ಕುಖ್ಯಾತ ರೌಡಿ ಸೈಲೆಂಟ್‌ ಸುನೀಲ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು, ಸಂಸದರು ಸೇರಿದಂತೆ ಪಕ್ಷದ ಮುಖಂಡರಿಂದ ವಿವರಣೆ ಕೇಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಬೆಂಗಳೂರು (ನ.30) ಕುಖ್ಯಾತ ರೌಡಿ ಸೈಲೆಂಟ್‌ ಸುನೀಲ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು, ಸಂಸದರು ಸೇರಿದಂತೆ ಪಕ್ಷದ ಮುಖಂಡರಿಂದ ವಿವರಣೆ ಕೇಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದ್ದಾರೆ. ಅಲ್ಲದೆ, ಯಾವುದೇ ಕಾರಣಕ್ಕೂ ಸೈಲೆಂಟ್‌ ಸುನೀಲ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದೂ ಸ್ಪಷ್ಟಹೇಳಿಕೆ ನೀಡಿದ್ದಾರೆ.

‘ಸೈಲೆಂಟ್‌ ಸುನೀಲ… ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಕೆಲವು ಪ್ರಮುಖರು ಭಾಗವಹಿಸಿದ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖಂಡರಿಂದ ವಿವರಣೆ ಕೇಳಲಾಗುವುದು’ ಎಂದು ಕಟೀಲ್‌ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಗುರಾಯಿಸಿದ ರೌಡಿ ಸೈಲೆಂಟ್ ಸುನೀಲನಿಗೆ ದಬಾಯಿಸಿದ ಆಲೋಕ್ ಕುಮಾರ್

ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್‌, ಶಾಸಕ ಉದಯ್‌ ಗರುಡಾಚಾರ್‌, ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಮತ್ತಿತರ ಬಿಜೆಪಿ ಮುಖಂಡರು ಆ ಸಮಾರಂಭದಲ್ಲಿ ಪಾಲ್ಗೊಂಡಿರುವ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್‌ ಟೀಕೆ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ಪಕ್ಷದ ಪಾಳೆಯದಲ್ಲೂ ಈ ಬಗ್ಗೆ ತೀವ್ರ ಆಕ್ಷೇಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಳಿನ್‌ಕುಮಾರ್‌ ಕಟೀಲ್‌ ಅವರು ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪಕ್ಷದ ಪ್ರಮುಖರು ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಆಗದಂತೆ ನೋಡಿಕೊಳ್ಳಬೇಕು. ಎಲ್ಲ ವಿಚಾರಗಳನ್ನು ಪಕ್ಷದ ಗಮನಕ್ಕೆ ತರಬೇಕು. ಬಿಜೆಪಿ ವ್ಯಕ್ತಿಗಳ ನಿರ್ಮಾಣದ ಮೂಲಕ ದೇಶ ನಿರ್ಮಾಣದ ಕಾರ್ಯ ಮಾಡುತ್ತಿದೆ. ಉಗ್ರಗಾಮಿಗಳು, ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ಕೊಡುವವರು ಮತ್ತು ಅಪರಾಧ ಹಿನ್ನೆಲೆ ಉಳ್ಳವರನ್ನು ಪಕ್ಷ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ರೌಡಿಶೀಟರ್‍‌ ಸೇರ್ಪಡೆ ಬಗ್ಗೆ ಅಶ್ವತ್ಥನಾರಾಯಣ ಸಮರ್ಥನೆ

ಸೈಲೆಂಟ್‌ ಸುನೀಲ, ರೌಡಿಗಳನ್ನು ಸೇರಿಸಿಕೊಳ್ಳಲ್ಲ: ಸಿಎಂ

ನಮ್ಮ ಪಕ್ಷ ಯಾವುದೇ ರೌಡಿ ಶೀಟರ್‌ಗಳಿಗೆ ಮನ್ನಣೆ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪಕ್ಷದ ಅಧ್ಯಕ್ಷರು ಈಗಾಗಲೇ ತಿಳಿಸಿರುವಂತೆ ಸೈಲೆಂಟ್‌ ಸುನೀಲ್‌ರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ರೌಡಿ ಶೀಟರ್‌ಗಳನ್ನು ಸಹಿಸುವುದಿಲ್ಲ ಎಂದು ಮಂಗಳವಾರ ಸಂಜೆ ಟ್ವೀಟ್‌ ಮಾಡಿದ್ದಾರೆ.