ಬೆಂಗಳೂರಿನ ದೇವನಹಳ್ಳಿ ಸಮೀಪದ ಪೂಜೇನಹಳ್ಳಿಯಲ್ಲಿರುವ ಕೆಪೆಕ್ ಕೋಲ್ಡ್ ಸ್ಟೋರೇಜ್‌ನಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ನಾಲ್ಕು ಲೋಡ್ ರೆಡಿಮೇಡ್ ಬಟ್ಟೆಗಳನ್ನು ಜಿಎಸ್‌ಟಿ ಅಧಿಕಾರಿಗಳು ವಶಪಡಿಸಿಕೊಂಡು, ಕೋಲ್ಡ್ ಸ್ಟೋರೇಜ್ ಸೀಜ್ ಮಾಡಿರುವ ಘಟನೆ ಸೋಮವಾರ ನಡೆದಿದೆ.

ಬೆಂಗಳೂರು : ಬೆಂಗಳೂರಿನ ದೇವನಹಳ್ಳಿ ಸಮೀಪದ ಪೂಜೇನಹಳ್ಳಿಯಲ್ಲಿರುವ ಕೆಪೆಕ್ ಕೋಲ್ಡ್ ಸ್ಟೋರೇಜ್‌ನಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ನಾಲ್ಕು ಲೋಡ್ ರೆಡಿಮೇಡ್ ಬಟ್ಟೆಗಳನ್ನು ಜಿಎಸ್‌ಟಿ ಅಧಿಕಾರಿಗಳು ವಶಪಡಿಸಿಕೊಂಡು, ಕೋಲ್ಡ್ ಸ್ಟೋರೇಜ್ ಸೀಜ್ ಮಾಡಿರುವ ಘಟನೆ ಸೋಮವಾರ ನಡೆದಿದೆ.

Add Asianetnews Kannada as a Preferred SourcegooglePreferred

ಬಾಳೆ ಸಂಸ್ಕರಣಾ ಮತ್ತು ಕೋಲ್ಡ್ ಸ್ಟೋರೇಜ್ ಅನ್ನು ರೆಡಿಮೇಡ್ ಬಟ್ಟೆಗಳ ಗೋದಾಮು ಮಾಡಿಕೊಂಡಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಮಸಾಲ ಪದಾರ್ಥಗಳನ್ನು ಅಕ್ರಮವಾಗಿ ದಾಸ್ತಾನು ಇಡಲಾಗಿತ್ತು. ಹೀಗಾಗಿ ಆ ಕೋಣೆಯನ್ನೂ ಸಹ ಕೆಪೆಕ್ ಅಧಿಕಾರಿಗಳ ಸಮ್ಮುಖದಲ್ಲಿ ಜಿಎಸ್ಟಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಮಸಾಲ ಪದಾರ್ಥಗಳಿಗೆ ತೆರಿಗೆ ಪಾವತಿಸಿರುವ ಕುರಿತು ಬಿಲ್‌ಗಳನ್ನು ಹಾಜರುಪಡಿಸಿದ ಹಿನ್ನಲೆಯಲ್ಲಿ ಮಸಾಲ ಪದಾರ್ಥಗಳ ಮುಟ್ಟುಗೋಲು ತೆರವುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದರೆ, ರೆಡಿಮೇಡ್ ಬಟ್ಟೆಗಳಿಗೆ ಈವರೆಗೆ ಯಾವುದೇ ಬಿಲ್ ಹಾಜರು ಪಡಿಸುವಲ್ಲಿ ಈ ಕೋಲ್ಡ್ ಸ್ಟೋರೇಜ್ ನಿರ್ವಹಣೆ ಹೊತ್ತಿರುವ ಫಿಜಾ ಆಗ್ರೋ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ವಿಫಲವಾಗಿದೆ. ಹೀಗಾಗಿ ತೆರಿಗೆ ವಂಚನೆಯ ಶಂಕೆ ವ್ಯಕ್ತವಾಗಿದೆ.

ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್) ವು ದೇವನಹಳ್ಳಿ ಸುತ್ತಮುತ್ತಲಿನ ರೈತರ ಅನುಕೂಲಕ್ಕಾಗಿ ಈ ಕೋಲ್ಡ್ ಸ್ಟೋರೇಜ್ ಸ್ಥಾಪಿಸಿತ್ತು. ರೈತರು ತರುವ ಹಣ್ಣು ಮತ್ತು ತರಕಾರಿಯನ್ನು ಇಲ್ಲಿ ಗ್ರೇಡಿಂಗ್ ಮಾಡಿ, ಸಂಸ್ಕರಿಸಿ, ಕೋಲ್ಡ್ ಸ್ಟೋರೇಜಿನಲ್ಲಿ ದಾಸ್ತಾನು ಇಡಲೆಂದು ಸ್ಥಾಪಿಸಲಾಗಿದೆ. ಇದರ ನಿರ್ವಹಣೆಯನ್ನು ವಿಧಾನಪರಿಷತ್ ಮಾಜಿ ಸದಸ್ಯ ಬಿ.ಎಂ. ಫಾರೂಕ್ ಅವರ ಒಡೆತನದ ಫಿಜಾ ಆಗ್ರೋ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಗೆ ಕೆಪೆಕ್ ವಹಿಸಿತ್ತು.

ಫಿಜಾ ಆಗ್ರೋವೆಂಚರ್ಸ್ ಒಪ್ಪಂದದಂತೆ ಬಾಡಿಗೆ ಪಾವತಿಸಿಲ್ಲ

ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮಕ್ಕೆ ಫಿಜಾ ಆಗ್ರೋವೆಂಚರ್ಸ್ ಒಪ್ಪಂದದಂತೆ ಬಾಡಿಗೆ ಪಾವತಿಸಿಲ್ಲ. ಇದೇ ಕಾರಣಕ್ಕೆ ಈಗಾಗಲೇ ಕೆಪೆಕ್ ನಿಗಮವು ಠೇವಣಿ ಹಣ ಜಫ್ತು ಮಾಡುವ ಜೊತೆಗೆ ಒಪ್ಪಂದ ರದ್ದುಗೊಳಿಸುವ ಆದೇಶ ಹೊರಡಿಸಿದರೂ ಫಿಜಾ ಕಂಪನಿಯು ನಿಗಮಕ್ಕೆ ಸ್ಪಂದಿಸಿರಲಿಲ್ಲ. ಈ ನಡುವೆ ಪೂಜೇನಹಳ್ಳಿ ಕೋಲ್ಡ್ ಸ್ಟೋರೇಜ್ನಲ್ಲಿ ಕೃಷಿ ಉತ್ಪನ್ನಗಳ ಹೊರತಾದ ಅನುಮಾನಾಸ್ಪದ ಚಟುವಟಿಕೆಯ ಮಾಹಿತಿ ತಿಳಿದು ವಾಣಿಜ್ಯ ಇಲಾಖೆಯ ಗಮನಕ್ಕೆ ತರಲಾಯಿತು. ಈ ಹಿನ್ನಲೆಯಲ್ಲಿ ಕರ್ನಾಟಕ ವಾಣಿಜ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಬಯಲಿಗೆ ಎಳೆದಿದ್ದಾರೆ.

ಫಿಜಾ ಆಗ್ರೋ ವೆಂಚರ್ಸ್ ಕಂಪನಿ ಒಪ್ಪಂದದ ಪ್ರಕಾರ ನಡೆದುಕೊಂಡಿಲ್ಲ. ನಮ್ಮ ನೋಟಿಸ್‌ಗಳಿಗೆ ಸ್ಪಂದಿಸಿಲ್ಲ. ನೋಟೀಸ್ ಕೊಟ್ಟು ಕಾನೂನು ಬದ್ದವಾಗಿ ಟರ್ಮಿನೇಷನ್ ಕೂಡ ಮಾಡಿದ್ದೇವೆ. ಆದರೂ ಅವರು ನಮಗೆ ಕೋಲ್ಡ್ ಸ್ಟೋರೇಜ್ ಬಿಟ್ಟು ಕೊಟ್ಟಿರಲಿಲ್ಲ. ಈಗ ಕಾನೂನು ಬಾಹಿರ ಚಟುವಟಿಕೆ ಮಾಡಿರೋದು ಪತ್ತೆಯಾಗಿದೆ. ರೆಡಿಮೇಡ್ ಬಟ್ಟೆ, ಮಸಾಲೆ ಪದಾರ್ಥಗಳು ಇಡಲು ಕಟ್ಟಿದ ಗೋಡೌನ್ ಅದಲ್ಲ. ದೇವನಹಳ್ಳಿ ಸುತ್ತಮುತ್ತಲ ರೈತರು ಬೆಳೆಯುವ ಹಣ್ಣು ಸಂಸ್ಕರಣೆ ಮತ್ತು ಸ್ಟೋರೇಜ್‌ಗೆ ಬಳಕೆಯಾಗಬೇಕಿತ್ತು. ನಮ್ಮ ಅಧಿಕಾರಿಗಳು ಈ ದಾಳಿಗೆ ಸಾಕ್ಷಿ ಆಗಿದ್ದಾರೆ. ಜಿಎಸ್ಟಿ ಅಧಿಕಾರಿಗಳ ತನಿಖೆ ಪೂರ್ಣಗೊಂಡ ನಂತರ ಕೋಲ್ಡ್ ಸ್ಟೋರೇಜ್ ಅನ್ನು ಕೆಪೆಕ್ ವಶಕ್ಕೆ ಪಡೆಯಲಿದೆ ಎಂದು ಕನ್ನಡಪ್ರಭಕ್ಕೆ ಕೆಪೆಕ್ ಎಂ.ಡಿ ಸಿ.ಎನ್. ಶಿವಪ್ರಕಾಶ್ ತಿಳಿಸಿದ್ದಾರೆ.

ತನಿಖೆಯ ನಂತರ ಗೋದಾಮು ವಶ

ದೇವನಹಳ್ಳಿ ಸುತ್ತಮುತ್ತಲ ರೈತರು ಬೆಳೆಯುವ ಹಣ್ಣು ಸಂಸ್ಕರಣೆ ಮತ್ತು ದಾಸ್ತಾನಿಗೆ ಬಳಕೆ ಆಗಬೇಕಿತ್ತು. ಆದರೆ ಅನುಮಾನಾಸ್ಪದ ಚಟುವಟಿಕೆ ನಡೆದಿದೆ. ಫಿಜಾ ಸಂಸ್ಥೆ ಬಾಡಿಗೆ ಪಾವತಿಸಿಲ್ಲ. ಹೀಗಾಗಿ ದಾಳಿ ನಡೆದಿದೆ. ಜಿಎಸ್ಟಿ ಅಧಿಕಾರಿಗಳ ತನಿಖೆ ಪೂರ್ಣಗೊಂಡ ನಂತರ ಕೋಲ್ಡ್ ಸ್ಟೋರೇಜನ್ನು ಕೆಪೆಕ್ ವಶಕ್ಕೆ ಪಡೆಯಲಿದೆ.

-ಸಿ.ಎನ್.ಶಿವಪ್ರಕಾಶ್, ಕೆಪೆಕ್ ಎಂ.ಡಿ.