ಬೆಂಗಳೂರು: ಅಂಗನವಾಡಿ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ

ಸೇವೆ ಕಾಯಂ, ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ, 5000ಕ್ಕೂ ಹೆಚ್ಚು ಜನರ ಭಾಗಿ, ಸ್ವತಃ ಸಿಎಂ ಬೊಮ್ಮಾಯಿ ಆಗಮನಕ್ಕೆ ಪಟ್ಟು. 

Anganwadi Workers Held Protest Indefinite Strike in Bengaluru grg

ಬೆಂಗಳೂರು(ಜ.19):  ಸೇವೆ ಕಾಯಂ, ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಪುನಃ ಹೋರಾಟಕ್ಕಿಳಿದಿದ್ದು, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿರುವ ಅಂಗನವಾಡಿ ಕಾರ್ಯಕರ್ತೆಯರು ‘ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆ’ ನೇತೃತ್ವದಲ್ಲಿ 5 ಸಾವಿರಕ್ಕೂ ಹೆಚ್ಚು ಮಹಿಳೆಯರು ಮುಷ್ಕರ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಸ್ಥಳಕ್ಕೆ ಆಗಮಿಸಿ ಸೂಕ್ತ ಭರವಸೆ ನೀಡುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಹೊಸ ಆದೇಶದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ಯಾಯ

ಈ ವೇಳೆ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷೆ ಬಿ.ಪ್ರೇಮಾ, ‘ಹಲವು ಯೋಜನೆಗಳನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸುವಲ್ಲಿ ನಮ್ಮ ಪಾತ್ರ ಮಹತ್ವದ್ದು. ಹೊಸ ಯೋಜನೆಗಳನ್ನು ಜಾರಿಗೊಳಿಸುವ ಸರ್ಕಾರ ಕಾರ್ಯಕರ್ತೆಯರ ಮೇಲೆ ಹೆಚ್ಚು ಕಾರ್ಯಭಾರ ಹೊರಿಸುತ್ತಿದೆ. ಆದರೆ, ಅದಕ್ಕೆ ಅನುಗುಣವಾಗಿ ಸಂಬಳ ಹೆಚ್ಚಳ, ಸೇವೆ ಕಾಯಂಗೊಳಿಸುವ ಕೆಲಸ ಮಾಡುತ್ತಿಲ್ಲ’ ಎಂದು ದೂರಿದರು.

‘ರಾಜ್ಯದಲ್ಲಿ 1 ಲಕ್ಷದ 32 ಸಾವಿರ ಕಾರ್ಯಕರ್ತರನ್ನು ಗೌರವಧನ ಹೆಸರಲ್ಲಿ ಶೋಷಣೆ ಮಾಡಲಾಗುತ್ತಿದೆ. ಉದ್ಯೋಗ, ಸಾಮಾಜಿಕ, ಆರ್ಥಿಕ ಭದ್ರತೆ ನೀಡದೆ ಮಹಿಳೆಯರನ್ನು ದುಡಿಸುತ್ತಿದೆ. ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ, ಆರೋಗ್ಯ ತಪಾಸಣೆ, ಪೋಷಣ್‌ ಟ್ರ್ಯಾಕ್‌ನಲ್ಲಿ ಗರ್ಭಿಣಿ, ಬಾಣಂತಿಯರ ಮಾಹಿತಿ, ಮಾತೃ ವಂದನಾ ಅರ್ಜಿ ಭರ್ತಿ ಸೇರಿ ಇತರೆ ಕರ್ತವ್ಯ ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ವೇತನ ಹೆಚ್ಚಿಸಿ, ಶಾಲಾ ಶಿಕ್ಷಕರ ಸ್ಥಾನಮಾನ ನೀಡಬೇಕು’ ಎಂದರು.

‘ಕೊರೋನಾ ಸಂಕಷ್ಟದ ವೇಳೆ ಜೀವದ ಹಂಗು ತೊರೆದು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದೇವೆ. ಆ ವೇಳೆ ಹಲವರು ಮೃತಪಟ್ಟು, ಕುಟುಂಬ ಬೀದಿ ಪಾಲಾಗಿದೆ. ಇಷ್ಟಾದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Uttara Kannada: ಅಭಿವೃದ್ಧಿಯಾದಂತೆ ಬೇಡಿಕೆ ಹೆಚ್ಚಳ: ಸಚಿವ ಶಿವರಾಮ ಹೆಬ್ಬಾರ

ಈ ವೇಳೆ ಗೌರವಾಧ್ಯಕ್ಷೆ ಜಯಲಕ್ಷ್ಮೇ ಬಿ.ಆರ್‌., ಜಯಲಕ್ಷ್ಮೇ ಬಿ.ಆರ್‌., ಕಾರ್ಯದರ್ಶಿ ಉಮಾಮಣಿ, ಖಜಾಂಚಿ ವಿಶಾಲಾಕ್ಷಿ, ಉಪಾಧ್ಯಕ್ಷೆ ನಿರ್ಮಲ ಬಿ.ಎಸ್‌., ಭಾರತಿ ಎನ್‌.ಪಿ.ಸೇರಿ ಇತರರಿದ್ದರು.

ಸರ್ಕಾರಕ್ಕೆ 5 ಬೇಡಿಕೆ

1. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಕಾಯಂ ಮಾಡಬೇಕು.
2. ಎನ್‌ಇಪಿ ಜಾರಿಗೊಳಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ . 31ಸಾವಿರ ವೇತನ ನೀಡಿ, ಶಾಲಾ ಶಿಕ್ಷಕರ ಸ್ಥಾನಮಾನ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ತಕ್ಷಣ ಮೇಲ್ದರ್ಜೆಗೆ ಏರಿಸಬೇಕು.
3. ಸುಪ್ರೀಂ ಕೋರ್ಚ್‌ ಆದೇಶಂತೆ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ, ಪಿಂಚಣಿ ಜಾರಿ ಮಾಡಬೇಕು.
4. ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಆರೋಗ್ಯ ವಿಮೆಯಾದ ಇಎಸ್‌ಐ ಜಾರಿ ಮಾಡಬೇಕು.
5. ತೀವ್ರತರದ ಕಾಯಿಲೆಗಳಿಂದ ಬಳಲುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಂಬಳ ಸಹಿತ ರಜೆ ನೀಡಬೇಕು.

Latest Videos
Follow Us:
Download App:
  • android
  • ios