ವಂಚಕ ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಪತ್ನಿ ಹಾಗೂ ನಾದಿನಿ ವಿರುದ್ಧ ಸುಳ್ಳು ದರೋಡೆ ಪ್ರಕರಣದ ತನಿಖಾಧಿಕಾರಿ, ಸಿಸಿಬಿಯ ಎಸಿಪಿ ಎಚ್‌.ಎನ್‌.ಧರ್ಮೇಂದ್ರ ಅವರನ್ನು ರಾಜ್ಯ ಪೊಲೀಸ್‌ ಇಲಾಖೆ ಸೋಮವಾರ ದಿಢೀರ್‌ ವರ್ಗಾವಣೆಗೊಳಿಸಿದೆ.

ಬೆಂಗಳೂರು (ಜ.31) : ವಂಚಕ ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಪತ್ನಿ ಹಾಗೂ ನಾದಿನಿ ವಿರುದ್ಧ ಸುಳ್ಳು ದರೋಡೆ ಪ್ರಕರಣದ ತನಿಖಾಧಿಕಾರಿ, ಸಿಸಿಬಿಯ ಎಸಿಪಿ ಎಚ್‌.ಎನ್‌.ಧರ್ಮೇಂದ್ರ(ACP H.N. Dharmendra) ಅವರನ್ನು ರಾಜ್ಯ ಪೊಲೀಸ್‌ ಇಲಾಖೆ ಸೋಮವಾರ ದಿಢೀರ್‌ ವರ್ಗಾವಣೆಗೊಳಿಸಿದೆ.

ಎಸಿಪಿ ವರ್ಗಾವಣೆ ಬೆನ್ನಲ್ಲೇ ಪ್ರಕರಣ ಸಂಬಂಧ ಸೋಮವಾರ ನಡೆಯಬೇಕಿದ್ದ ಇನ್‌ಸ್ಪೆಕ್ಟರ್‌ ಪ್ರವೀಣ್‌ ವಿಚಾರಣೆ ಸಹ ರದ್ದಾಗಿದ್ದು, ಮಹತ್ವದ ಘಟ್ಟತಲುಪಿದ್ದ ತನಿಖೆಗೆ ಈಗ ತ್ರಿಶಂಕು ಪರಿಸ್ಥಿತಿ ಎದುರಾಗಿದೆ. ಈ ನಡುವೆ ತನ್ನ ಪತ್ನಿ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ಸಿಐಡಿ ವಶದಲ್ಲಿದ್ದ ಸ್ಯಾಂಟ್ರೋ ರವಿ ಮತ್ತೆ ಮೈಸೂರು ಕೇಂದ್ರ ಕಾರಾಗೃಹ ಸೇರಿದ್ದಾನೆ.

ಸ್ಯಾಂಟ್ರೋ ರವಿ ಪ್ರಕರಣ: ಹಿರಿಯ ಅಧಿಕಾರಿಗಳ ಹೆಸರು ಬಹಿರಂಗ

ಸುಳ್ಳು ದರೋಡೆ ಪ್ರಕರಣ ಸಂಬಂಧ ಸ್ಯಾಂಟ್ರೋ ರವಿ ಪತ್ನಿ ಹಾಗೂ ನಾದಿನಿ ಹೇಳಿಕೆ ದಾಖಲಿಸಿಕೊಂಡಿದ್ದ ತನಿಖಾಧಿಕಾರಿ ಧರ್ಮೇಂದ್ರ ಅವರು, ಮುಂದಿನ ಹಂತದ ತನಿಖೆ ಸಲುವಾಗಿ ಇನ್‌ಸ್ಪೆಕ್ಟರ್‌ ಪ್ರವೀಣ್‌ಗೆ ವಿಚಾರಣೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರು. ಅಲ್ಲದೆ ತನ್ನ ಪತ್ನಿ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ಸಿಐಡಿ ತನಿಖೆ ನಂತರ ಆತನನ್ನು ಸುಳ್ಳು ದರೋಡೆ ಪ್ರಕರಣದಲ್ಲಿ ವಿಚಾರಣೆ ನಡೆಸಲು ತನಿಖಾಧಿಕಾರಿ ಸಿದ್ದತೆ ನಡೆಸಿದ್ದರು. ಆದರೀಗ ತನಿಖಾಧಿಕಾರಿಯನ್ನು ಪೊಲೀಸ್‌ ಇಲಾಖೆ ಬದಲಾಯಿಸಿದೆ.

ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಮೂರು ವರ್ಷ ಅವಧಿ ಮುಗಿಸಿದ ಕಾರಣ ನೀಡಿ ಸಿಸಿಬಿಯ ಎಸಿಪಿ ಧರ್ಮೇಂದ್ರ ಅವರನ್ನು ಪಶ್ಚಿಮ ವಲಯ ಐಜಿಪಿ ಕಚೇರಿ ಮಂಗಳೂರಿಗೆ ಇಲಾಖೆ ವರ್ಗಾಯಿಸಿದೆ. ಸುಳ್ಳು ದರೋಡೆ ಪ್ರಕರಣದಲ್ಲಿ ಹೊಸ ತನಿಖಾಧಿಕಾರಿ ನೇಮಕವಾಗಲಿದ್ದು, ಮತ್ತೆ ಅವರಿಗೆ ಪ್ರಕರಣದ ಪೂರ್ಣ ಅರ್ಥವಾಗಿ ತನಿಖೆ ಆರಂಭಿಸುವ ಹೊತ್ತಿಗೆ ಸಮಯ ಕಳೆಯುತ್ತದೆ. ಅಷ್ಟರಲ್ಲಿ ಸಾರ್ವಜನಿಕ ವಲಯದಲ್ಲಿ ಪ್ರಕರಣದ ಕಾವು ಕೂಡಾ ತಣ್ಣಾಗಲಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.

ಮೂರು ತಿಂಗಳ ಹಿಂದೆ ದರೋಡೆ ಪ್ರಕರಣದಲ್ಲಿ ಸ್ಯಾಂಟ್ರೋ ರವಿ ಪತ್ನಿ ಹಾಗೂ ಆತನ ನಾದಿನಿಯನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದರು. ತನ್ನ ಮೇಲೆ ಸುಳ್ಳು ದರೋಡೆ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಯಾಂಟ್ರೋ ರವಿ ಪತ್ನಿ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್‌ ಆಯುಕ್ತರು, ಆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿದ್ದರು. ಇದೇ ಪ್ರಕರಣದಲ್ಲಿ ಹಿಂದಿನ ಕಾಟನ್‌ಪೇಟೆ ಠಾಣೆ ಇನ್‌ಸ್ಪೆಕ್ಟರ್‌ ಪ್ರವೀಣ್‌ ಅಮಾನತು ಸಹ ಆಗಿದೆ.

ಸ್ಯಾಂಟ್ರೋ ರವಿಯಿಂದ ನನಗೆ ಮಾರಕ ಸೋಂಕು: ಪತ್ನಿಯಿಂದ ಹೇಳಿಕೆ

ಮೈಸೂರು ಜೈಲಿಗೆ ಸ್ಯಾಂಟ್ರೋ

ತನ್ನ ಪತ್ನಿ ಮೇಲೆ ದೌರ್ಜನ್ಯ ಪ್ರಕರಣದ ಸಂಬಂಧ ವಿಚಾರಣೆ ಮುಗಿದ ಬಳಿಕ ಸ್ಯಾಂಟ್ರೋ ರವಿಯನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ಸಿಐಡಿ ಪೊಲೀಸರು ಕಳುಹಿಸಿದ್ದಾರೆ. ಸಿಐಡಿ ವಶದಲ್ಲಿದ್ದಾಗ ಆರೋಗ್ಯ ಸಮಸ್ಯೆ ಉಂಟಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಯಾಂಟ್ರೋ ರವಿ ದಾಖಲಾಗಿದ್ದ. ಆರೋಗ್ಯದಲ್ಲಿ ಸುಧಾರಿಸಿಕೊಂಡ ಬಳಿಕ ಸಿಐಡಿ ಅಧಿಕಾರಿಗಳು, ಶನಿವಾರ ಸ್ಯಾಂಟ್ರೋ ರವಿನನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.