ಕಾವೇರಿ ಹೋರಾಟಕ್ಕೆ ಟ್ವೀಟ್‌ನಲ್ಲೇ ಬೆಂಬಲಿಸಿದ ಕಿಚ್ಚ ಸುದೀಪ್: ಬೀದಿಗಿಳಿದು ಹೋರಾಡುವಂತೆ ನೆಟ್ಟಿಗರ ತಾಕೀತು!
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಕನ್ನಡದ ನೆಲ, ಜಲ ಭಾಷೆ ಯ ಎಲ್ಲ ಹೋರಾಟಗಳಲ್ಲಿ ನಾನು ಸದಾ ನಿಮ್ಮೊಂದಿಗೆ ಇದ್ದೇನೆ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.
ಬೆಂಗಳೂರು (ಸೆ.26): ಕನ್ನಡ ನಾಡಿನ ಜೀವನದಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಆಗ್ರಹಿಸಿ ರಾಜ್ಯಾದ್ಯಂತ ಕಳೆದ 15 ದಿನಗಳಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಇಂದು ಬೆಂಗಳೂರು ಬಂದ್ ಮಾಡಲಾಗಿದ್ದು, ವಿವಿಧ ಸಂಘಟನೆಗಳಿಂದ ತೀವ್ರ ಹೋರಾಟ ಮಾಡಲಾಗುತ್ತಿದೆ. ಇತ್ತ ಮನೆಯಲ್ಲಿ ಕುಳಿತುಕೊಂಡೇ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡಿಕೊಂಡ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಕನ್ನಡದ ನೆಲ, ಜಲ ಭಾಷೆ ಯ ಎಲ್ಲ ಹೋರಾಟಗಳಲ್ಲಿ ನಾನು ಸದಾ ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಬೀದಿಗಿಳಿದು ಹೋರಾಟ ಮಾಡುವಂತೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದ ಎಕ್ಸ್ (ಹಳೆಯ ಟ್ವಿಟರ್), ಫೇಸ್‌ಬುಕ್‌ಗಳಲ್ಲಿ ಪೋಸ್ಟ್ ಹಾಕಿಕೊಂಡಿರುವ ಸುದೀಪ್ ಹೀಗೆ ಬರೆದುಕೊಂಡಿದ್ದಾರೆ. ಸಮಸ್ತ ಕನ್ನಡ ಜನತೆಗೆ ನಮಸ್ಕಾರ; ಕಾವೇರಿ ಸಮಸ್ಯೆ ಈ ವರ್ಷವೂ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು ರೈತರು ಹೋರಾಟ ನೆಡೆಸುತ್ತಿದ್ದಾರೆ. ಕನ್ನಡದ ನೆಲ, ಜಲ ಭಾಷೆ ಯ ಎಲ್ಲ ಹೋರಾಟಗಳಲ್ಲಿ ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಮುಂಗಾರುಮಳೆಯ ಅಭಾವದಿಂದ ರೈತರಿಗೆ ಜನತೆಯ ಕೃಷಿ ಮಾತ್ರವಲ್ಲದೆ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ.
ಬೆಂಗಳೂರು ಬಂದ್ ಭದ್ರತೆಗೆ ಬಂದ ಪೊಲೀಸರಿಗೆ ಇಲಿಯ ಊಟ ಕೊಟ್ಟ ಸರ್ಕಾರ
ಮುಂಗಾರಿನ ಹೊರತಾಗಿ ನಮಗೆ ಕುಡಿಯುವ ನೀರಿಗಾಗಿ ಬೇರೆ ಮೂಲಗಳಿಲ್ಲ. ನಾವು ಕಾವೇರಿಯನ್ನೇ ನಂಬಿದ್ದೇವೆ. ನಾನು ತಿಳಿದುಕೊಂಡಂತೆ ಬರ ಅಧ್ಯಯನ ಸಮಿತಿ- ಕಾವೇರಿ ಸಮಿತಿಯ ತಂತ್ರಜ್ಞ ರು ಕೂಡಲೇ ಟ್ರಬಿನಲ್ ನ್ಯಾಯಾಲಯಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತುತ ಕರ್ನಾಟಕ ದ ಬರ ಪರಿಸ್ಥಿತಿಯನ್ನು ತುರ್ತಾಗಿ ಮನವರಿಕೆ ಮಾಡಿಕೊಡಬೇಕಿದೆ. ಹಿಂದಿನ ಕೆಲವು ಮುಖ್ಯಮಂತ್ರಿಗಳಂತೆಯೇ ನಮ್ಮ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ತಮಿಳುನಾಡಿನ ಮುಖ್ಯಮಂತ್ರಿಗಳೊಂದಿಗೆ ಸೌಹಾರ್ದ ಮಾತುಕತೆಯ ಮೂಲಕ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಬಹುದು ಎಂದು ಹಿರಿಯರು ಹೇಳಿದ್ದನ್ನು ಕೇಳಿ ತಿಳಿದುಕೊಂಡಿದ್ದೇನೆ.
ಸದ್ಯದ ಬರ -ಜಲ ಹಾಹಾಕಾರಕ್ಕೆ ಪರಿಹಾರ ಒದಗಿಸಲು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ದ ಪರಿಸ್ಥಿಯನ್ನು ಅರ್ಥ ಮಾಡಿಸಲು ಎಲ್ಲ ಪಕ್ಷದ ನಾಯಕರು ಒಗ್ಗಟ್ಟಾಗಿ ಮುಂದಾಗಲು ಮನವಿ ಮಾಡುತ್ತೇನೆ. ತಮಿಳುನಾಡು ರೈತರಿಗೂ ಕುರವೈ ಬೆಳೆಗೆ ನೀರು ಸಿಗಲಿ, ಆದರೆ ನಮ್ಮ ಕುಡಿಯುವ ನೀರಿನ ಅಭಾವ ಮೊದಲು ಬಗೆಹರಿಯಲಿ. ಆದಷ್ಟು ಬೇಗ ಈ ಸಮಸ್ಯೆ ಬಗೆ ಹರಿದು ಹೋರಾಟಕ್ಕೆ ಜಯವಾಗಲಿ.
ದರ್ಶನ್ ಬೆನ್ನಲ್ಲಿಯೇ ಕಾವೇರಿ ಕದನಕ್ಕಿಳಿದ ಅಭಿನಯ ಚಕ್ರವರ್ತಿ ಸುದೀಪ್
ಇದರ ಜೊತೆಗೆ ಉತ್ತರ ಕರ್ನಾಟಕದ ಕೃಷ್ಣಾ ನದಿ -ಮಹದಾಯಿ ನದಿ ಮತ್ತು ಕಳಸಾ ಬಂಡೂರಿ ವಿವಾದಗಳು ಬಗೆ ಹರಿದು ಜನರ ಸಂಕಷ್ಟ ತೀರಲೆಂದು ಆಶಿಸುವೆ. ನಮ್ಮ ಜಲ ನಮ್ಮ ಹಕ್ಕು ಪ್ರೀತಿಯಿಂದ -ನಿಮ್ಮ ಕಿಚ್ಚ ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ. ಆದರೆ, ಇದಕ್ಕೆ ಪರ ವಿರೋಧಗಳೂ ವ್ಯಕ್ತವಾಗಿವೆ. ಬರೀ ಇಲ್ಲಿ ಹೇಳಿದರೆ ಸಾಕಾಗುವುದಿಲ್ಲ, ಅದಕ್ಕೆ ಬೇಕಾದ support ಮಾಡ್ಬೇಕು. ನೀ ಎಲ್ಲೋ ಕುಂತು ಟ್ವೀಟ್ ಮಾಡಿ ನಾನು ಇದ್ದೇನೆ ಅನ್ನೋದಲ್ಲ ಅಲ್ಲಿ ಹೋಗಿ ಮೊದಲು ಎಂದು ಕಮೆಂಟ್ ಮಾಡಿದ್ದಾರೆ.