ವಿಶೇಷ ಸೌಲಭ್ಯ ಆರೋಪ ಹಿನ್ನೆಲೆ: ನಟ ದರ್ಶನ್ ಇರುವ ಠಾಣೆ ಸಿಸಿಟೀವಿ ದೃಶ್ಯ ಕೋರಿ ಆರ್‌ಟಿಐ ಅರ್ಜಿ!
ವಿಶೇಷ ಸೌಲಭ್ಯದ ಆರೋಪ ಹಿನ್ನೆಲೆಯಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ 48 ಗಂಟೆಗಳ ದೃಶ್ಯಾವಳಿ ಒದಗಿಸುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಇಬ್ಬರು ವಕೀಲರು ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು (ಜೂ.15): ವಿಶೇಷ ಸೌಲಭ್ಯದ ಆರೋಪ ಹಿನ್ನೆಲೆಯಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ 48 ಗಂಟೆಗಳ ದೃಶ್ಯಾವಳಿ ಒದಗಿಸುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಇಬ್ಬರು ವಕೀಲರು ಮನವಿ ಸಲ್ಲಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಭೇಟಿ ನೀಡಿದ ವಕೀಲರಾದ ನರಸಿಂಹ ಮೂರ್ತಿ ಹಾಗೂ ಉಮಾಪತಿ ಅವರು, ದರ್ಶನ್ ಬಂಧನ ಬಳಿಕದ 48 ಗಂಟೆಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಒದಗಿಸುವಂತೆ ಠಾಣಾಧಿಕಾರಿಗೆ ಕೋರಿದರು.
ಈ ಭೇಟಿ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ವಕೀಲ ಉಮಾಪತಿ, ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ ಎಂಬ ಆರೋಪಗಳು ಬಂದಿವೆ. ಹೀಗಾಗಿ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಠಾಣೆಯೊಳಗೆ ಕೂಡ ಸಿಸಿಟಿವಿ ಅಳವಡಿಸಿರಬೇಕು ಎಂದರು.
ಏನೋ ಆಗಿಹೋಯ್ತು ಸಾರ್... ತನಿಖೆ ವೇಳೆ ಪೊಲೀಸರೆದುರು ದರ್ಶನ್ ಕಣ್ಣೀರು: ನಖರಾ ಬಿಡದ ಪವಿತ್ರಾಗೌಡ
ಠಾಣೆಯೊಳಗಿನ ಸಿಸಿಟಿವಿ ದೃಶ್ಯಾವಳಿಗಳು, ಠಾಣೆ ಹೊರಗೆ ಶಾಮಿಯಾನ ಹಾಕಿರುವುದು ಹಾಗೂ ನಿಷೇಧಾಜ್ಞೆ ಜಾರಿಗೆ ಕಾರಣಗಳೇನು ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದ್ದೇವೆ ಎಂದು ಉಮಾಪತಿ ಹೇಳಿದರು. ಹಲವು ಪ್ರಕರಣಗಳಲ್ಲಿ ನಟ ದರ್ಶನ್ ಅವರಿಗೆ ಕೆಲ ಅಧಿಕಾರಿಗಳು ಸಹಾಯ ಮಾಡಿದ್ದಾರೆ. ಈಗಿನ ಕೊಲೆ ಪ್ರಕರಣದಲ್ಲೂ ಅವರಿಗೆ ಅಧಿಕಾರಿಗಳ ರಕ್ಷಣೆ ಸಿಕ್ಕಿದೆ. ರಾಜಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿದ್ದಾಗಲೂ ಸಹ ದರ್ಶನ್ ವಿರುದ್ಧ ಕ್ರಮವಾಗಲಿಲ್ಲ ಎಂದು ವಕೀಲ ನರಸಿಂಹ ಮೂರ್ತಿ ಕಿಡಿಕಾರಿದರು.
ನನ್ನ ಮೇಲೂ ಹಲ್ಲೆಗೆ ಯತ್ನ: ಹಲವು ದಿನಗಳ ಹಿಂದೆ ಹಣಕಾಸು ವಿಚಾರವಾಗಿ ನನಗೂ ಚಿತ್ರನಟ ದರ್ಶನ್ ಹಲ್ಲೆ ಯತ್ನ ನಡೆಸಿ ಜೀವ ಬೆದರಿಕೆ ಹಾಕಿದ್ದರು ಎಂದು ಕನ್ನಡ ಚಿತ್ರ ನಿರ್ಮಾಪಕ ಬಿ.ಭರತ್ ಆರೋಪಿಸಿದ್ದಾರೆ. ದರ್ಶನ್ ಅವರಿಂದ ಜೀವ ಬೆದರಿಕೆ ಹಿನ್ನಲೆಯಲ್ಲಿ ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಕೋರಿ ಪೊಲೀಸರಿಗೆ ಅವರು ಮನವಿ ಮಾಡಿದ್ದಾರೆ. ದರ್ಶನ್ ಜೊತೆ ಮಾತನಾಡಿದ ಹಳೆಯ ಆಡಿಯೋವೊಂದು ಈಗ ವೈರಲ್ ಮಾಡಿ, ಅವರ ಅಭಿಮಾನಿಗಳು ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಭರತ್ ಹೇಳಿದ್ದಾರೆ.
ಇನ್ನು ಹಲ್ಲೆ ಯತ್ನದ ಕುರಿತು ವಿವರ ಬಹಿರಂಗಗೊಳಿಸಿರುವ ಅವರು, ಕೆಲ ವರ್ಷಗಳ ಹಿಂದೆ ಚಲನಚಿತ್ರವೊಂದರ ನಿರ್ಮಾಣದ ವಿಚಾರವಾಗಿ ನನಗೆ ದರ್ಶನ್ ಅವರು ಬೆದರಿಕೆ ಹಾಕಿದ್ದರು. ನೀನು ಸಿನಿಮಾ ಮಾಡು ಅಥವಾ ಸಿನಿಮಾ ಎನ್‌ಒಸಿ ಕೊಡು ಇಲ್ಲದಿದ್ದರೆ ಭೂಮಿ ಮೇಲೆ ಇರಲ್ಲ ಎಂದು ಧಮ್ಕಿ ಹಾಕಿದ್ದರು. ದರ್ಶನ್ ನನ್ನನ್ನೂ ಮೈಸೂರು ರಸ್ತೆಯಲ್ಲಿರುವ ಟೊರಿನೊ ಫ್ಯಾಕ್ಟರಿಗೆ ಕರೆದಿದ್ದರು. ನಾನು ಮಂಜಾಗೃತ ಕ್ರಮವಾಗಿ ಕೆಲವು ಸ್ನೇಹಿತರನ್ನು ಕರೆದೊಯ್ದಿದ್ದೆ. ಇಲ್ಲವಾದರೆ ಅಂದು ನನಗೂ ರೇಣುಕಾಸ್ವಾಮಿಯ ಸ್ಥಿತಿಯೇ ಆಗುತ್ತಿತ್ತೇನೋ ಎಂದಿದ್ದಾರೆ.
ನಟ ದರ್ಶನ್ ಬಚಾವ್ ಮಾಡಲು ಯಾರೂ ಯತ್ನಿಸಿಲ್ಲ: ಗೃಹ ಸಚಿವ ಪರಮೇಶ್ವರ್
ಈ ಜೀವ ಬೆದರಿಕೆ ಬಗ್ಗೆ ಕೆಂಗೇರಿ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ನಾನು ದರ್ಶನ್ ಗ್ಯಾಂಗ್‌ನಿಂದ ಜೀವ ಭೀತಿ ಎದುರಿಸುತ್ತಿದ್ದೇನೆ. ಈ ಹತ್ಯೆ ಸಂಗತಿ ಬೆಳಕಿಗೆ ಬಂದ ನಂತರ ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಭರತ್ ಹೇಳಿದ್ದಾರೆ.