ತಿರುಪತಿ ಮಾದರಿಯಲ್ಲಿ ಸವದತ್ತಿ ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ
ತಿರುಪತಿ ಮಾದರಿ ಅಧ್ಯಯನ ಮಾಡಿ. ಅದೇ ಮಾದರಿಯಲ್ಲಿ ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಳಗಾವಿ (ಅ.14): ತಿರುಪತಿ ಮಾದರಿ ಅಧ್ಯಯನ ಮಾಡಿ. ಅದೇ ಮಾದರಿಯಲ್ಲಿ ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸವದತ್ತಿಯಲ್ಲಿ ಭಾನುವಾರ ರೇಣುಕಾ ಯಲ್ಲಮ್ಮ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆಯ ಅಧ್ಯಕತೆ ವಹಿಸಿ ಅವರು ಮಾತನಾಡಿದರು. ₹45 ಕೋಟಿ ಬ್ಯಾಂಕಿನಲ್ಲಿದ್ದು, ವಾರ್ಷಿಕ ಅಂದಾಜು ₹5 ಕೋಟಿ ಆದಾಯ ಬರುತ್ತಿದೆ.
ಉತ್ತಮ ಸೌಲಭ್ಯ ಒದಗಿಸುವ ಮೂಲಕ ಭಕ್ತರ ಭೇಟಿಯ ಪ್ರಮಾಣ ಹೆಚ್ಚಿಸಬೇಕು. ಸುಕ್ಷೇತ್ರಗಳಿಗೆ ಭೇಟಿ ನೀಡುವವರು ಬಡವರೇ ಆಗಿದ್ದರೂ ಸಂಪ್ರದಾಯ ಮತ್ತು ಖರ್ಚು ವೆಚ್ಚಕ್ಕೆ ಯೋಚನೆ ಮಾಡುವುದಿಲ್ಲ. ಆದ್ದರಿಂದ ಉತ್ತಮ ಸೌಲಭ್ಯ ಒದಗಿಸಬೇಕು. ಹುಣ್ಣಿಮೆ ಸಂದರ್ಭದಲ್ಲಿ ಚಕ್ಕಡಿಗಳಲ್ಲಿ ಜನರು ಬರುತ್ತಾರೆ. ಅಂತಹ ವೇಳೆ ಜಾನುವಾರುಗಳಿಗೆ ಮೇವು ಬ್ಯಾಂಕ್ ಸ್ಥಾಪಿಸಬೇಕು ಎಂದು ಸೂಚಿಸಿದರು.
ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಪ್ರತಿವರ್ಷ ಕೋಟ್ಯಂತರ ಭಕ್ತರು ಭೇಟಿ ನೀಡುವುದರಿಂದ ಉತ್ತಮ ವಸತಿ ಹಾಗೂ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಇತರ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಬೇಕು ಎಂದು ಸೂಚನೆ ನೀಡಿದರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಉತ್ತಮ ವಸತಿ ಹಾಗೂ ದರ್ಶನಕ್ಕೆ ಅನುಕೂಲ ಕಲ್ಪಿಸಬೇಕು.
ಸಿದ್ದರಾಮಯ್ಯ ಸರ್ಕಾರವೂ ಮಹಿಷನ ರೀತಿ ಮರ್ಧನ ಆಗಲಿದೆ: ಎಂ.ಪಿ.ರೇಣುಕಾಚಾರ್ಯ
ದೇವಸ್ಥಾನ ಹಾಗೂ ಸುತ್ತಮುಲಿನ ಸರ್ಕಾರದ ಜಮೀನು ಒತ್ತುವರಿ ಆಗದಂತೆ ತಡೆಯಲು ಕಾಂಪೌಂಡ್ ಹಾಕಬೇಕು. ಸದ್ಯಕ್ಕೆ ವ್ಯಾಪಾರ-ವಹಿವಾಟು ಮಾಡುವ ಜನರಿಗೆ ಪ್ರತ್ಯೇಕ ಜಾಗ ಗುರುತಿಸಿ, ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಸೂಚನೆ ನೀಡಿದರು. ಪ್ರವಾಸೋದ್ಯಮ ಇಲಾಖೆ ಮತ್ತು ದೇವಸ್ಥಾನ ಮಂಡಳಿ ಸೇರಿಕೊಂಡು ಭಕ್ತರಿಗೆ ವಸತಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಉತ್ತಮ ಸೌಲಭ್ಯ ಒದಗಿಸಿದರೆ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ. ಸುಲಭ ದರ್ಶನಕ್ಕೆ ಅವಕಾಶ ಕಲ್ಪಿಸುವುದು ಪ್ರಥಮ ಆದ್ಯತೆ ಆಗಿರಬೇಕು ಎಂದು ತಿಳಿಸಿದರು.