ನಟ ದರ್ಶನ್ ಬಚಾವ್ ಮಾಡಲು ಯಾರೂ ಯತ್ನಿಸಿಲ್ಲ: ಗೃಹ ಸಚಿವ ಪರಮೇಶ್ವರ್
ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರನ್ನು ಪ್ರಕರಣದಿಂದ ಬಚಾವ್ ಮಾಡಲು ಯಾರೂ ಪ್ರಯತ್ನ ಮಾಡಿಲ್ಲ. ಪೊಲೀಸರು ಮುಕ್ತವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು (ಜೂ.13): ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರನ್ನು ಪ್ರಕರಣದಿಂದ ಬಚಾವ್ ಮಾಡಲು ಯಾರೂ ಪ್ರಯತ್ನ ಮಾಡಿಲ್ಲ. ಪೊಲೀಸರು ಮುಕ್ತವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಕೊಲೆ ಪ್ರಕರಣದಿಂದ ಬಚಾವ್ ಮಾಡಲು ಪ್ರಭಾವಿ ರಾಜಕಾರಣಿ ಪ್ರಯತ್ನ ಮಾಡಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಗೊತ್ತಿರುವಂತೆ ಯಾರೂ ಪ್ರಯತ್ನ ಮಾಡಿಲ್ಲ. ಕಾನೂನಿನಲ್ಲಿ ಏನೆಲ್ಲ ಕ್ರಮ ತೆಗೆದುಕೊಳ್ಳಲು ಅವಕಾಶವಿದೆಯೋ ಅದನ್ನು ಪೊಲೀಸರು ಮಾಡುತ್ತಾರೆ.
ಇದರಲ್ಲಿ ಸರ್ಕಾರದಿಂದ ಯಾರೂ ಮಧ್ಯ ಪ್ರವೇಶಿಸುವುದಿಲ್ಲ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಕಾನೂನು ಒಂದೇ. ನಟ ದರ್ಶನ್‌ಗೂ, ಪರಮೇಶ್ವರ್‌ಗೂ ಒಂದೇ ಕಾನೂನು. ಯಾರು ಸಹ ಕಾನೂನು ಕೈಗೆತ್ತಿಕೊಳ್ಳಬಾರದು. ನಟ ದರ್ಶನ್ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ. ತನಿಖೆಯಲ್ಲಿ ಬರುವ ಅಂಶಗಳನ್ನು ಆಧರಿಸಿ ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ನಾಲ್ವರಿಗೆ ₹30 ಲಕ್ಷ ಡೀಲ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಲನಚಿತ್ರ ರಂಗದ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಹೆಸರು ಹೇಳದೆ ಪೊಲೀಸರಿಗೆ ಶರಣಾಗುವಂತೆ ಆ ನಟನ ಅಭಿಮಾನಿಗಳ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಸೇರಿ ನಾಲ್ವರಿಗೆ 30 ಲಕ್ಷ ರು. ನೀಡಲು ದರ್ಶನ್ ಪ್ರಿಯತಮೆ ಹಾಗೂ ನಟನ ಆಪ್ತರು ಡೀಲ್ ನಡೆಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. ಈ ಹತ್ಯೆ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಮುಂದೆ ಸೋಮವಾರ ರಾತ್ರಿ ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ಗಿರಿನಗರ ಸಮೀಪದ ಚಾಮುಂಡಿ ನಗರದ ಕಾರ್ತಿಕ್ ಅಲಿಯಾಸ್ ಕಪ್ಪೆ, ಹೀರಣ್ಣನ ಗುಡ್ಡದ ಕೇಶವಮೂರ್ತಿ ಹಾಗೂ ಬನ್ನೇರುಘಟ್ಟ ರಸ್ತೆಯ ಕೆಂಬತ್ತನಹಳ್ಳಿಯ ನಿಖಿಲ್ ನಾಯಕ್ ಶರಣಾಗಿದ್ದರು.
ಹೊಡೆದು ಕೊಂದ ದರ್ಶನ್ ಗ್ಯಾಂಗ್‌ನಲ್ಲಿ ಇನ್ನೂ ನಾಲ್ವರು ನಾಪತ್ತೆ: ತೀವ್ರ ತಲಾಶ್
ಬಳಿಕ ವಿಚಾರಣೆ ನಡೆಸಿದಾಗ ಈ ನಾಲ್ವರ ಪೈಕಿ ಕೇಶವಮೂರ್ತಿ ಮತ್ತು ನಿಖಿಲ್‌ಗೆ ತಲಾ 5 ಲಕ್ಷ ರು. ನಂತೆ 10 ಲಕ್ಷ ರು. ಹಣವನ್ನು ಕೊಟ್ಟಿದ್ದ ದರ್ಶನ್ ಆಪ್ತ ದೀಪಕ್, ಇನ್ನುಳಿದ ಇಬ್ಬರಿಗೆ ಜೈಲಿಗೆ ಹೋದ ನಂತರ ಹಣ ಕೊಡುವುದಾಗಿ ಹೇಳಿದ್ದ. ಈ ನಾಲ್ವರ ವಿಚಾರಣೆ ಬಳಿಕ 30 ಲಕ್ಷ ರು. ಡೀಲ್ ಬಗ್ಗೆ ಮಾಹಿತಿ ಸಿಕ್ಕಿತು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ಇಬ್ಬರು ಆರೋಪಿಗಳಿಗೆ ದರ್ಶನ್ ಆಪ್ತರಿಂದ 10 ಲಕ್ಷ ರು. ಸಂದಾಯವಾಗಿರುವ ವಿಚಾರವನ್ನು ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಿದ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಉಲ್ಲೇಖಿಸಿದ್ದಾರೆ. ಆರೋಪಿಗಳಿಂದ ಬುಧವಾರ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.