Asianet Suvarna News Asianet Suvarna News

ಇಂದು ಅಂತರ್ಜಲ ಚೇತನ ಯೋಜನೆಗೆ ಸಚಿವ ಈಶ್ವರಪ್ಪ ಚಾಲನೆ

ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆ ಸಹಯೋಗದೊಂದಿಗೆ ನರೇಗಾ ಯೋಜನೆಯಡಿ ಅಂತರ್ಜಲ ಹೆಚ್ಚಿಸುವ ಅಂತರ್ಜಲ ಚೇತನ ಯೋಜನೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಲಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Rural Development  Minister KS Eshwarappa kicks off Under ground water project in Shivamogga
Author
Shivamogga, First Published May 6, 2020, 10:11 AM IST

ಶಿವಮೊಗ್ಗ(ಮೇ.06): ಮಹಾತ್ಮಗಾಂಧಿ​ ಉದ್ಯೋಗ ಖಾತ್ರಿ ಯೋಜನೆಯಡಿ ಅಂತರ್ಜಲ ಹೆಚ್ಚಿಸುವ ಅಂತರ್ಜಲ ಚೇತನ ಯೋಜನೆಗೆ ಮೇ 6 ರಂದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಚಾಲನೆ ನೀಡಲಾಗುತ್ತಿದ್ದು, ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆ ಸಹಯೋಗದೊಂದಿಗೆ ಶಿವಮೊಗ್ಗ ತಾಲೂಕಿನ ಸೂಗೂರಿನಲ್ಲಿ ನಡೆವ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಚಾಲನೆ ನೀಡಲಿದ್ದಾರೆ.

ಮಳೆ ನೀರು ಸಂಗ್ರಹಣೆ ಮತ್ತು ಮಣ್ಣಿ ಸವಕಳಿ ತಡೆಯುವುದು, ಮಣ್ಣಿನ ತೇವಾಂಶ ಹೆಚ್ಚಿಸುವುದು, ಸ್ವಾಭಾವಿಕ ಹಳ್ಳಗಳುದ್ದಕ್ಕೂ ಕೃತಕ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸುವುದು ಹಾಗೂ ಸ್ವಾಭಾವಿಕ ಸಸ್ಯವರ್ಗ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.

ಈ ಯೋಜನೆ ಅನುಷ್ಠಾನದಿಂದಾಗಿ ನೈಸರ್ಗಿಕ ನೀರಿನ ಮೂಲಗಳ ಮತ್ತು ಮಳೆನೀರಿನ ಕೊಯ್ಲಿನ ಜೊತೆಗೆ ನೈಸರ್ಗಿಕ ಹಳ್ಳಗಳ ಜಾಲಗಳನ್ನು ಪುನಶ್ಚೇತನಗೊಳಿಸಲು ಸಹಕಾರಿಯಾಗಲಿದೆ. ನೀರಿನ ಮೂಲಗಳಲ್ಲಿ ಮಣ್ಣಿನ ಸವಕಳಿ ಹಾಗೂ ಹೂಳು ತುಂಬುವಿಕೆ ಕಡಿಮೆಯಾಗಲಿದೆ. ಕೆರೆಗಳಲ್ಲಿ ನೀರಿನ ಹರಿವು ಹೆಚ್ಚಾಗಲಿದೆ ಅಲ್ಲದೇ ಕೆರೆಗಳ ಪುನರುಜ್ಜೀವಗೊಳಿಸಲು ಹಾಗೂ ನದಿ ಜಲಾನಯನ ಪ್ರದೇಶಗಳಲ್ಲಿ ಸ್ವಾಭಾವಿಕ ಸಸ್ಯವರ್ಗ ಅಭಿವೃದ್ಧಿಗೆ ನೆರವಾಗಲಿದೆ.

ಹೆಚ್ಚಿನ ಜನರು ರಸ್ತೆಗೆ ಇಳಿದಿರುವುದು ಅಪಾಯಕಾರಿ: ಸಚಿವ ಈಶ್ವರಪ್ಪ

ಅರಣ್ಯೀಕರಣ, ಹರಿಯುವ ನೀರಿನ ವೇಗವನ್ನು ನಿಧಾನಗೊಳಿಸಿ ಮಳೆನೀರನ್ನು ಇಂಗಿಸಲು ಕಲ್ಲುಗುಂಡುತಡೆ, ತ್ವರಿತವಾಗಿ ಅಂತರ್ಜಲ ಮರುಪೂರಣಗೊಳಿಸಲು ಮರುಪೂರಣ ಬಾವಿಗಳು ಮತ್ತು ಕೊಳವೆಬಾವಿಗಳು ಮತ್ತು ದೀರ್ಘಕಾಲದವರೆಗೆ ಮೇಲ್ಮೈ ನೀರು ಲಭಿಸುವಂತೆ ನೋಡಿಕೊಳ್ಳಲು ಕರೆಹೊಂಡ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.

9 ಜಿಲ್ಲೆಗಳಲ್ಲಿ ಅನುಷ್ಠಾನ:

ಯೋಜನೆಯ ಆರಂಭದ ಹಂತದಲ್ಲಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಅಂತರ್ಜಲ ಚೇತನ ಯೋಜನೆಗೆ ಚಾಲನೆ ದೊರೆಯಲಿದೆ. ರಾಜ್ಯದ ಸುಮಾರು 23,000 ಕೆರೆಗಳಲ್ಲಿ 5300ಕೆರೆಗಳು ಶಿವಮೊಗ್ಗ ಜಿಲ್ಲೆಯಲ್ಲೇ ಇರುವುದು ವಿಶೇಷ. ಒಂದು ವರ್ಷದ ಅಲ್ಪಾಧಿ​ಯಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವಲ್ಲಿ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯು ಇದರ ಅನುಷ್ಠಾನ ಮತ್ತು ಮೇಲುಸ್ತುವಾರಿಯನ್ನು ನೋಡಿಕೊಳ್ಳಲಿದೆ. ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲೆಗೆ ಸುಮಾರು 252 ಕೋಟಿ ರು. ಕ್ರಿಯಾ ಯೋಜನೆ ರೂಪಿಸಲಾಗಿದೆ.

8.82 ಲಕ್ಷ ಜನರಿಗೆ ಉಪಯೋಗ:

ಜಿಲ್ಲೆಯ 1650 ಗ್ರಾಮಗಳ ವ್ಯಾಪ್ತಿಯಲ್ಲಿ 345 ಕಿರು ಜಲಾನಯನಗಳ ಸುಮಾರು 5,000 ಚ.ಕೀ. ಪ್ರದೇಶದಲ್ಲಿ ಅಂತರ್ಜಲ ವೃದ್ಧಿಗೊಳಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯ ಎಲ್ಲ 271 ಗ್ರಾಪಂ ವ್ಯಾಪ್ತಿಯಲ್ಲಿ ಈ ಅಂತರ್ಜಲ ಸಂರಕ್ಷಣೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಸುಮಾರು 8.82 ಲಕ್ಷ ಜನರಿಗೆ ಉಪಯೋಗಲಿದೆ. ಈ ಯೋಜನೆಯಡಿ 1625 ಬೋಲ್ಡರ್‌ ಚೆಕ್‌ (ಕಲ್ಲುಗುಂಡು ತಡೆ) ನಿರ್ಮಾಣ, 15,948 ಇಂಗುಬಾವಿ, 307 ಇಂಗುಕೊಳವೆ, 221 ಕೆರೆ ಹೊಂಡ ಸೇರಿದಂತೆ ಒಟ್ಟು 32,731 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕೈಗೊಳ್ಳಲಾಗುವ ಈ 4000 ಕಾಮಗಾರಿಗಳನ್ನು ಮೇ ಮಾಸಾಂತ್ಯದೊಳಗಾಗಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ.

ಜಿಲ್ಲೆ ಪ್ರತಿ ಗ್ರಾಪಂನಲ್ಲೂ ಚಾಲನೆ

ಶಿವಮೊಗ್ಗ ನಗರದಲ್ಲಿನ 70ಕೆರೆಗಳ ಪೈಕಿ 25ಕೆರೆಗಳ ಅಭಿವೃದ್ಧಿಯನ್ನು ಜಲಾಮೃತ ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸರ್ಕಾರವು ಸಣ್ಣ ನೀರಾವರಿ ಯೋಜನೆಯಡಿ 16 ಕೋಟಿ ರು.ಗಳ ಅನುದಾನವನ್ನು ಮಂಜೂರು ಮಾಡಿದೆ. ಉದ್ದೇಶಿತ ಅಂತರ್ಜಲ ಚೇತನ ಯೋಜನೆಗೆ ನಾಳೆ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯ್ತಿಯಿತಿಗಳಲ್ಲಿ ಚಾಲನೆ ದೊರೆಯಲಿದೆ. ಶಿವಮೊಗ್ಗ ತಾಲೂಕಿನ ಸೂಗೂರಿನಲ್ಲಿ, ತೀರ್ಥಹಳ್ಳಿ ತಾಲೂಕಿನ ಆರಗ, ಭದ್ರಾವತಿ ತಾಲೂಕಿನ ದೊಡ್ಡೇರಿ, ಸೊರಬ ತಾಲೂಕಿನ ಬಾರಂಗಿ, ಶಿಕಾರಿಪುರ ತಾಲೂಕಿನ ತರಲಘಟ್ಟ, ಹೊಸನಗರ ತಾಲೂಕಿನ ಮೇಲಿನ ಬೇಸಿಗೆ, ಸಾಗರ ತಾಲೂಕಿನ ಕೆಳದಿ ಗ್ರಾಮಗಳಲ್ಲಿ ಉದ್ಘಾಟನಾ ಸಮಾರಂಭಗಳು ನಡೆಯಲಿವೆ.
 

Follow Us:
Download App:
  • android
  • ios