೀಕ್ಷೆಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಇದಕ್ಕೂ ಮುನ್ನ ಈ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಸುತ್ತೋಲೆಯಿಂದ ಅನುದಾನ ರಹಿತ ಹಾಗೂ ಅನುದಾನ ಸಹಿತ ಶಾಲೆಗಳ ಶೋಷಣೆ ಆರಂಭವಾಗಿದೆ. ಶಾಲಾ ಕಟ್ಟಡಗಳಲ್ಲಿ ಅಗ್ನಿಸುರಕ್ಷತೆಗೆ ಸಂಬಂಧಿಸಿದಂತೆ ಸಂಕನೂರು ನೇತೃತ್ವದ ಸಮಿತಿ ಸರ್ಕಾರಕ್ಕೆ ಮಾಡಿರುವ 9 ಶಿಫಾರಸು ಈವರೆಗೂ ಅನುಷ್ಠಾನವಾಗಿಲ್ಲ. ಕೂಡಲೇ ಸರ್ಕಾರ ಈ ಶೋಷಣೆ ನಿವಾರಿಸಬೇಕು ಎಂದು ಆಗ್ರಹಿಸಿದರು.
ಮರಿತಿಬ್ಬೇಗೌಡ ಭಾವೋದ್ರೇಕ
ಜೆಡಿಎಸ್‌ನ ಮರಿತಿಬ್ಬೇಗೌಡ ಮಾತನಾಡಿ, ಸರ್ಕಾರಿ ಶಾಲೆಗೆ ಅನ್ವಯವಾಗದ ಈ ನಿಯಮಗಳು ಖಾಸಗಿ ಶಾಲೆಗಳಿಗೆ ಏಕೆ? ಸುಪ್ರೀಂ ಕೋರ್ಟ್ ಆದೇಶದ ಹೆಸರಿನಲ್ಲಿ ಸರ್ಕಾರ ಖಾಸಗಿ ಶಾಲೆಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಏರಿದ ದನಿಯಲ್ಲಿ ಹೇಳುತ್ತಾ, ಸರ್ಕಾರ ಕೂಡಲೇ ಸುತ್ತೋಲೆ ಹಿಂಪಡೆಯದಿದ್ದರೆ ರಾಜ್ಯದ ಅನುದಾನ, ಅನುದಾನ ರಹಿತ ಹಾಗೂ ಸರ್ಕಾರಿ ಶಾಲೆಗಳನ್ನು ಬಂದ್ ಮಾಡಿ ಆಂದೋಲನ ರೂಪಿಸುವುದಾಗಿ ಸರ್ಕಾರಕ್ಕೆ ಬೆದರಿಕೆ ಹಾಕಿದರು.
ಇವರಪ್ಪಂದಾ ಶಾಲೆ?- ಮಾಧುಸ್ವಾಮಿ ಆಕ್ರೋಶ
ಮರಿತಿಬ್ಬೇಗೌಡ ಅವರ ಮಾತಿನಿಂದ ಕೆಂಡಾಮಂಡಳರಾದ ಸಚಿವ ಜೆ.ಸಿ. ಮಾಧುಸ್ವಾಮಿ, ಇವರಪ್ಪಂದಾ ಶಾಲೆಗಳು ಬಂದ್ ಮಾಡಿಸೋಕೆ ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ‘ಸದನದಲ್ಲಿ ಏನು ಬೇಕಾದರೂ ಮಾಡತನಾಡಬಹುದಾ? ನೀನು ಶಾಲೆ ಬಂದ್ ಮಾಡಿಸುವವರೆಗೆ ನಾವು ಕಡ್ಲೆಪುರಿ ತಿನ್ನುತ್ತೇವಾ? ತಾಕತ್ತಿದ್ದರೆ ಶಾಲೆ ಬಂದ್ ಮಾಡಿಸು. ಸರ್ಕಾರಕ್ಕೆ ಹೆದರಿಸೋದು ಬೇಡ. ನಿಮಗೆ ಹೆದರಿ ಸರ್ಕಾರ ನಡೆಸಬೇಕಾ’ ಎಂದು ಕಿಡಿಕಾರಿದರು.
ಈ ವೇಳೆ ಬಿಜೆಪಿ ಸದಸ್ಯರು ಎದ್ದು ನಿಂತು ಸಚಿವ ಮಾಧುಸ್ವಾಮಿ ಮಾತಿಗೆ ದನಿಗೂಡಿಸಿದರು. ‘ಧಮಕಿ ಹಾಕಿದರೆ ಇಲ್ಲಿ ಯಾರು ಹೆದರುವುದಿಲ್ಲ’ ಎಂದು ಮರಿತಿಬ್ಬೇಗೌಡರ ವಿರುದ್ಧ ಮುಗಿಬಿದ್ದರು. ಈ ವೇಳೆ ಸದನದಲ್ಲಿ ಗದ್ದಲ ಏರ್ಪಟ್ಟಿತು. ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿಅವರು ಎದ್ದು ನಿಂತು ಸದನವನ್ನು ನಿಯಂತ್ರಣಕ್ಕೆ ತಂದರು.
ಬಿಜೆಪಿ ಸದಸ್ಯ ಪುಟ್ಟಣ್ಣ ಮಾತನಾಡಿ, ಪಿಯು ಬೋರ್ಡ್ ಆರ್‌ಟಿಒ ಕಚೇರಿಯಾಗಿದೆ. ಈ ಸಂಬಂಧ ಸದನ ಸಮಿತಿ ರಚಿಸಬೇಕು. ಅಲ್ಲಿಯವರೆಗೂ ಖಾಸಗಿ ಶಾಲೆಗಳಿಗೆ ಯಾವುದೇ ತೊಂದರೆ ನೀಡಬಾರದು ಎಂದರು. ಇದಕ್ಕೆ ಪ್ರತಿ ಪಕ್ಷ ನಾಯಕ ಎಸ್.ಆರ್.ಪಾಟೀಲ್, ಸದಸ್ಯರಾದ ಶಶಿಲ್ ನಮೋಶಿ, ತೇಜಸ್ವಿನಿಗೌಡ, ಅರುಣ್ ಶಹಾಪುರ್ ದನಿಗೂಡಿಸಿದರು.
ಸತ್ತುಹೋದ್ರೆ ಏನುಕತೆ?
ಚರ್ಚೆ ವೇಳೆ ಮರಿತಿಬ್ಬೇಗೌಡ ಭಾವೋದ್ರೇಕದ ಮಾತುಗಳಿಂದ ಕೊಂಚ ಆತಂಕಕ್ಕೆ ಒಳಗಾದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ‘ಮರಿತಿಬ್ಬೇಗೌಡರೇ ನಿಮ್ಮ ಭಾವನೆಗಳು ನಮಗೆ ಅರ್ಥವಾಗುತ್ತದೆ. ಇಷ್ಟೊಂದು ಉದ್ವೇಗ ಒಳ್ಳೆಯದಲ್ಲ. ನಿಮ್ಮ ಮೇಲಿನ ಕಾಳಜಿಯಿಂದ ಈ ಮಾತು ಹೇಳುತ್ತೇನೆ. ಹೆಚ್ಚು ಎಮೋಷನಲ್ ಆಗಬೇಡಿ. ಉಸಿರುಗಟ್ಟೆಸತ್ತರೇ ಏನು ಮಾಡೋದು’ ಎಂದು ಮರಿತಿಬ್ಬೇಗೌಡರನ್ನು ಸಮಾಧಾನಪಡಿಸಿದರು.
ಅಫಿಡವಿಟ್ ಪರಿಶೀಲಿಸಿ ಕ್ರಮ
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಶಾಲಾ ಮಾನ್ಯತೆ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲಾಗಿದೆ. ಅಫಿಡವಿಡ್‌ನಲ್ಲಿ ಏನಿದೆ ಎಂದು ನೋಡದೇ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅಫಿಡೇವಿಟ್ ಪರಿಶೀಲಿಸಿ ಉತ್ತರ ನೀಡುತ್ತೇವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಇದನ್ನೂ ಓದಿ:
1) Siddaramaiah Vs Somanna: 'ಕಾಂಗ್ರೆಸ್ ಮಾಡಿದ ಪಾಪದ ಕೊಳೆಯನ್ನು ತೊಳೆಯುತ್ತಿದ್ದೇವೆ'
2) MLC Election Result ಮೊದಲ ಬಾರಿಗೆ ಸ್ಪರ್ದಿಸಿ ಗೆದ್ದ 6 ಮಂದಿ, 4ನೇ ಗೆಲುವು ಕಂಡ ಕೋಟ!
