ಬೆಂಗಳೂರು ಬಂದ್ ಭದ್ರತೆಗೆ ಬಂದ ಪೊಲೀಸರಿಗೆ ಇಲಿಯ ಊಟ ಕೊಟ್ಟ ಸರ್ಕಾರ
ಬೆಂಗಳೂರು ಬಂದ್ ಪ್ರತಿಭಟನೆಯ ಭದ್ರತೆಗೆ ನಿಯೋಜನೆಗೊಂಡ ಪೊಲೀಸರಿಗೆ ಸರಬರಾಜು ಮಾಡಿದ ಊಟದಲ್ಲಿ ಸತ್ತ ಇಲಿಮರಿ ಪತ್ತೆಯಾಗಿದೆ.
ಬೆಂಗಳೂರು (ಸೆ.26): ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಸರ್ಕಾರದ ನಡೆಯನ್ನು ವಿರೋಧಿಸಿ ನಡೆಸುತ್ತಿರುವ ಬೆಂಗಳೂರು ಬಂದ್ ಪ್ರತಿಭಟನೆಯ ಭದ್ರತೆಗೆ ನಿಯೋಜನೆ ಮಾಡಿದ ಪೊಲೀಸರಿಗೆ ಹೋಟೆಲ್‌ನಿಂದ ಸರಬರಾಜು ಮಾಡಿದ ಊಟದಲ್ಲಿ ಸತ್ತ ಇಲಿ ಪತತೆಯಾಗಿದೆ.
ಕನ್ನಡ ಪರ ಸಂಘಟನೆಗಳು ಹಾಗೂ ರೈತಪರ ಸಂಘಟನೆಗಳಿಂದ ಬೆಂಗಳೂರು ಬಂದ್ ಮಾಡಲಾಗುತ್ತಿದೆ. ಇದಕ್ಕೆ ಸರ್ಕಾರದ ಅನುಮತಿ ಇಲ್ಲದಿದ್ದರೂ ಬಂದ್ ಮಾಡಲಾಗುತ್ತಿದ್ದು, ಬೆಂಗಳೂರು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ ಪೊಲೀಸರನ್ನೂ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಆದರೆ, ಭದ್ರತೆಗೆ ಬಂದ ಪೊಲೀಸರಿಗೆ ಇಲಿಯ ಊಟವನ್ನು ನೀಡಲಾಗಿದೆ. ಇನ್ನು ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಪೊಲೀಸ್ ಸಿಬ್ಬಂದಿ ಮೇಲೆ ಕಾಳಜಿ ಇಲ್ವಾ ಎಂದು ಕಿಡಿಕಾರಿದ್ದಾರೆ. ಕಾವೇರಿ ಬಂದ್‌ಗೆ ಭದ್ರತೆಗಾಗಿ ನಿಯೋಜಿಸಿದ್ದ ಪೊಲೀಸರ ಊಟದಲ್ಲಿ ಇಲಿ ಪತ್ತೆಯಾಗಿದ್ದರೂ ಅದನ್ನು ಯಾರ ಬಳಿಯೂ ಹೇಳಿಕೊಳ್ಳದಂತೆ ತಾಕೀತು ಮಾಡಲಾಗಿದೆ ಎಂಬ ಮಾತಿ ಕೇಳಿಬರುತ್ತಿದೆ.
ರಾಮನಗರದಲ್ಲಿ ಹೆಚ್ಚಿದ ಕಾವೇರಿ ಕಿಚ್ಚು: ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಶ್ರದ್ಧಾಂಜಲಿ ಕೋರಿ ಪ್ರತಿಭಟನೆ
ಆರ್‌ಎಂಸಿ ಯಾರ್ಡ್ ಪೊಲೀಸರ ಊಟದಲ್ಲಿ ಇಲಿ: ಪೊಲೀಸ್ ಇಲಾಖೆಯಿಂದ ಸರಬರಾಜು ಮಾಡಿದ ಊಟವನ್ನು ತೆರೆದಾಗ ಅದರಲ್ಲಿ ಇಲಿ ಕಂಡು ಪೊಲೀಸ್ ಸಿಬ್ಬಂದಿ ಹೈರಾಣಾಗಿದ್ದಾರೆ. ಊಟದಲ್ಲಿ ಇಲಿ ಸಿಕ್ಕಿರುವ ಪೋಟೋ ಏಷಿಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಮಂಗಳವಾರ ಬೆಳಗ್ಗೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರಿಗೆ ಸರಬರಾಜು ಮಾಡಿದ ಬೆಳಗ್ಗಿನ ತಿಂಡಿ ಪ್ಯಾಕೆಟ್ ತೆರೆಯುತ್ತಿದ್ದಂತೆ ಸತ್ತಿರುವ ಇಲಿ ಕಂಡುಬಂದಿದೆ.
ಪೊಲೀಸ್ ಕಮಿಷನರ್ ವಿರುದ್ಧ ಆಕ್ರೋಶ: ಇನ್ನು ಖಾಸಗಿ ಹೋಟೆಲ್ ನಿಂದ ಕಳಪೆ ಮಟ್ಟದ ಊಟ ಪೂರೈಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ಆಯುಕ್ತರೇ ನೋಡಿ ನಿಮ್ಮ ಸಿಬ್ಬಂದಿ ತಿನ್ನುವ ಊಟವನ್ನು ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಹೆಸರೇಳಲಿಚ್ಛಿಸದ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ, ನೀವು ಇದೇ ಊಟ ಕೊಟ್ರೆ ತಿಂತೀರಾ ಎಂದು ಆಕ್ರೋಶವನ್ನೂ ಹೊರ ಹಾಕಿದ್ದಾರೆ. ಇಂತಹ ಊಟ ತಿಂದು ಹೆಚ್ಚುಕಡಿಮೆಯಾದ್ರೆ ನಮ್ಮ ಕುಟುಂಬಕ್ಕೆ ಹಾಗೂ ಆರೋಗ್ಯಕ್ಕೆ ಯಾರು ಹೊಣೆ ಎಂದು ಕಿಡಿಕಾರಿದ್ದಾರೆ.