ಸವಣೂರಿನಲ್ಲಿ ನಡೆದ ಬೇಡ ಜಂಗಮ ಸಮಾಜದ ದಶಮಾನೋತ್ಸವದಲ್ಲಿ ಶಾಸಕ ಯಾಸೀರಅಹ್ಮದಖಾನ್ ಪಠಾಣ್ ಜಂಗಮ ಸಮಾಜದ ಸಭಾಭವನ ನಿರ್ಮಾಣಕ್ಕೆ ₹೧ ಕೋಟಿ ಅನುದಾನ ನೀಡುವ ಭರವಸೆ ನೀಡಿದರು. ಜಂಗಮ ಸಮಾಜದ ಸಾಧಕರಿಗೆ ಸನ್ಮಾನಿಸಲಾಯಿತು.
ಸವಣೂರು (ಜುಲೈ.21): ಜಂಗಮ ಸಮಾಜದ ಸಭಾಭವನ ನಿರ್ಮಾಣಕ್ಕೆ ₹೧ ಕೋಟಿ ಅನುದಾನ ನೀಡುತ್ತೇನೆ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಭರವಸೆ ನೀಡಿದರು.
ಪಟ್ಟಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಬೇಡ ಜಂಗಮ ಸಮಾಜದ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಓರ್ವ ಜಂಗಮ ನೂರು ಜನರಿಗೆ ಸಮ, ನನ್ನ ಕ್ಷೇತ್ರದಲ್ಲಿ ಇಂತಹ ಜಂಗಮರ ಋಣ ನನ್ನ ಮೇಲಿದೆ. ಜಂಗಮ ಸಮಾಜ ಬಾಂಧವರು ಹೆಚ್ಚಿನ ಮತಗಳನ್ನು ನೀಡುವ ಮೂಲಕ ಶಾಸಕನನ್ನಾಗಿ ಆಯ್ಕೆ ಮಾಡಿದ ಸಮಾಜದ ಋಣ ನನ್ನ ಮೇಲಿದೆ. ಅದನ್ನು ತೀರಿಸಲು ಕ್ಷೇತ್ರದ ಎಲ್ಲ ಮಠ-ಮಾನ್ಯಗಳ ಅಭಿವೃದ್ಧಿಗೆ ಅನುದಾನ ಹೆಚ್ಚಿನ ಪ್ರಮಾಣದಲ್ಲಿ ನೀಡುವ ಮೂಲಕ ಋಣ ತೀರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಠಗಳ ಪರಂಪರೆಯ ನೆರಳಿನಲ್ಲಿ ಬೆಳೆದು ಸೇವೆ ಮಾಡಿಕೊಂಡು ಬಂದಂತಹ ವ್ಯಕ್ತಿ ನಾನು. ಜಂಗಮರ ಜನಸಂಖ್ಯೆ ಹೆಚ್ಚಾದಂತೆ ದೈವಭಕ್ತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತದೆ. ಆದ್ದರಿಂದ, ಜಂಗಮರ ಜನಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗಬೇಕಿದೆ. ಮಠಗಳು ಹೆಚ್ಚಾದಂತೆ ಸಂಸ್ಕಾರ ಬೆಳೆಸಿದಂತೆ. ಬಸವಾದಿ ಶರಣರ ನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಜೀವನ ಸಾರ್ಥಕತೆ ಕಾಣಲು ಸಾಧ್ಯ ಎಂದು ತಿಳಿಸಿದರು.
ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಜೀವಮಾನ ಸಾಧನೆಯ ಸುವರ್ಣ ಕನ್ನಡಿಗ-2025ರ ಪ್ರಶಸ್ತಿ ಪುರಸ್ಕೃತ ಹಾಗೂ ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಮಾತನಾಡಿ, ಧೂಮಪಾನ, ಮದ್ಯಪಾನ ದುಶ್ಚಟಗಳ ದಾಸರಾಗುತ್ತಿರುವುದರಿಂದ ಸಮಾಜ ಅಡ್ಡ ದಾರಿಯಿಂದ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದುಶ್ಚಟಗಳ ದಾರಿ ಹಿಡಿದರೇ ನಮ್ಮ ವ್ಯಕ್ತಿತ್ವಕ್ಕೆ ಅಲ್ಲದೆ ನಮಗೆ ಸಂಸ್ಕಾರ ನೀಡಿದ ವ್ಯಕ್ತಿಗಳ ಹೆಸರಿಗೆ ಧಕ್ಕೆ ಬರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಉತ್ತಮ ವ್ಯಕ್ತಿಗಳಾಗಿ ಸಮಾಜವನ್ನು ಆದರ್ಶವನ್ನಾಗಿ ಮಾಡಬೇಕು. ದುಶ್ಚಟಗಳಿಂದ ದುರುಳಿದುಕೊಂಡಾಗ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ. ಸಾಧನೆ ಮಾಡಿದ ವ್ಯಕ್ತಿಯನ್ನು ಸಮಾಜ ಗುರುತಿಸುತ್ತದೆ. ಸಮಾಜ ಗುರುತಿಸುವಂತ ಕೆಲಸವನ್ನು ಪರಿಶ್ರಮಪಟ್ಟಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿ, ಜಂಗಮ ಸಮಾಜ ಸುಧಾರಕ, ಕೊಳೆಯನ್ನು ತೊಳೆಯುವ ಶಿವ ಸ್ವರೂಪಿಯಾಗಿದ್ದಾರೆ. ಶಿವಸ್ವರೂಪಿಯಾದ ಜಂಗಮ, ಶಿವನಿತ್ತ ಜೋಳಿಗೆಯಲ್ಲಿ ಸಮಾಜದ ಕೆಟ್ಟದ್ದನ್ನು ಹಾಕಿಸಿಕೊಳ್ಳುತ್ತ, ಶಿವನಿತ್ತ ಬೆತ್ತದಿಂದ ಸಮಾಜದಲ್ಲಿರುವ ಕೆಟ್ಟದ್ದನ್ನು ಹೊಡೆದೊಡಿಸುವನು. ಹೀಗಾಗಿ ಜಂಗಮರನ್ನು ಎದುರು ಹಾಕಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದು ಗುಡುಗಿದರು.
೨೦೧೭ರಲ್ಲಿ ಎಚ್.ಆಂಜನೇಯವರು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಸಂದರ್ಭದಲ್ಲಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದಿದ್ದ ವಿದ್ಯಾರ್ಥಿ ಚೇತನ ಹಿರೇಮಠಗೆ ವಿದೇಶದಲ್ಲಿ ಶಿಕ್ಷಣ ಪಡೆಯುವುದಕ್ಕಾಗಿ ಸರ್ಕಾರದಿಂದ ₹೪೮ ಲಕ್ಷ ಶಿಷ್ಯ ವೇತನ ನೀಡಿದ್ದರು. ಯಾವ ಆಧಾರದ ಮೇಲೆ ಹಣ ನೀಡಿದ್ದೀರಿ?. ನಾವು ಬೇಡ ಜಂಗಮರು ಅಲ್ಲ ಎನ್ನುವಂತದ್ದನ್ನು ಯಾವ ರೀತಿಯಲ್ಲಿ ಸಾಬೀತು ಮಾಡುತ್ತೀರಿ?. ನಾವೂ ನೋಡುತ್ತೇವೆ ಎಂದು ಮಾಜಿ ಸಚಿವರಿಗೆ ಬಹಿರಂಗ ಸವಾಲು ಹಾಕಿದರು.
ಕಾರ್ಯಕ್ರಮದಲ್ಲಿ ಜಂಗಮ ಸಮಾಜದ ಸಾಧಕರಿಗೆ ಬೇಡ ಜಂಗಮ ಸೇವಾ ಸಂಸ್ಥೆಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಬೇಡ ಜಂಗಮ ಸಮಾಜದ ಕಾರ್ಯದರ್ಶಿ ಶಂಕ್ರಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೇಡ ಜಂಗಮ ಸಮಾಜ ಸೇವಾ ಸಂಸ್ಥೆ ತಾಲೂಕು ಅಧ್ಯಕ್ಷ ಚಂದ್ರಶೇಖರಯ್ಯ ಗುಂಡೂರಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೀದರ ಜಿಲ್ಲೆಯ ಸರಿಗಮಪ ಸೀಸನ್-೨೧ ವಿಜೇತೆ ಶಿವಾನಿ ಶಿವದಾಸಸ್ವಾಮಿ ಹಾಗೂ ಕುಟುಂಬಸ್ಥರಿಂದ ಸಂಗೀತ ಸೇವೆ ಜರುಗಿತು.
ಬೇಡ ಜಂಗಮ ಸಮಾಜ ಸೇವಾ ಸಂಸ್ಥೆ ತಾಲೂಕು ನಿಕಟಪೂರ್ವ ಅಧ್ಯಕ್ಷ ಗುರುಶಾಂತಯ್ಯ ಹಿರೇಮಠ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠ, ಪ್ರಮುಖರಾದ ನಂದೀಶ ಕಂಬಾಳಿಮಠ, ಉಮೇಶ ಕಲ್ಮಠ, ಶಿವಕುಮಾರಸ್ವಾಮಿ ಅಡವಿಸ್ವಾಮಿಮಠ ಸೇರಿದಂತೆ ಜಂಗಮ ಸಮಾಜ ಬಾಂಧವರು ಇದ್ದರು.
ಜಂಗಮ ಸಮಾಜ ಮನಸು ಮಾಡಿದರೇ ಏನನ್ನಾದರೂ ಸಾಧಿಸಲು ಸಾಧ್ಯ. ಅದಕ್ಕೆ ಉತ್ತಮ ಉದಾಹರಣೆ ನನ್ನ ಚುನಾವಣೆ ಸಾಕ್ಷಿ. ಜಂಗಮ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಅಭಿವೃದ್ಧಿಯನ್ನು ಹೊಂದಲು ಅವಕಾಶ ಸಿಕ್ಕ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಅವಕಾಶ ನೀಡಿ ಬೆನ್ನೆಲುಬಾಗಿ ನಿಲ್ಲುವಂತ ಕೆಲಸ ಮಾಡುತ್ತೇನೆ.
-ಯಾಸೀರ ಅಹ್ಮದಖಾನ್ ಪಠಾಣ, ಶಾಸಕರು.
ಇತಿಹಾಸ ಓದಿದರೇ ಸಾಲದು, ಇತಿಹಾಸ ಸೃಷ್ಟಿಸುವಂತ ವ್ಯಕ್ತಿಗಳಾಗಿ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು. ಮಕ್ಕಳಿಗೆ ಆಸ್ತಿಯನ್ನು ಮಾಡದೇ ಉನ್ನತವಾದ ಶಿಕ್ಷಣ ನೀಡುವ ಮೂಲಕ ಅವರನ್ನೇ ಆಸ್ತಿಯನ್ನಾಗಿ ಮಾಡಿ ಸಮಾಜಕ್ಕೆ ಕೊಡುಗೆ ನೀಡಲು ಪಾಲಕರು ಮುಂದಾಗಬೇಕು.
-ಎಸ್.ಬಿ.ವಸ್ತ್ರಮಠ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಜೀವಮಾನ ಸಾಧನೆಯ ಸುವರ್ಣ ಕನ್ನಡಿಗ-2025ರ ಪ್ರಶಸ್ತಿ ಪುರಸ್ಕೃತರು
