Asianet Suvarna News Asianet Suvarna News

ಮಳೆಗಾಲದಲ್ಲಿ ಆನ್‌ಲೈನ್ ಕ್ಲಾಸ್‌ಗೆ ಕೊಡೆಯೇ ಆಸರೆ: ನಾಯಕರು ವ್ಯಾಪ್ತಿ ಪ್ರದೇಶದ ಹೊರಗೆ!

* ರಾಜ್ಯದಲ್ಲಿ ಮುಂಗಾರು ಮಳೆ ಆರಂಭ

* ಲಾಕ್ಡೌ‌ನ್ ಮಧ್ಯೆ ವಿದ್ಯಾರ್ಥಿಗಳಿಗೆ ಆರಂಭವಾಗಿದೆ ಆನ್‌ಲೈನ್ ತರಗತಿ

* ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ

* ಹೊರ ಬಂದರೆ ಮಳೆಯಲ್ಲಿ ಒದ್ದೆ

 

Rural Area Atudents Stuggling To Attend Online Classes During Rainy Season pod
Author
Bangalore, First Published Jun 16, 2021, 5:49 PM IST

ಮಂಗಳೂರು(ಜೂ.16): ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಇದಕ್ಕೆ ಪೂರಕ ಸೌಲಭ್ಯಗಳಿಲ್ಲದ ಹಳ್ಳಿಗಳಲ್ಲಿ ಮಳೆಗಾಲದಲ್ಲಿ ಮೊಬೈಲ್ ನೆಟ್‌ವರ್ಕ್‌ನದ್ದೇ ಸಮಸ್ಯೆ. ದ.ಕ. ಜಿಲ್ಲೆಯ ಮಟ್ಟಿಗೆ ಸುಳ್ಯ ತಾಲೂಕಿನ ಹಳ್ಳಿ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್‌ಗೆ ಗುಡ್ಡ ಬೆಟ್ಟ, ಮರ ಏರುವ ಸಾಹಸ ಮಾಡಬೇಕಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮೊಗ್ರ ಬಳ್ಳಕ್ಕದಲ್ಲಿ ಬಾಲಕಿಯೊಬ್ಬಳು ಎಸ್‌ಎಸ್‌ಎಲ್‌ಸಿ ಆನ್‌ಲೈನ್ ತರಗತಿಗೆ ಹಾಜರಾಗಲು ಮೊಬೈಲ್ ನೆಟ್‌ವರ್ಕ್‌ಗೆ ಹರಸಾಹಸ ಪಡುತ್ತಿರುವುದನ್ನು ಗಮನಿಸಿದ ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಸೆರೆ ಹಿಡಿದ ಚಿತ್ರವೊಂದು ಜಾಲತಾಣದಲ್ಲಿ ವೈರಲ್ ಆಗಿದೆ.

11 ಜಿಲ್ಲೆಯಲ್ಲಿ ಅನ್‌ಲಾಕ್‌ ಬಳಿಕ ಶಿಕ್ಷಕರು ಶಾಲೆಗೆ : ಪಾಠಗಳು ಆರಂಭ ಯಾವಾಗಿಂದ..?

ಸುರಿಯುತ್ತಿರುವ ಮಳೆಯ ನಡುವೆಯೇ ಬಾಲಕಿ ಮೊಬೈಲ್‌ನಲ್ಲಿ ನೆಟ್‌ವರ್ಕ್ ಜಾಲಾಡುತ್ತಿದ್ದಾಳೆ. ತಂದೆ ಕೊಡೆ ಹಿಡಿದು ಮಗಳ ಆನ್‌ಲೈನ್ ಪಾಠಕ್ಕೆ ಸಾಥ್ ನೀಡುತ್ತಿದ್ದಾರೆ. ಇದು ಕೇವಲ ಬಳ್ಳಕ್ಕದ ಚಿತ್ರಣವಲ್ಲ, ಸುಳ್ಯ ಗ್ರಾಮೀಣ ಭಾಗಗಳಲ್ಲಿ ಯಾವಾಗಲೂ ನೆಟ್‌ವರ್ಕ್‌ನದ್ದೇ ಸಮಸ್ಯೆ.

ಇದು ಹಳ್ಳಿ ಪ್ರದೇಶವಾದ್ದರಿಂದ ಖಾಸಗಿ ಕಂಪನಿಗಳ ನೆಟ್‌ವರ್ಕ್ ಕಡಿಮೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟವರ್ ಇದ್ದರೂ ಯಾವಾಗಲೂ ನೆಟ್‌ವರ್ಕ್ ಸಮಸ್ಯೆ ತಪ್ಪಿದ್ದಿಲ್ಲ. ಮನೆಯಲ್ಲಿದ್ದರೆ ನೆಟ್‌ವರ್ಕ್ ಇಲ್ಲ, ನೆಟ್‌ವರ್ಕ್ ಅಲ್ಪಸ್ವಲ್ಪ ಸಿಗಬೇಕಾದರೆ ಮನೆಯಿಂದ ಹೊರಗೆ ಬರಲೇ ಬೇಕು. ಮೊಬೈಲ್ ಟವರ್‌ಗೆ ಕೆಲವೊಮ್ಮೆ ಡೀಸೆಲ್ ಸಮಸ್ಯೆ, ಕರೆಂಟ್ ಕೈಕೊಟ್ಟರೆ ಜನರೇಟರ್ ಸಮಸ್ಯೆ ಹೀಗೆ ಸಮಸ್ಯೆಗಳ ಸುಳಿಯಲ್ಲಿ ಬಿಎಸ್‌ಎನ್‌ಎಲ್ ಸಿಲುಕಿದ್ದರೆ, ನೆಟ್‌ವರ್ಕ್ ವಿಚಾರದಲ್ಲಿ ಜನತೆಯನ್ನು ಹೈರಾಣು ಮಾಡುತ್ತಿದೆ. 

ಲಾಕ್‌ಡೌನ್‌ನಲ್ಲಿ ಸ್ನಾತಕೋತ್ತರ ಪದವಿ; ಎರಡು ಸೆಮಿಸ್ಟರ್ ಮುಗಿಸಿದ ನಟಿ ಮಾನ್ವಿತಾ ಕಾಮತ್

ಜನಪ್ರತಿನಿಧಿಗಳು ಸಭೆ ನಡೆಸಿ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸಮಸ್ಯೆ ನಿವಾರಿಸುವಂತೆ ಸೂಚಿಸುತ್ತಾರೆ. ಸಭೆಯಿಂದ ಹೊರಗೆ ಹೋದ ಬಳಿಕ ಜನಪ್ರತಿನಿಧಿಗಳ ಸೂಚನೆಯೂ ವ್ಯಾಪ್ತಿ ಪ್ರದೇಶದ ಹೊರಗೆ ಇರುತ್ತದೆ!

Follow Us:
Download App:
  • android
  • ios