Asianet Suvarna News Asianet Suvarna News

ಮನೆಯಾಚೆಯ ಅಮ್ಮ ಅಂಗನವಾಡಿ ಟೀಚರ್‌: ಪೂಜಾ ಗಾಂಧಿ

ಅಂಗನವಾಡಿ ಕಾರ್ಯಕರ್ತೆಯರು ಬಾಣಂತಿಯರ ಸಹೋದರಿಯಾಗಿಯೂ, ಮಕ್ಕಳ ಪಾಲಕಳಾಗಿಯೂ, ದಾದಿಯಾಗಿಯೂ ಮತ್ತು ಶಿಕ್ಷಕಳಾಗಿಯೂ ಹಲವಾರು ಪಾತ್ರ ನಿಭಾಯಿಸುತ್ತಿದ್ದಾರೆ. ಸರ್ಕಾರ ತಕ್ಷಣ ಅವರ ಬೇಡಿಕೆ ಈಡೇರಿಸಲು ಒಪ್ಪಬೇಕು ಮತ್ತು ವಿರೋಧ ಪಕ್ಷಗಳು ಅದನ್ನು ಸಂತೋಷದಿಂದ ಸ್ವಾಗತಿಸಬೇಕು: ಚಿತ್ರನಟಿ ಪೂಜಾ ಗಾಂಧಿ. 

Sandalwood Actress Pooja Gandhi Talks over Anganwadi Workers grg
Author
First Published Jan 27, 2023, 11:57 AM IST

ಕಾಕತಾಳಿಯವಾಗಿ ಕಳೆದ ಕೆಲವು ದಿನಗಳಲ್ಲಿ ನಡೆದ ಎರಡು ಘಟನೆಗಳು ಮಹತ್ವದ್ದಾಗಿವೆ. ಮೊದಲನೆಯದು, ಭಾರತ 140 ಕೋಟಿ ಜನಸಂಖ್ಯೆಯನ್ನು ದಾಟಿ, ಪ್ರಪಂಚದ ಅತ್ಯಂತ ಜನನಿಬಿಡ ರಾಷ್ಟ್ರವಾಯಿತು. ಎರಡನೆಯದಾಗಿ, ರಾಜ್ಯದ ಅಂಗನವಾಡಿ ಕಾರ್ಯಕರ್ತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ನನ್ನ ಪ್ರಕಾರ, ಅಂಗನವಾಡಿ ಕಾರ್ಯಕರ್ತರಿಗೆ ಸಿಗುತ್ತಿರುವ ಸದ್ಯದ ವೇತನ, ಸೌಲಭ್ಯಗಳು ಮತ್ತು ಮೇಲಿಂದ ಮೇಲೆ ಅವರಿಗೆ ವಹಿಸುತ್ತಿರುವ ಹೊಸ ಜವಾಬ್ದಾರಿಗಳ ನಡುವೆ ದೊಡ್ಡ ಕಂದರವಿದೆ. ಅಂಗನವಾಡಿ ಕಾರ್ಯಕರ್ತೆಯರು ಬಾಣಂತಿಯರ ಸಹೋದರಿಯಾಗಿಯೂ, ಮಕ್ಕಳ ಪಾಲಕಳಾಗಿಯೂ, ದಾದಿಯಾಗಿಯೂ ಮತ್ತು ಶಿಕ್ಷಕಳಾಗಿಯೂ ಒಂದೇ ಸಮಯದಲ್ಲಿ ಹಲವಾರು ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ತಕ್ಷಣ ಅವರ ಬೇಡಿಕೆಗಳನ್ನು ಈಡೇರಿಸಲು ಒಪ್ಪಬೇಕು ಮತ್ತು ಎರಡೂ ವಿರೋಧ ಪಕ್ಷಗಳು ಅದನ್ನು ಸಂತೋಷದಿಂದ ಸ್ವಾಗತಿಸಬೇಕು. ಆದರೆ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಏರಿಕೆ ಮಾಡಿ, ಅವರ ಸದ್ಯದ ಬೇಡಿಕೆಗಳನ್ನು ಈಡೇರಿಸಿದರೆ ಅಷ್ಟೇ ಸಾಲದು. ರಾಜ್ಯದ ಅಂಗನವಾಡಿಗಳ ಈಗಿನ ಚಿತ್ರಣ ಬದಲಾಗಿ ಒಂದು ಆಮೂಲಾಗ್ರ ಹೊಸತನದ, ಹೊಸ ಕಲ್ಪನೆಯ, ಹೊಸ ದೃಷ್ಟಿಕೋನದ ಸಮಗ್ರ ಶಿಶು ಕಲ್ಯಾಣ ಯೋಜನೆ ಅನುಷ್ಠಾನಕ್ಕೆ ಬರಬೇಕು.

ಬೆಂಗಳೂರು: ಅಂಗನವಾಡಿ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ

ರಾಜ್ಯದ ಸದ್ಯದ ಸ್ಥಿತಿಗತಿ

2011ರ ಜನಗಣತಿಯನ್ನು ಆಧಾರವಾಗಿರಿಸಿಕೊಂಡು 2022ರ ಕರ್ನಾಟಕದ ಜನಸಂಖ್ಯೆಯನ್ನು ಅಂದಾಜಿಸಿದರೆ ಅದು 7 ಕೋಟಿ ದಾಟುತ್ತದೆ. ಅದರಲ್ಲಿ ಮಹಿಳೆಯರು 3.45 ಕೋಟಿ ಮತ್ತು 6 ವರ್ಷಗಳವರೆಗಿನ ಮಕ್ಕಳು 80 ಲಕ್ಷದಷ್ಟಿದ್ದಾರೆ. ಅಂದಾಜು 2.5 ಕೋಟಿ ಮಕ್ಕಳು ರಾಷ್ಟ್ರಮಟ್ಟದಲ್ಲಿ ಮತ್ತು 10 ಲಕ್ಷದಷ್ಟುಮಕ್ಕಳು ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ ಜನಸಂಖ್ಯೆ ಪಟ್ಟಿಗೆ ಸೇರ್ಪಡೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಅವರ ಆರೋಗ್ಯ, ಶಿಕ್ಷಣ ಮತ್ತು ಆಮೂಲಾಗ್ರ ವಿಕಸನಕ್ಕೆ ಅನುಷ್ಠಾನಗೊಳ್ಳುತ್ತಿರುವ ಕಾರ್ಯಕ್ರಮಗಳು ಮತ್ತು ಅದರ ಪ್ರತಿಫಲಗಳು ಸಾಧಾರಣಕ್ಕಿಂತ ಕೆಳಮಟ್ಟದ್ದಾಗಿವೆ.

ಸಮೀಕ್ಷೆಗಳ ಪ್ರಕಾರ ಪ್ರತಿಶತ 4ರಷ್ಟುಮಕ್ಕಳು ಅಂಗನವಾಡಿಗಳಿಂದ, ಪ್ರತಿಶತ 12ರಷ್ಟುಮಕ್ಕಳು ಪ್ರಾಥಮಿಕ ಶಾಲೆಗಳಿಂದ, ಪ್ರತಿಶತ 22ರಷ್ಟುಮಕ್ಕಳು ಪ್ರೌಢಶಿಕ್ಷಣದಿಂದ ಮತ್ತು ಪ್ರತಿಶತ 53ರಷ್ಟುಮಕ್ಕಳು ಉನ್ನತ ವ್ಯಾಸಂಗದಿಂದ ಹಿಂದೆ ಸರಿಯುತ್ತಿದ್ದಾರೆ.

ಹೊಸ ಆದೇಶದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ಯಾಯ

ಮೇಲಿನ ದುರಂತ ಸನ್ನಿವೇಶಕ್ಕೆ ಬಡತನ, ಪೋಷಕರ ಅನಕ್ಷರತೆ, ಬಾಲಕಾರ್ಮಿಕತೆ, ಕೈಗೆಟುಕದ ಶಿಕ್ಷಣ ವೆಚ್ಚ, ಬೆಳೆಯುವ ಹಂತದಲ್ಲಿ ಕೈಹಿಡಿದು ಮುನ್ನಡೆಸದ ಸಮಾಜ ಮತ್ತು ಶಿಕ್ಷಕರ ಕೊರತೆ ಒಂದೆಡೆ ಕಾರಣವಾದರೆ, ಶಾಲಾಪೂರ್ವ ಶಿಕ್ಷಣದಲ್ಲಿನ ನ್ಯೂನತೆಗಳು, ಅಪೌಷ್ಟಿಕತೆ ಮತ್ತು 0-6 ವರ್ಷದ ಮಧ್ಯದ ಅವಧಿಯಲ್ಲಿ ಕುಂಠಿತವಾದ ಸಮಗ್ರ ವಿಕಸನ ಪ್ರಕ್ರಿಯೆಗಳು ಕೂಡ ಅತ್ಯಂತ ಪ್ರಮುಖ ಕಾರಣಗಳೆಂದು ಸಾಬೀತಾಗಿದೆ.

ರಾಜಕೀಯ ಪಕ್ಷಗಳಿಗೆ ಜವಾಬ್ದಾರಿ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆ ಪ್ರಣಾಳಿಕೆಯಲ್ಲಿ ತೊಡಗಿಕೊಂಡಿವೆ. ರಾಜ್ಯದ ಭವಿಷ್ಯದ ಪ್ರಜೆಗಳಾದ ಮಕ್ಕಳ ಹಿತದೃಷ್ಟಿಯಿಂದ ಹಾಗೂ ಸಾವಿರಾರು ಸಂಖ್ಯೆಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರ ಬದುಕು ಸುಧಾರಿಸುವ ದೃಷ್ಟಿಯಿಂದ ಅವು ತಮ್ಮ ಪ್ರಣಾಳಿಕೆಯಲ್ಲಿ ಅಂಗನವಾಡಿಗಳ ಆಮೂಲಾಗ್ರ ಬದಲಾವಣೆಗೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳನ್ನು ಸೇರಿಸಿಕೊಳ್ಳಬೇಕಿದೆ.
1. ಹೊಸ ಸರ್ಕಾರ ರಚನೆಯಾದ ತಕ್ಷಣ, ಆದ್ಯತೆಯೊಂದಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಶ್ವೇತಪತ್ರ ಹೊರಡಿಸುವುದು
2. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಶಿಶು ವಿಕಸನ ತಜ್ಞರ ಸಮಿತಿ ರಚನೆ
3. ಶಿಶು ವಿಕಸನ ತಜ್ಞರ ಸಮಿತಿಯಿಂದ ನಾನಾ ರಾಷ್ಟ್ರಗಳ ಅತ್ಯುತ್ತಮ ಶಿಶು ಕಲ್ಯಾಣ ಕಾರ್ಯಕ್ರಮಗಳ ಅಧ್ಯಯನ ಮತ್ತು ರಾಜ್ಯಕ್ಕೆ ಅನುಗುಣವಾಗುವಂತಹ ವಿಶ್ವ ದರ್ಜೆಯ ಅಂಗನವಾಡಿಗಳ ನಿರ್ಮಾಣ
4. ರಾಜ್ಯದ 1.36 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಶಿಕ್ಷಕರ ಸ್ಥಾನಮಾನ, ವೇತನ ಹೆಚ್ಚಳ, ವಿಮೆ ಮತ್ತು ವಿವಿಧ ಭತ್ಯೆಗಳ ಪರಿಷ್ಕರಣೆ
5. 65000 ಅಂಗನವಾಡಿಗಳಲ್ಲಿ ಶೇ.30ರಷ್ಟುಸ್ವಂತ ಕಟ್ಟಡಗಳಿಲ್ಲದಿರುವ ಕಡೆ, ತುರ್ತಾಗಿ ನಿವೇಶನ ಮತ್ತು ಕಟ್ಟಡ ನಿರ್ಮಾಣ
6. ಸ್ವಂತ ಕಟ್ಟಡಗಳಿರುವ ಎಲ್ಲಾ ಅಂಗನವಾಡಿಗಳ ಸಮೀಕ್ಷೆ ಮತ್ತು ಶಿಥಿಲ ಕಟ್ಟಡಗಳ ರಿಪೇರಿ ಮತ್ತು ಮರು ನಿರ್ಮಾಣ
7. ರಾಜ್ಯದ ಎಲ್ಲಾ ಅಂಗನವಾಡಿಗಳನ್ನು ಶಿಶುಸ್ನೇಹಿ ಮತ್ತು ಬಾಲ್ಯಸ್ನೇಹಿಯಾಗಿಸಿ ಮೇಲ್ದರ್ಜೆಗೇರಿಸುವುದು
8. ಪೌಷ್ಟಿಕ ಆಹಾರ ಪಟ್ಟಿಯನ್ನು ಪುನರ್‌ ವಿಮರ್ಶಿಸಿ, ಉತ್ತಮ ಗುಣಮಟ್ಟದ ಆಹಾರ ಪೂರೈಕೆಗೆ ಆರ್ಥಿಕ ಬಲ ತುಂಬುವುದು
9. ಆರೋಗ್ಯ ತಪಾಸಣೆ, ಅಂಗನವಾಡಿ ಕಾರ್ಯಕರ್ತರ ಹಾಜರಾತಿಗೆ ಬಯೋಮೆಟ್ರಿಕ್‌ ಉಪಕರಣಗಳ ಬಳಕೆ
10. ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ, ಮರುತರಬೇತಿ ಮತ್ತು ಉನ್ನತ ತರಬೇತಿಗಳನ್ನು ಪ್ರತಿ ವರ್ಷವೂ ನಿಯಮಿತವಾಗಿ ಸಂಘಟಿಸಿ, ಗ್ರೇಡಿಂಗ್‌ ವ್ಯವಸ್ಥೆಯನ್ನು ಜಾರಿಗೊಳಿಸುವುದು
11. ರಾಜ್ಯದಲ್ಲಿರುವ ಪ್ರತಿ ಅಂಗನವಾಡಿಗೂ ಶಾಲಾಪೂರ್ವ ಶಿಕ್ಷಣಕ್ಕೆ ಬೇಕಾಗುವ ಸಕಲ ಸಾಮಗ್ರಿಗಳನ್ನು ಒದಗಿಸಿ, ಮಕ್ಕಳು ಸಂತೋಷ ಮತ್ತು ಆನಂದದಾಯಕವಾಗಿ ಕಲಿಯಲು ಆಸಕ್ತಿ ಬೆಳೆಸಿಕೊಳ್ಳುವಂತಹ ವಾತಾವರಣ ನಿರ್ಮಾಣ ಮಾಡುವುದು
12. ಕೈಗಾರಿಕೆ ಪ್ರದೇಶಗಳಲ್ಲಿರುವ ಅಂಗನವಾಡಿಗಳನ್ನು ದಿನದ 14 ಗಂಟೆ (ಬೆಳಗ್ಗೆ 6ರಿಂದ ಸಂಜೆ 8ರವರೆಗೆ) ಎರಡು ಶಿಫ್‌್ಟನಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿ, ಬಡ ಉದ್ಯೋಗಸ್ಥ ಮಹಿಳೆಯರಿಗೆ ನೆರವಾಗುವುದು
13. ತಂತ್ರಜ್ಞಾನವನ್ನು ಬಳಸಿ ಎಂಐಎಸ್‌ಗಳನ್ನು ಪ್ರತಿ ದಿನವೂ ಸಂಗ್ರಹಿಸುವಂತೆ ವ್ಯವಸ್ಥೆ ರೂಪಿಸಿ, ಪ್ರತಿ ತಿಂಗಳೂ ಮಕ್ಕಳ ಆರೋಗ್ಯ, ಭಾಗವಹಿಸುವಿಕೆ, ಶಿಕ್ಷಣ, ಪೌಷ್ಟಿಕತೆಯ ಗಣತಿಯನ್ನು ಮಾಡುವುದು ಮತ್ತು ಪ್ರತಿ ಮಾಸಿಕ ಮೌಲ್ಯಮಾಪನದ ಪ್ರಮುಖ ಅಂಶಗಳನ್ನು ಇಲಾಖೆಯ ಜಾಲತಾಣದಲ್ಲಿ ಸಾರ್ವಜನಿಕರ ಪರಾಮರ್ಶೆಗೆ ಪ್ರಕಟಿಸುವುದು
14. ಸಮಾಜದ ಸಿರಿವಂತರನ್ನು ಅಂಗನವಾಡಿಗಳ ದತ್ತು ಸ್ವೀಕಾರಕ್ಕೆ ಪ್ರೇರೇಪಿಸುವುದು
15. ನಾಡಿನ ಪ್ರತಿ ಮಗುವೂ ಹೊರೆಯಲ್ಲ, ವರವೆಂದು ಪರಿಗಣಿಸುವುದು
16. ಕನ್ನಡದ ಪ್ರತಿ ಕಂದಮ್ಮನ್ನಲ್ಲೂ ಅಜೀಂ ಪ್ರೇಮ್‌ಜಿ, ಸುಧಾಮೂರ್ತಿ, ವಿಶ್ವೇಶ್ವರಯ್ಯ, ಬಸವಣ್ಣನವರನ್ನು ಕಲ್ಪಿಸಿಕೊಂಡು, ಪ್ರತಿ ಅಂಗನವಾಡಿಯನ್ನು ಮನೆಯಾಚೆಯ ಮನೆಯನ್ನಾಗಿಸಿ, ಪ್ರತಿ ಅಂಗನವಾಡಿ ಕಾರ್ಯಕರ್ತರನ್ನು ಪೂರೆಯುವ ತಾಯಂದಿರನ್ನಾಗಿಸುವುದು
17. ಪ್ರತಿ ಅಂಗನವಾಡಿಯನ್ನು ಆಹಾರ, ಆರೋಗ್ಯ, ದೃಢತ್ವ, ಯೋಗ, ಶಿಸ್ತು, ಪ್ರಾರ್ಥನೆ, ಯೋಚನೆ, ತರ್ಕ, ಮೌಲ್ಯ, ಗ್ರಹಿಸುವಿಕೆ, ಧ್ಯಾನ, ದೃಶ್ಯೀಕರಣಗಳ ಸರ್ವತೋಮುಖ ವ್ಯಕ್ತಿ ವಿಕಸನದ ಬೀಜ ಬಿತ್ತುವ ಕೇಂದ್ರಗಳನ್ನಾಗಿಸಿ, ನಾಡಿನ ಪ್ರತಿ ಮಗುವನ್ನೂ ಜ್ಞಾನ, ವಿಜ್ಞಾನ, ಆವಿಷ್ಕಾರ ಮತ್ತು ಸಂಪತ್ತು ಸೃಷ್ಟಿಯ ಕಲಿಗಳನ್ನಾಗಿಸುವ ಗುರುಕುಲಗಳನ್ನಾಗಿಸುವುದು

ಇದು ವೆಚ್ಚವಲ್ಲ, ಹೂಡಿಕೆ!

ಅಂಗನವಾಡಿಗಳ ಅಭಿವೃದ್ಧಿಗೆ ವ್ಯಯಿಸುವ ಹಣ ವೆಚ್ಚವೆಂದು ಪರಿಗಣಿಸದೆ, ಭವ್ಯ ಭಾರತದ ನಿರ್ಮಾಣಕ್ಕೆ ಭರಿಸುತ್ತಿರುವ ಬಂಡವಾಳವೆಂದು ಸರ್ಕಾರಗಳು ಪರಿಗಣಿಸಬೇಕು. ಆರ್ಥಿಕ ಹಂಚಿಕೆಯನ್ನು ದುಪ್ಪಟ್ಟು ಅಥವಾ ಮೂರು ಪಟ್ಟು ಮಾಡಬೇಕಾದರೂ ಸರಿ, ಯಾವುದೇ ಅಂಜಿಕೆ, ಅನುಮಾನವಿಲ್ಲದೆ ಅದನ್ನು ಮಾಡಬೇಕು. 6 ವರ್ಷದವರೆಗಿನ ಮಕ್ಕಳು ಮತದಾರರಲ್ಲದಿದ್ದರೂ, ಮೇಲಿನ ಕ್ರಾಂತಿಕಾರಕ ಹೆಜ್ಜೆಯನ್ನು ಮುಖ್ಯಮಂತ್ರಿಗಳು ಇರಿಸಿದರೆ ಖಂಡಿತವಾಗಿ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನವನ್ನು ಗಳಿಸಿಕೊಳ್ಳಬಲ್ಲರು. ಅಂಗನವಾಡಿಯಲ್ಲಿ ವ್ಯಯಿಸುವ ಪ್ರತಿಯೊಂದು ಪೈಸೆಯೂ ಮುಂಗಾರಿನ ಮಳೆಯಂತೆ ತನ್ನ ಪ್ರತಿ ಹನಿಯ ಲೀಲೆಯಿಂದ ಹೊಳೆಯುವ ಮುತ್ತಾಗಲಿ ಎಂದು ಹಾರೈಸುವೆ.

ಅಂಗನವಾಡಿ ಕಾರ್ಯಕರ್ತೆಯರು ಬಾಣಂತಿಯರ ಸಹೋದರಿಯಾಗಿಯೂ, ಮಕ್ಕಳ ಪಾಲಕಳಾಗಿಯೂ, ದಾದಿಯಾಗಿಯೂ ಮತ್ತು ಶಿಕ್ಷಕಳಾಗಿಯೂ ಹಲವಾರು ಪಾತ್ರ ನಿಭಾಯಿಸುತ್ತಿದ್ದಾರೆ. ಸರ್ಕಾರ ತಕ್ಷಣ ಅವರ ಬೇಡಿಕೆ ಈಡೇರಿಸಲು ಒಪ್ಪಬೇಕು ಮತ್ತು ವಿರೋಧ ಪಕ್ಷಗಳು ಅದನ್ನು ಸಂತೋಷದಿಂದ ಸ್ವಾಗತಿಸಬೇಕು: ಚಿತ್ರನಟಿ ಪೂಜಾ ಗಾಂಧಿ. 

Follow Us:
Download App:
  • android
  • ios