ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಸಂಸ್ಕೃತದ ಜ್ಞಾನವನ್ನು ತಂತ್ರಜ್ಞಾನದೊಂದಿಗೆ ಮಿಳಿತಗೊಳಿಸಲು ಕರೆ ನೀಡಿದರು. ಸಾಕ್ಷರತೆ ಹೆಚ್ಚಾದಂತೆ ನೈತಿಕ ಮೌಲ್ಯಗಳು ಕುಸಿಯುತ್ತಿವೆ ಎಂದು ಡಾ.ಸಿ.ಎನ್.ಮಂಜುನಾಥ್ ಕಳವಳ ವ್ಯಕ್ತಪಡಿಸಿದರು. 

ಬೆಂಗಳೂರು (ಏ.8): ಸಂಸ್ಕೃತ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಅದರಲ್ಲಿರುವ ಜ್ಞಾನಭಂಡಾರವನ್ನು ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಮಿಳಿತಗೊಳಿಸುವ ಕೆಲಸಗಳು ಆಗಬೇಕಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಯ 12 ಮತ್ತು 13ನೇ ದೀಕ್ಷಾಂತ ಘಟಿಕೋತ್ಸವದಲ್ಲಿ ಮಾತನಾಡಿ, ಸಂಸ್ಕೃತ ಭಾಷೆ ಭಾರತದ ಆತ್ಮವಿದ್ದಂತೆ. ಹಲವು ಭಾಷೆಗಳ ಜನನಿ. ಜಗತ್ತಿನ ಹಲವು ಸಮಸ್ಯೆಗಳಿಗೆ ಸಂಸ್ಕೃತದಲ್ಲಿರುವ ಜ್ಞಾನದ ಮೂಲಕ ಪರಿಹಾರ ದೊರೆಯಲಿದೆ ಎಂದರು.

ಘಟಿಕೋತ್ಸವ ಭಾಷಣ ಮಾಡಿದ ಖ್ಯಾತ ಹೃದ್ರೋಗ ತಜ್ಞ, ಸಂಸದ ಡಾ.ಸಿ.ಎನ್.ಮಂಜುನಾಥ್, ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾದಂತೆ ನೈತಿಕ ಮೌಲ್ಯ ಹಾಗೂ ಸಿದ್ಧಾಂತ ಕುಸಿಯುತ್ತಿವೆ. ಸ್ವಾತಂತ್ರ್ಯ ಬಂದಾಗ ದೇಶದ ಸಾಕ್ಷರತೆ ಪ್ರಮಾಣ ಶೇ.30ರಷ್ಟಿತ್ತು. ಆದರೆ ನೈತಿಕತೆ ಶೇ.100 ರಷ್ಟಿತ್ತು. ಆದರೀಗ ಸಾಕ್ಷರತೆ ಶೇ.85ರಷ್ಟಿದ್ದರೆ ನೈತಿಕ ಮೌಲ್ಯ ಶೇ.30ಕ್ಕೆ ಕುಸಿದಿದೆ ಎಂದರು.

ವಿವಿಯ ಕುಲಪತಿ ಪ್ರೊ.ಅಹಲ್ಯಾ ಎಸ್.ಮಾತನಾಡಿದರು. ಘಟಿಕೋತ್ಸವದಲ್ಲಿ ಭಿಕ್ಕು ಆನಂದ ಥೇರೊ, ಡಾ.ಪುಷ್ಪಾ ದೀಕ್ಷಿತ್, ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ, ಪ್ರೊ.ತಿಂಗಪ್ಪ ಎಚ್. ಎಂ., ಪ್ರೊ. ಸುಕಾಂತ್ ಕುಮಾರ್ ಸೇನಾಪತಿ ಅವರಿಗೆ ಗೌರವ ಡಿ.ಲಿಟ್ ಪದವಿ ಪ್ರದಾನ ಮಾಡಲಾಯಿತು. ಕುಲಸಚಿವ ಪ್ರೊ. ವಿ. ಗಿರೀಶ್ ಚಂದ್ರ ಪಾಲ್ಗೊಂಡಿದ್ದರು.

917 ವಿದ್ಯಾರ್ಥಿಗಳಿಗೆ ಪದವಿ: 26 ಮಂದಿಗೆ ಚಿನ್ನ

ಘಟಿಕೋತ್ಸವದಲ್ಲಿ ಒಟ್ಟು 917 ವಿದ್ಯಾರ್ಥಿಗಳಿಗೆ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಲಾಯಿತು. 2023-24 ರ ಸಾಲಿನಲ್ಲಿ ರ್‍ಯಾಂಕ್‌ ಪಡೆದ ಒಟ್ಟು 21 ವಿದ್ಯಾರ್ಥಿಗಳು ನಗದು ಬಹುಮಾನ, 26 ಮಂದಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. 2024-25ರ ಸಾಲಿನಲ್ಲಿ 21 ಮಂದಿ ನಗದು ಬಹುಮಾನ, 27 ವಿದ್ಯಾರ್ಥಿಗಳು ಸ್ವರ್ಣ ಪದಕಕ್ಕೆ ಭಾಜನರಾದರು. 36 ಮಂದಿ ಪಿಎಚ್.ಡಿ-ವಿದ್ಯಾವಾರಿಧಿ’ ಪದವಿಯನ್ನು ಸ್ವೀಕರಿಸಿದರು.